BIG NEWS : ಅಂತೂ ಇಂತು ಬಿಬಿಎಂಪಿ ಚುನಾವಣೆಗೆ ಮುಹೂರ್ತ ಫಿಕ್ಸ್..!

ಬೆಂಗಳೂರು, ಮೇ 20- ಅಂತೂ ಇಂತು ಬಿಬಿಎಂಪಿ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ. ವಾರ್ಡ್ ಪುನರ್ವಿಂಗಡಣೆ ಹಾಗೂ ಒಬಿಸಿ ಸೇರಿದಂತೆ ಎಲ್ಲ ರೀತಿಯ ಮೀಸಲಾತಿ ಪ್ರಕ್ರಿಯೆಗಳನ್ನು ಎಂಟು ವಾರಗಳೊಳಗೆ ಪೂರ್ಣಗೊಳಿಸಬೇಕು. ಕಳೆದ ಒಂದೂವರೆ ವರ್ಷದಿಂದ ಚುನಾವಣೆ ನಡೆಯದ ಬಿಬಿಎಂಪಿಗೆ ಕೂಡಲೇ ಚುನಾವಣೆ ನಡೆಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ಆದೇಶ ನೀಡಿದೆ.

ಮೂರು ತಿಂಗಳೊಳಗೆ ಬಿಬಿಎಂಪಿಗೆ ಚುನಾವಣೆ ನಡೆಸುವಂತೆ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿತ್ತು. ವಿಚಾರಣೆ ಆರಂಭಿಸಿದ್ದ ಸುಪ್ರೀಂಕೋರ್ಟ್, ಹೈಕೋರ್ಟ್ ತೀರ್ಪಿಗೆ ತಡೆಯಾಜ್ಞೆ ನೀಡಿ ವಿಚಾರಣೆಯನ್ನು ಮುಂದೂಡಿತ್ತು. ರಾಜ್ಯ ಸರ್ಕಾರದ ಈ ಧೋರಣೆ ಪ್ರಶ್ನಿಸಿ ಬಿಬಿಎಂಪಿ ಮಾಜಿ ಸದಸ್ಯರಾದ ಎಂ.ಶಿವರಾಜು, ಅಬ್ದುಲ್ ವಾಜಿದ್ ಮತ್ತಿತರರು ಮಧ್ಯಂತರ ಅರ್ಜಿ ಸಲ್ಲಿಸಿದ್ದರು.

ಎಲ್ಲ ಅರ್ಜಿಗಳನ್ನು ಒಗ್ಗೂಡಿಸಿ ಸುಪ್ರೀಂಕೋರ್ಟ್ ವಿಚಾರಣೆ ಆರಂಭಿಸಿದ್ದರೂ ತಾಂತ್ರಿಕ ಕಾರಣಗಳಿಂದ ವಿಚಾರಣೆ ಹಲವಾರು ಬಾರಿ ಮುಂದೂಡಲ್ಪಟ್ಟಿತ್ತು. ಬಿಬಿಎಂಪಿ ಚುನಾವಣೆ ವಿಚಾರವನ್ನು ಇಂದು ಕೈಗೆತ್ತಿಕೊಂಡ ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಹಾಗೂ ಜೆ.ಬಿ.ಪರ್ದಿವಾಲಾ ಅವರನ್ನೊಳಗೊಂಡ ವಿಭಾಗೀಯ ಪೀಠ ಎಂಟು ವಾರದೊಳಗೆ ವಾರ್ಡ್ ಪುನರ್ವಿಂಗಡಣೆ ಹಾಗೂ ಮೀಸಲಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಕರ್ನಾಟಕ ಮುನ್ಸಿಪಲ್ ಕಾಪೆರ್ರೇಷನ್ ತಿದ್ದುಪಡಿ ಕಾಯ್ದೆಯನುಸಾರ ರಾಜ್ಯ ಸರ್ಕಾರ ವಾರ್ಡ್ ಪುನರ್ವಿಂಗಡಣೆಗಾಗಿ ರಚಿಸಲಾಗಿರುವ ಭಕ್ತವತ್ಸಲಂ ನೇತೃತ್ವದ ಆಯೋಗ ಎಲ್ಲ ಡಿ ಲಿಮಿಟೇಷನ್ ಪ್ರಕ್ರಿಯೆಗಳನ್ನೂ ಎಂಟು ವಾರದೊಳಗೆ ಪೂರ್ಣಗೊಳಿಸಬೇಕು ಹಾಗೂ ಪ್ರಕ್ರಿಯೆ ಪೂರ್ಣಗೊಂಡ ಕೂಡಲೇ ರಾಜ್ಯ ಚುನಾವಣಾ ಆಯೋಗ ಚುನಾವಣಾ ಪ್ರಕ್ರಿಯೆ ಆರಂಭಿಸಬೇಕು ಎಂದು ಸುಪ್ರೀಂಕೋರ್ಟ್ ಕಟ್ಟುನಿಟ್ಟಿನ ಸೂಚನೆ ನೀಡಿರುವುದರಿಂದ ಬಿಬಿಎಂಪಿಗೆ ಸೆಪ್ಟೆಂಬರ್ ವೇಳೆಗೆ ಚುನಾವಣೆ ನಡೆಯುವ ಸಾಧ್ಯತೆಗಳಿವೆ.

ಮಧ್ಯ ಪ್ರದೇಶ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ದಿನಗಳ ಹಿಂದೆ ಸುಪ್ರೀಂಕೋರ್ಟ್ ಸ್ಥಳೀಯ ಸಂಸ್ಥೆಗಳ ಅವ ಮುಗಿದ ಕೂಡಲೇ ಚುನಾವಣೆ ನಡೆಸಬೇಕು. ವಾರ್ಡ್ ಪುನರ್ವಿಂಗಡಣೆ ಮತ್ತಿತರ ನೆಪದಿಂದ ಚುನಾವಣೆ ಮುಂದೂಡಬಾರದು. ಹೀಗಾಗಿ ಖಾಲಿ ಇರುವ ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಕೂಡಲೇ ಚುನಾವಣೆ ನಡೆಸಬೇಕು. ನಮ್ಮ ಈ ತೀರ್ಪು ಇಡೀ ದೇಶಕ್ಕೇ ಅನ್ವಯಿಸಲಿದೆ ಎಂದು ಸರ್ವೋಚ್ಚ ನ್ಯಾಯಾಲಯದ ತ್ರಿಸದಸ್ಯ ಪೀಠ ಮಹತ್ವದ ಆದೇಶ ಹೊರಡಿಸಿತ್ತು.

ಈ ಆದೇಶವನ್ನು ಪ್ರಶ್ನಿಸಿ ಕಳೆದ ಮಂಗಳವಾರ ಮಧ್ಯ ಪ್ರದೇಶ ಸರ್ಕಾರ ಒಬಿಸಿ ಮೀಸಲಾತಿಗೆ ಅವಕಾಶ ನೀಡುವಂತೆ ಮನವಿ ಮಾಡಿಕೊಂಡಿತ್ತು. ಮಧ್ಯ ಪ್ರದೇಶ ಸರ್ಕಾರದ ಮನವಿಯನ್ನು ಪುರಸ್ಕರಿಸಿದ್ದ ತ್ರಿಸದಸ್ಯ ಪೀಠ ಶೇ.50ರಂತೆ ಒಬಿಸಿ ಮೀಸಲಾತಿ ನೀಡಿ ಚುನಾವಣೆ ಪ್ರಕ್ರಿಯೆ ನಡೆಸುವಂತೆ ಸೂಚಿಸಿತ್ತು.

ಸುಪ್ರೀಂಕೋರ್ಟ್‍ನ ತ್ರಿಸದಸ್ಯ ಪೀಠದ ಆದೇಶದ ಮೇರೆಗೆ ಇಂದು ಬಿಬಿಎಂಪಿ ಚುನಾವಣೆ ವಿಚಾರಣೆ ನಡೆಸುತ್ತಿದ್ದ ಖಾನ್ವಿಲ್ಕರ್ ನೇತೃತ್ವದ ಪೀಠದ ಮುಂದೆ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಕರ್ನಾಟಕ ಸರ್ಕಾರ ಒಬಿಸಿ ಮೀಸಲಾತಿ ಹಾಗೂ ವಾರ್ಡ್ ಪುನರ್ವಿಂಗಡಣೆ ಮಾಡಿಕೊಳ್ಳಲು ಕಾಲಾವಕಾಶ ನೀಡುವಂತೆ ಮನವಿ ಮಾಡಿಕೊಂಡಿದ್ದರು.

ಮೆಹ್ತಾ ಅವರ ಮನವಿಗೆ ಪೂರಕವಾಗಿ ಸ್ಪಂದಿಸಿರುವ ನ್ಯಾಯಪೀಠ ಎಂಟು ವಾರದೊಳಗೆ ವಾರ್ಡ್ ಪುನರ್ವಿಂಗಡಣೆ ಹಾಗೂ ಮೀಸಲಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಸೂಚಿಸಿತು. ನ್ಯಾಯಾಲಯದ ಈ ಆದೇಶವನ್ನು ಕರ್ನಾಟಕ ಸರ್ಕಾರ ಪಾಲನೆ ಮಾಡಲಿದೆ ಎಂದು ಇದೇ ಸಂದರ್ಭದಲ್ಲಿ ಮೆಹ್ತಾ ಅವರು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರು.

ಎಂಟು ವಾರದೊಳಗೆ ವಾರ್ಡ್ ಪುನರ್ವಿಂಗಡಣೆ ಪೂರ್ಣಗೊಂಡ ಕೂಡಲೇ ಸಾಂವಿಧಾನಿಕ ಸಂಸ್ಥೆಯಾಗಿರುವ ಚುನಾವಣಾ ಆಯೋಗ ಪರಿಸ್ಥಿತಿಯನ್ನು ಅವಲೋಕಿಸಿ ಬಳಿಕ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿರುವ ಸುಪ್ರೀಂಕೋರ್ಟ್, ವಿಚಾರಣೆಯನ್ನು ಜುಲೈ 22ಕ್ಕೆ ಮುಂದೂಡಿದೆ. ಸರ್ವೋಚ್ಚ ನ್ಯಾಯಾಲಯದ ಈ ಆದೇಶದ ನಂತರ ಕಳೆದ ಒಂದೂವರೆ ವರ್ಷದಿಂದ ಚುನಾವಣೆ ನಡೆಯದ ಬಿಬಿಎಂಪಿ ಎಲೆಕ್ಷನ್‍ಗೆ ಮುಹೂರ್ತ ಕೂಡಿಬಂದಂತಾಗಿದೆ.

# ಚುನಾವಣೆಗೆ ಸಿದ್ಧ:

ಬಿಬಿಎಂಪಿ ಚುನಾವಣೆ ಕುರಿತಂತೆ ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡುತ್ತಿದ್ದಂತೆ ಟ್ವಿಟ್ ಮಾಡಿರುವ ಕಂದಾಯ ಸಚಿವ ಆರ್.ಅಶೋಕ್ ಅವರು ಚುನಾವಣೆ ನಡೆಸಲು ನಮ್ಮ ಸರ್ಕಾರ ಸಿದ್ಧವಿದೆ ಎಂದಿದ್ದಾರೆ. ನ್ಯಾಯಾಲಯದ ತೀರ್ಪನ್ನು ಸ್ವಾಗತಿಸುತ್ತೇವೆ. ಬೆಂಗಳೂರು ಬಿಜೆಪಿಯ ಭದ್ರಕೋಟೆ. ಈಗಾಗಲೇ ಬೂತ್ ಮಟ್ಟದಲ್ಲಿ ನಮ್ಮ ಪಕ್ಷ ಸಂಘಟನೆ ಮಾಡಿರುವುದರಿಂದ ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ಶತಸಿದ್ಧ ಎಂದು ಹೇಳಿಕೊಂಡಿದ್ದಾರೆ.

# 243 ವಾರ್ಡ್‍ಗಳಿಗೆ ಚುನಾವಣೆ:

ಸುಪ್ರೀಂಕೋರ್ಟ್ ಮುಂದೆ ಹಾಜರಾಗಿದ್ದ ತುಷಾರ್ ಮೆಹ್ತಾ ಅವರು ಕರ್ನಾಟಕ ಸರ್ಕಾರ ಆಡಳಿತಾತ್ಮಕ ದೃಷ್ಟಿಯಿಂದ ಕೆಎಂಸಿ ಕಾಯ್ದೆಯನ್ನು ರದ್ದುಗೊಳಿಸಿ ಹೊಸ ಕಾಯ್ದೆ ಜಾರಿಗೆ ತಂದು 198 ವಾರ್ಡ್‍ಗಳನ್ನು 243 ವಾರ್ಡ್‍ಗಳನ್ನಾಗಿ ವಿಂಗಡಿಸಲು ಕ್ರಮ ಕೈಗೊಂಡಿದೆ. ಹೀಗಾಗಿ ಚುನಾವಣೆ ಮುಂದೂಡುವಿಕೆಗೆ ಅವಕಾಶ ನೀಡುವಂತೆ ಮನವಿ ಮಾಡಿಕೊಂಡರು.

ಆದರೆ ನ್ಯಾಯಪೀಠ ಎಂಟು ವಾರದೊಳಗೆ ವಾರ್ಡ್ ಪುನರ್ವಿಂಗಡಣೆ ಕಾರ್ಯ ಪೂರ್ಣಗೊಳಿಸಿಯೇ ಚುನಾವಣೆ ನಡೆಸುವಂತೆ ಆದೇಶಿಸಿರುವುದರಿಂದ ಬಿಬಿಎಂಪಿಯ ಹೊಸ ಕಾಯ್ದೆ ಪ್ರಕಾರ 243 ವಾರ್ಡ್‍ಗಳಿಗೆ ಚುನಾವಣೆ ನಡೆಯುವ ಸಾಧ್ಯತೆಗಳಿವೆ.