ಬಿಬಿಎಂಪಿ ಚುನಾವಣೆ ಮುಂದೂಡಲು ಮತ್ತೆ ಷಡ್ಯಂತ್ರ

Social Share

ಬೆಂಗಳೂರು,ಅ.1- ವರ್ಷಾಂತ್ಯದೊಳಗೆ ಬಿಬಿಎಂಪಿಗೆ ಚುನಾವಣೆ ನಡೆಸುವಂತೆ ಹೈಕೋರ್ಟ್ ನೀಡಿರುವ ತೀರ್ಪು, ನಗರದ ಕೆಲ ಶಾಸಕರು ಹಾಗೂ ಸಂಸದರ ನಿದ್ದೆಗೆಡಿಸಿದೆ. ಶಥಾಯಗಥಾಯ ಬಿಬಿಎಂಪಿಗೆ ಈ ವರ್ಷದೊಳಗೆ ಚುನಾವಣೆ ನಡೆಸಲು ಅವಕಾಶ ನೀಡಲೇಬಾರದೆಂದು ಪಟ್ಟು ಹಿಡಿದಿರುವ ನಗರ ಪ್ರತಿನಿಧಿಸುವ ಶಾಸಕರು ಇಂದು ಖಾಸಗಿ ಹೋಟೆಲ್‍ನಲ್ಲಿ ಸಭೆ ನಡೆಸಲು ತೀರ್ಮಾನಿಸಿದ್ದಾರೆ ಎಂದು ಉನ್ನತ ಮೂಲಗಳು ಈಸಂಜೆ ಗೆ ತಿಳಿಸಿವೆ.

ಬಿಜೆಪಿ ಹಾಗೂ ಕಾಂಗ್ರೆಸ್‍ನ ಹಲವಾರು ಶಾಸಕರು ಇಂದು ಸಭೆ ಸೇರಿ ವರ್ಷಾಂತ್ಯದೊಳಗೆ ನಡೆಸಲು ಆದೇಶಿಸಿರುವ ಹೈಕೋರ್ಟ್ ತೀರ್ಪಿನ ಬಗ್ಗೆ ಪರಾಮರ್ಶೆ ನಡೆಸಿ ಚುನಾವಣೆ ಮುಂದೂಡಿಕೆ ಕುರಿತಂತೆ ಮಾತುಕತೆ ನಡೆಸಲಿದ್ದಾರೆ. ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾಯಮೂರ್ತಿ ಹೇಮಂತ್ ಚಂದನ ಗೌಡರ್ ನೀಡಿರುವ ತೀರ್ಪನ್ನು ಪ್ರಶ್ನಿಸಿ ದ್ವಿಸದಸ್ಯ ಪೀಠದ ಮೊರೆ ಹೋಗುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.

ಒಬಿಸಿ ಮಾನದಂಡದ ಮೇಲೆ ಸಮರ್ಪಕವಾಗಿ ಮೀಸಲಾತಿ ಕಲ್ಪಿಸಲು 16 ವಾರಗಳ ಅವಕಾಶ ನೀಡುವಂತೆ ಸರ್ಕಾರ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿತ್ತು. ಆದರೆ ಅವರ ವಾದವನ್ನು ಒಪ್ಪದ ನ್ಯಾಯ ಮೂರ್ತಿ ಹೇಮಂತ್ ಚಂದನ ಗೌಡರ್ ಅವರು ಬರುವ ನ.30ರೊಳಗೆ ಹೊಸ ಮೀಸಲಾತಿ ಪಟ್ಟಿ ಪ್ರಕಟಿಸಿ ಡಿ.31ರೊಳಗೆ ಬಿಬಿಎಂಪಿಗೆ ಚುನಾವಣೆ ನಡೆಸುವಂತೆ ಆದೇಶಿಸಿತ್ತು.

ನಮ್ಮ ಪರವೇ ತೀರ್ಪು ಬರಲಿದೆ. ಇನ್ನು ಒಂದು ವರ್ಷ ಬಿಬಿಎಂಪಿಗೆ ಚುನಾವಣೆ ನಡೆಸುವುದರಿಂದ ಬಚಾವಾಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಕೆಲವರಿಗೆ ಹೈಕೋರ್ಟ್ ತೀರ್ಪು ನಿದ್ದೆಗೆಡಿಸಿದೆ. ಹೀಗಾಗಿ ಈ ತೀರ್ಪನ್ನು ದ್ವಿಸದಸ್ಯ ಪೀಠದಲ್ಲಿ ಪ್ರಶ್ನಿಸಿದರೆ ಮತ್ತೆ ಕಾಲವಕಾಶ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಮತ್ತೆ ಕಾನೂನು ಹೋರಾಟಕ್ಕೆ ಮುಂದಾಗಲು ಕೆಲವರು ನಿರ್ಧರಿಸಿದ್ದಾರೆ.

ಕಳೆದ 2 ವರ್ಷಗಳಿಂದ ಬಿಬಿಎಂಪಿಗೆ ಚುನಾವಣೆ ನಡೆಯದಿರುವುದರಿಂದ ನಗರ ಹಲವಾರು ಸಮಸ್ಯೆಗಳಿಗೆ ತುತ್ತಾಗಿದೆ. ಆಧಿಕಾರಿಗಳು ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇಂತಹ ಸನ್ನಿವೇಶ ಇದ್ದರೂ ಬಿಬಿಎಂಪಿಗೆ ಚುನಾವಣೆ ನಡೆಸಲು ಹಿಂದೇಟು ಹಾಕುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಸರ್ಕಾರವನ್ನು ಪ್ರತಿನಿಧಿಸುತ್ತಿರುವ ನಗರದ ಕೆಲ ಸಚಿವರು ನಾವು ಬಿಬಿಎಂಪಿ ಚುನಾವಣೆ ನಡೆಸುವುದಕ್ಕೆ ಹಿಂಜರಿಯುತ್ತಿಲ್ಲ. ನ್ಯಾಯಾಲಯದ ಆದೇಶದಂತೆ ಚುನಾವಣೆ ನಡೆಸಲು ಸಿದ್ದ ಎಂದು ಘೋಷಣೆ ಮಾಡುತ್ತಿದ್ದರೂ ಪರೋಕ್ಷವಾಗಿ ಕೆಲವರಿಗೆ ಮತ್ತೆ ಬಿಬಿಎಂಪಿ ಚುನಾವಣೆಯನ್ನು ಮುಂದೂಡಿಸಲು ಸಹಕಾರ ನೀಡುತ್ತಿರುವುದು ಅವರ ಇಬ್ಬಗೆ ನೀತಿಗೆ ಹಿಡಿದ ಕೈಗನ್ನಡಿಯಾಗಿದೆ.

ಜನರ ಗೋಳು ಕೇಳೋರ್ಯಾರು: ಕೆಲ ದಿನಗಳ ಹಿಂದೆ ಸುರಿದ ರಣ ಮಳೆಗೆ ಇಡೀ ಬೆಂಗಳೂರು ತತ್ತರಿಸಿಹೋಗಿತ್ತು. ರಸ್ತೆಗಳು ಚರಂಡಿಗಳಾಗಿ ಪರಿವರ್ತನೆಯಾಗಿದ್ದವು. ಮನೆಗಳು, ಆಪಾರ್ಟ್‍ಮೆಂಟ್‍ಗಳು ಹಾಗೂ ವಿಲ್ಲಾಗಳಿಗೆ ನೀರು ನುಗ್ಗಿ ಕೋಟ್ಯಂತರ ರೂ. ನಷ್ಟ ಸಂಭವಿಸಿತ್ತು. ಭವಿಷ್ಯದಲ್ಲಿ ಎಂದೂ ಕಾಣದ ಇಂತಹ ಅನಾಹುತಕ್ಕೆ ಸ್ಥಳೀಯ ಜನಪ್ರತಿನಿಗಳು ಇಲ್ಲದಿರುವುದೇ ಕಾರಣ ಎಂಬ ಸತ್ಯ ಎಲ್ಲರಿಗೂ ಗೊತ್ತು.

ಸ್ಥಳೀಯ ಸಮಸ್ಯೆ ಬಗೆಹರಿಸುವ ಗೋಜಿಗೆ ಶಾಸಕರು ಹೋಗೊದಿಲ್ಲ. ಜನರ ಸಮಸ್ಯೆ ಆಲಿಸೋದು ಕೇವಲ ಕೌನ್ಸಿಲರ್ಸ್ ಮಾತ್ರ. ಹಾಳಾಗಿರುವ ರಸ್ತೆಗುಂಡಿಗಳನ್ನು ಮುಚ್ಚಿಸುವುದು. ರಾಜಕಾಲುವೆಗಳ ಹೂಳೆತ್ತಿಸುವುದು ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಸ್ಪಂದಿಸುವ ಗುಣ ಅವರಲ್ಲಿತ್ತು. ಮಳೆ ಅನಾಹುತ ಸಂಭವಿಸಿದಾಗ ಸಂತ್ರಸ್ಥರ ಕಣ್ಣಿರು ಒರೆಸುವುದಕ್ಕಾದರೂ ಬಿಬಿಎಂಪಿ ಸದಸ್ಯರು ಇರುತ್ತಿದ್ದರು. ಆದರೆ, ಕಳೆದ ಎರಡು ವರ್ಷಗಳಿಂದ ಬಿಬಿಎಂಪಿ ಚುನಾವಣೆ ನಡೆಯದಿರುವುದರಿಂದ ಸ್ಥಳೀಯ ಜನರ ಗೋಳು ಕೇಳೋರ್ಯಾರು ಎಂಬಂತಾಗಿದೆ.

ವಿಪಕ್ಷದವರು ಸಾಥ್: ಬಿಬಿಎಂಪಿ ಚುನಾವಣೆ ಮುಂದೂಡುವುದು ಕೇವಲ ಆಡಳಿತ ಪಕ್ಷದ ಶಾಸಕರಿಗಲ್ಲದೆ ವಿಪಕ್ಷದಲ್ಲಿರುವ ಶಾಸಕರುಗಳಿಗೂ ಬೇಡವಾಗಿದೆ. ಹೀಗಾಗಿ ಚುನಾವಣೆ ಮುಂದೂಡಿಸಲು ನಡೆಸುತ್ತಿರುವ ಹುನ್ನಾರದ ಬಗ್ಗೆ ಯಾರೂ ಚಕಾರವೆತ್ತದೆ ತೆಪ್ಪಗಾಗಿದ್ದಾರೆ.

ವಿಧಾನಸಭೆ ಚುನಾವಣೆಗೆ ಕೇವಲ ಆರೇಳು ತಿಂಗಳು ಮಾತ್ರ ಬಾಕಿ ಇರುವ ಸಂದರ್ಭದಲ್ಲಿ ಬಿಬಿಎಂಪಿ ಚುನಾವಣೆ ನಡೆಸಿದರೆ ಟಿಕೆಟ್ ಸಿಗದ ಹಲವಾರು ಸ್ಥಳೀಯ ನಾಯಕರುಗಳು ನಮ್ಮ ಚುನಾವಣೆಯಲ್ಲಿ ಉಲ್ಟಾ ಹೊಡೆಯುವ ಸಾಧ್ಯತೆಗಳಿವೆ ಎಂಬ ಭೀತಿಯಿಂದ ಯಾವ ಶಾಸಕರಿಗೂ ಸಧ್ಯ ಬಿಬಿಎಂಪಿಗೆ ಚುನಾವಣೆ ನಡೆಯುವುದು ಬೇಕಾಗಿಲ್ಲವಂತೆ.

Articles You Might Like

Share This Article