ಬೆಂಗಳೂರು,ಜು.16- ಹೊಸದಾಗಿ ರಚನೆಯಾಗಿರುವ ಬಿಬಿಎಂಪಿಯ 243 ವಾರ್ಡ್‍ಗಳಿಗೆ ಇದೇ 20 ರಂದು ಮೀಸಲಾತಿ ನಿಗದಿಪಡಿಸಲು ಸರ್ಕಾರ ತೀರ್ಮಾನಿಸಿದೆ. ಬಿಬಿಎಂಪಿಯ 198 ವಾರ್ಡ್‍ಗಳನ್ನು 243 ವಾರ್ಡ್‍ಗಳನ್ನಾಗಿ ಪುನರ್ ವಿಂಗಡಿಸಿದ ನಂತರ ವಾರ್ಡ್‍ವಾರು ಮೀಸಲಾತಿ ನಿಗಪಡಿಸಲು ಮುಂದಾಗಿರುವ ಸರ್ಕಾರ ಇದೇ 19 ರಂದು ಮಹತ್ವದ ಸಭೆ ನಡೆಸಿ ನಗರವನ್ನು ಪ್ರತಿನಿಸುವ ಎಲ್ಲಾ ಶಾಸಕರು, ಜಿಲ್ಲಾಧ್ಯಕ್ಷರು ಮತ್ತಿತರ ಪಕ್ಷದ ಹಿರಿಯ ಮುಖಂಡರ ಅಭಿಪ್ರಾಯ ಪಡೆದು 20 ರಂದು ಮೀಸಲು ನಿಗಪಡಿಸುವ ಸಾಧ್ಯತೆಗಳಿವೆ.
ಎಂಟು ವಾರದೊಳಗೆ ಬಿಬಿಎಂಪಿಗೆ ಚುನಾವಣೆ ನಡೆಸಲು ಸಕಲ ಸಿದ್ದತೆ ಮಾಡಿಕೊಳ್ಳುವಂತೆ ಸುಪ್ರೀಂಕೋರ್ಟ್ ನೀಡಿದ್ದ ಗಡುವು ಮುಗಿದಿದ್ದು, ಚುನಾ ವಣಾ ವಿಚಾರ ಮತ್ತೆ ಜು.22ರಂದು ವಿಚಾರಣೆಗೆ ಬರಲಿದೆ. ಅಷ್ಟರೊಳಗೆ ಮೀಸಲು ನಿಗದಿ ಪ್ರಕ್ರಿಯೆ ಪೂರ್ಣಗೊಳಿಸಲು ತೀರ್ಮಾನಿಸಲಾಗಿದೆ.
ಶೇ.50 ಮೀರದಂತೆ ಒಬಿಸಿ ಗುಂಪಿಗೆ ಮೀಸಲು ಕಲ್ಪಿಸುವ ಉದ್ದೇಶದಿಂದ ರಚಿಸಲಾಗಿದ್ದ ನ್ಯಾ.ಭಕ್ತವತ್ಸಲಂ ಸಮಿತಿ ಈಗಾಗಲೆ ಮೀಸಲು ನಿಗದಿಪಡಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಮುಖ್ಯಮಂತ್ರಿಗಳ ಭೇಟಿಗಾಗಿ ಎದುರು ನೋಡುತ್ತಿದೆ.
ಸದ್ಯದಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮೀಸಲು ವರದಿ ಸಲ್ಲಿಸಲಿದೆ. ವರದಿ ಸಲ್ಲಿಕೆ ಬೆನ್ನಲ್ಲೇ ಸಿಎಂ ನಗರ ಶಾಸಕರು ಹಾಗೂ ಪ್ರಮುಖರ ಸಭೆ ಕರೆದು ಮೀಸಲು ಹಂಚಿಕೆ ಪ್ರಕ್ರಿಯೆಯನ್ನು ಅಂತಿಮಗೊಳಿಸಲಿದೆ ಎಂದು ತಿಳಿದುಬಂದಿದೆ.
20ರಂದು ಮೀಸಲಾತಿ ಪ್ರಕ್ರಿಯೆ ಪೂರ್ಣಗೊಳಿಸಿ 15 ದಿನಗಳ ಸಾರ್ವಜನಿಕ ಆಕ್ಷೇಪಣೆಗೆ ಅರ್ಜಿ ಆಹ್ವಾನಿಸಿ 22 ರಂದು ನಡೆಯಲಿರುವ ಸುಪ್ರೀಂಕೋರ್ಟ್ ವಿಚಾರಣೆ ಸಂದರ್ಭದಲ್ಲಿ ಬಿಬಿಎಂಪಿ ಚುನಾವಣೆ ನಡೆಸಲು ಮಾಡಿಕೊಂಡಿರುವ ತಯಾರಿಗಳ ವಿವರಣೆ ನೀಡಲ ಸರ್ಕಾರ ಮುಂದಾಗಿದೆ.
ಮೀಸಲಾತಿ ನಿಗ ಪ್ರಕ್ರಿಯೆ ಪೂರ್ಣಗೊಳ್ಳಲು ಕನಿಷ್ಠ ಒಂದು ತಿಂಗಳ ಕಾಲಾವಕಾಶ ಬೇಕಾಗಿರುವುದರಿಂದ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಚುನಾವಣಾ ಆಯೋಗಕ್ಕೆ ಸಲ್ಲಿಸಲು ಮತ್ತಷ್ಟು ಕಾಲಾವಕಾಶ ನೀಡುವಂತೆ ಸರ್ಕಾರ ನ್ಯಾಯಾಲಯಕ್ಕೆ ಮನವಿ ಮಾಡಿಕೊಳ್ಳುವ ಸಾಧ್ಯತೆಗಳಿವೆ.
ಮೇಲ್ಮನವಿ ಅರ್ಜಿ ಸಲ್ಲಿಕೆ ಸಾಧ್ಯತೆ: ಸರ್ಕಾರ ಒಂದು ಕಡೆ ಬಿಬಿಎಂಪಿಯ 243 ವಾರ್ಡ್‍ಗಳಿಗೆ ಮೀಸಲು ಕಲ್ಪಿಸುವ ಪ್ರಕ್ರಿಯೆಗೆ ಚಾಲನೆ ನೀಡಿದ್ದರೆ, ಕೆಲವರು ವಾರ್ಡ್ ಪುನರ್‍ವಿಂಗಡಣೆ ಸಮರ್ಪಕವಾಗಿ ನಡೆಸಿಲ್ಲ ಎಂದು ಆರೋಪಿಸಿ ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವ ಸಾಧ್ಯತೆಗಳಿವೆ.
ವಾರ್ಡ್‍ಗಳ ಗಡಿ ಗುರುತಿಸುವಿಕೆ, ವಿಂಗಡಣೆಯನ್ನು ಬಿಜೆಪಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಸಹಕಾರಿಯಾಗುವಂತೆ ರಚನೆ ಮಾಡಿಕೊಂಡು ಅವೈಜ್ಞಾನಿಕವಾಗಿ ವಾರ್ಡ್ ಪುನರ್‍ವಿಂಗಡಿಸಿರುವುದಂತೆ ಇದಕ್ಕೆ ತಡೆಯಾಜ್ಞೆÉ ನೀಡುವಂತೆ ಕೆಲವರು ಸೋಮವಾರದ ನಂತರ ಹೈಕೋರ್ಟ್ ಮೆಟ್ಟಿಲೇರಲಿದ್ದಾರೆ ಎನ್ನಲಾಗಿದೆ.
ಒಂದು ವೇಳೆ ಹೈಕೋರ್ಟ್‍ನಲ್ಲಿ ವಾರ್ಡ್ ಪುನರ್‍ವಿಂಗಡಣೆ ಪ್ರಕ್ರಿಯೆಗೆ ತಡೆಯಾಜ್ಞೆ ಸಿಕ್ಕರೆ ಬಿಬಿಎಂಪಿ ಚುನಾವಣೆ ವಿಚಾರದಲ್ಲಿ ಹಾವು ಸಾಯಬಾರದು, ಕೋಲು ಮುರಿಯಬಾರದು ಎಂಬ ಧೋರಣೆ ಅನುಸರಿಸುತ್ತಿರುವ ಬಿಜೆಪಿ ಶಾಸಕರು ತಮ್ಮಿಚ್ಚೆಯಂತೆ ವಿಧಾನಸಭಾ ಕ್ಷೇತ್ರದ ಚುನಾವಣೆ ನಡೆಸಿದ ನಂತರವೇ ಬಿಬಿಎಂಪಿಗೆ ಚುನಾವಣೆ ನಡೆಸಿದರೂ ಅಚ್ಚರಿಪಡಬೇಕಿಲ್ಲ.