3 ತಿಂಗಳೊಳಗೆ ಬಿಬಿಎಂಪಿ ಚುನಾವಣೆ : ಸಚಿವ ಅಶೋಕ್

Social Share

ಬೆಂಗಳೂರು,ಜು.16-ಕಳೆದ ಎರಡು ವರ್ಷಗಳಿಂದ ನಡೆಯದ ಪಾಲಿಕೆ ಚುನಾವಣೆ ಮೂರು ತಿಂಗಳೊಳಗೆ ನಡೆಯಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಇಂದಿಲ್ಲಿ ತಿಳಿಸಿದರು. ಯಡಿಯೂರು ವಾರ್ಡ್‍ನಲ್ಲಿ ಹಮ್ಮಿಕೊಂಡಿದ್ದ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ವಿಶೇಷ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆಡಳಿತಾತ್ಮಕ ದೃಷ್ಟಿಯಿಂದ ನಮ್ಮ ಸರ್ಕಾರ 198 ವಾರ್ಡ್‍ಗಳಿದ್ದ ಪಾಲಿಕೆ ವ್ಯಾಪ್ತಿಯನ್ನು 243 ವಾರ್ಡ್‍ಗಳಿಗೆ ವಿಸ್ತರಿಸಲಾಗಿದೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನ ಗೆಲ್ಲಲು ಗುರಿ ಹೊಂದಿದ್ದೇವೆ ಎಂದರು.

243 ವಾರ್ಡ್‍ಗಳಲ್ಲಿ 150 ಸ್ಥಾನಗಳನ್ನು ಗೆಲ್ಲುವ ಟಾಸ್ಕ್ ನಮ್ಮ ಮೇಲಿದ್ದು, ಪಕ್ಷದ ಪದಾಕಾರಿಗಳು ಪಾಲಿಕೆಯಲ್ಲಿ ಬಿಜೆಪಿ ಆಡಳಿತ ತರಲು ಶಕ್ತಿಮೀರಿ ಪ್ರಯತ್ನಿಸಬೇಕು. ಅದರಲ್ಲೂ ಬಿಜೆಪಿ ಭದ್ರಕೋಟೆಯಾಗಿರುವ ಬೆಂಗಳೂರು ದಕ್ಷಿಣದಲ್ಲಿ ಅತಿ ಹೆಚ್ಚು ಸದಸ್ಯರನ್ನು ಆರಿಸಿ ತರುವಂತೆ ಸೂಚನೆ ನೀಡಿದರು.

ಒಂದೆರಡು ದಿನಗಳಲ್ಲಿ ಮೀಸಲಾತಿ ನಿಗದಿಯಾಗಲಿದ್ದು, 22ರಂದು ನಡೆಯಲಿರುವ ನ್ಯಾಯಾಲಯದ ವಿಚಾರಣೆ ವೇಳೆ ಮಂಡನೆಯಾಗಲಿದೆ. ನ್ಯಾಯಾಲಯದ ಆದೇಶದ ಮೇರೆಗೆ ಚುನಾವಣೆ ಎದುರಿಸುತ್ತೇವೆ. ಮತ್ತೊಮ್ಮೆ ಪಾಲಿಕೆ ಮೇಲೆ ಕೇಸರಿ ಬಾವುಟ ಹಾರಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಶಾಸಕರಾದ ರವಿ ಸುಬ್ರಹ್ಮಣ್ಯ, ಉದಯ್ ಗರುಡಾಚಾರ್, ಬೆಂಗಳೂರು ದಕ್ಷಿಣ ಘಟಕದ ಬಿಜೆಪಿ ಅಧ್ಯಕ್ಷ ಎನ್.ಆರ್.ರಮೇಶ್, ವಿರೋಧ ಪಕ್ಷದ ಮಾಜಿ ನಾಯಕ ಎ.ಎಚ್.ಬಸವರಾಜ್ ಸೇರಿದಂತೆ ಪಾಲಿಕೆ ಮಾಜಿ ಸದಸ್ಯರು, ಮುಖಂಡರು ಪಾಲ್ಗೊಂಡಿದ್ದರು.

Articles You Might Like

Share This Article