ಬೆಂಗಳೂರು,ಅ.1- ಮಳೆ ನಿಂತು ಹೋದ ಹಾಗೇ ಬಿಬಿಎಂಪಿಯ ಒತ್ತುವರಿ ತೆರವು ಕಾರ್ಯಚರಣೆಗೂ ಬ್ರೇಕ್ ಬಿದ್ದಿದೆ.
ಕಂದಾಯ ಇಲಾಖೆ ಅಧಿಕಾರಿಗಳ ಜಾಣ ಮೌನದಿಂದ ಬಿಬಿಎಂಪಿ ಅಧಿಕಾರಿಗಳು ಅನಿವಾರ್ಯವಾಗಿ ಒತ್ತುವರಿ ತೆರವು ಕಾರ್ಯಚರಣೆಯನ್ನು ಸ್ಥಗಿತ ಗೊಳಿಸುವಂತಾಗಿದೆ.
ರಣ ಮಳೆಯ ನಂತರ ಎಲ್ಲಾ ಒತ್ತುವರಿಗಳನ್ನು ತೆರವುಗೊಳಿಸುವ ಬಗ್ಗೆ ವೀರಾವೇಷದ ಮಾತನಾಡಿದ್ದ ಬಿಬಿಎಂಪಿ ಅಧಿಕಾರಿಗಳು ಕಂದಾಯ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಇದೀಗ ಸೈಲೆಂಟ್ ಆಗಿದ್ದಾರೆ. ಬುಲ್ಡೋಜರ್ ಆಪರೇಷನ್ ತಣ್ಣಗಾಗಲು ಕಂದಾಯ ಇಲಾಖೆಯೇ ಕಾರಣ ಎನ್ನುವುದು ಬಿಬಿಎಂಪಿ ಅಧಿಕಾರಿಗಳು ಹೇಳಿಕೊಂಡು ಓಡಾಡುತ್ತಿದ್ದಾರೆ.
ಕಂದಾಯ ಇಲಾಖೆ ಗುರುತಿಸಿರುವಷ್ಟು ಒತ್ತುವರಿಯನ್ನು ನಾವು ತೆರವುಗೊಳಿಸಿದ್ದೇವೆ. ಮುಂದಿನ ತೆರವಿಗೆ ಮಾರ್ಕ್ ಮಾಡಿ ಎಂದು ಕೇಳಿಕೊಳ್ಳುತ್ತಿದ್ದರೂ ಕಂದಾಯ ಇಲಾಖೆ ಸಿಬ್ಬಂದಿಗಳು ಸ್ಪಂದಿಸುತ್ತಿಲ್ಲ ಎಂದು ಬಿಬಿಎಂಪಿಯವರು ಆರೋಪಿಸಿದ್ದಾರೆ,
ಒತ್ತುವರಿ ತೆರವು ಕಾರ್ಯ ಮುಂದುವರೆಸಲು ಮಾರ್ಕ್ ಮಾಡಿಕೊಡುವಂತೆ ಬಿಬಿಎಂಪಿ ಕೆರೆ ವಿಭಾಗದ ಅಧಿಕಾರಿಗಳು ಬೆಂಗಳೂರು ಪೂರ್ವ ತಾಲೂಕು ತಹಸಿಲ್ದಾರ್‍ಗೆ ಬರೆದಿರುವ ಪತ್ರ ಈ ಸಂಜೆಗೆ ಲಭ್ಯವಾಗಿದೆ.
ಬಿಬಿಎಂಪಿ ಅಧಿಕಾರಿಗಳು ಈಗಾಗಲೇ ಹಲವಾರು ಬಾರಿ ಮನವಿ ಮಾಡಿಕೊಂಡಿದ್ದರೂ ಅವರ ಪತ್ರಗಳಿಗೆ ಕಂದಾಯ ಇಲಾಖೆ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ಎಲ್ಲಾಲ್ಲಿ ಕೆರೆ ಒತ್ತುವರಿಯಾಗಿದೆ ಎಂಬುವುದನ್ನು ಪ್ರಸ್ತಾಪಿಸಿ ಒತ್ತುವರಿ ಪ್ರದೇಶಗಳನ್ನು ಗುರುತಿಸಿಕೊಡುವಂತೆ ಬಿಬಿಎಂಪಿ ಮಾಡಿಕೊಂಡಿರುವ ಮನವಿಗೆ ಸ್ಪಂದಿಸದಿರುವ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ದೂರು ನೀಡಲಾಗಿದೆ.
ಅದರೂ ಯಾವುದೇ ಪ್ರಯೋಜನವಾಗದಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಅನಿವಾರ್ಯವಾಗಿ ಒತ್ತುವರಿ ತೆರವು ಕಾರ್ಯಚರಣೆ ಸ್ಥಗಿತಗೊಳಿಸಿದ್ದಾರೆ. ಒತ್ತುವರಿ ತೆರವು ಮಾಡಿಸುವುದಕ್ಕೆ ಕಂದಾಯ ಇಲಾಖೆ ಮೇಲೆ ಪ್ರಭಾವಿಗಳ ಒತ್ತಡವಿದೆಯೋ ಅಥವಾ ಸರ್ವೇಯರ್‍ಗಳ ಕೊರತೆಯೇ ಎಂಬುದು ಮಾತ್ರ ಇದುವರೆಗೂ ದೃಢಪಟ್ಟಿಲ್ಲ.