ಬೆಂಗಳೂರು,ಸೆ.15- ಬಿಜೆಪಿ ಮತ್ತು ಜೆಡಿಎಸ್ ತೊರೆದು ಕೆಪಿಸಿಸಿ ಕಚೇರಿಯಲ್ಲಿಂದು ಕಾಂಗ್ರೆಸ್ ಸೇರಿದ ಪದ್ಮನಾಭನಗರ ಕ್ಷೇತ್ರದ ಹಲವು ಪ್ರಭಾವಿ ನಾಯಕರು ಶಾಸಕ ಆರ್.ಅಶೋಕ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಎಲ್.ಶ್ರೀನಿವಾಸ್ ಮಾತನಾಡಿ, ಪದ್ಮನಾಭ ಕ್ಷೇತ್ರದ ಶಾಸಕ ಆರ್. ಅಶೊಕ್ ಅವರು ಬಿಜೆಪಿಯಲ್ಲಿ ತಮ್ಮನ್ನು ಮೂಲೆಗುಂಪು ಮಾಡಲು ಪ್ರಯತ್ನಿಸಿದರು. ಮುಂದೆ ಇದ್ದ ಕುರ್ಚಿಯನ್ನು ಹಿಂದೆ ಹಾಕಿಸುತ್ತಿದ್ದರು.
ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ನಾನು ಸ್ರ್ಪಧಿಸಿದಾಗಲೂ ಗೆಲ್ಲಬಾರದು ಎಂಬ ಉದ್ದೇಶದಿಂದ ಬೇರೆ ರೀತಿ ನಡೆದುಕೊಂಡರು. 2020 ರಲ್ಲಿ ಬಿಬಿಎಂಪಿ ಮೇಯರ್ ಆಗಲು ಪ್ರಯತ್ನ ಪಟ್ಟಿದ್ದೆ. ಯಡಿಯೂರಪ್ಪ ಅವರೇ ಆಸಕ್ತಿ ತೋರಿಸಿ ನನ್ನ ಹೆಸರು ಪ್ರಸ್ತಾಪ ಮಾಡಿದ್ದರೂ ಕೂಡ ಅಶೋಕ್ ವಿರೋಧ ವ್ಯಕ್ತಪಡಿಸಿದ್ದರು ಎಂದು ಆರೋಪಿಸಿದರು.
ಕಾಂಗ್ರೆಸ್ ಪಕ್ಷ ಸೇರುವಂತೆ ನನಗೆ ಡಿ.ಕೆ.ಶಿವಕುಮಾರ್ ಅವರು ಹಲವು ದಿನಗಳಿಂದಲೂ ಸಲಹೆ ನೀಡುತ್ತಿದ್ದರು. ಇತ್ತೀಚೆಗೆ ಬಿಬಿಎಂಪಿಯ ವಾರ್ಡ್ ಮೀಸಲಾತಿ ನಿಗದಿ ಮಾಡಿಕೊಡುವಂತೆ ಅವರನ್ನು ಭೇಟಿ ಮಾಡಿದಾಗ ಇಷ್ಟು ದಿನ ಹೇಳಿದರೂ ಬುದ್ಧಿ ಬಂದಿಲ್ಲ, ಈಗಲಾದರೂ ನಿರ್ಧಾರ ತೆಗೆದುಕೊಳ್ಳಿ, ನಿಮಗೆ ಅನುಕೂಲವಾಗುವಂತೆ ಮಾಡುತ್ತೇನೆ ಎಂದು ಹೇಳಿದ್ದರು. ಅದರಂತೆ ನಾನೊಬ್ಬನೇ ಅಲ್ಲ, ಪದ್ಮನಾಭ ನಗರದ ಬಹಳಷ್ಟು ಮುಖಂಡರು ಇಂದು ಬಿಜೆಪಿ, ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದೇವೆ ಎಂದು ಹೇಳಿದ್ದರು.
ಪದ್ಮನಾಭನಗರದಲ್ಲಿ ಬಿಬಿಎಂಪಿ ಚುನಾವಣೆಗೆ ಡಿಕೆಶಿ ಗೇಮ್ ಪ್ಲಾನ್
ಇದೇ ಅಕ್ಟೋಬರ್ 15 ರಂದು ಪದ್ಮನಾಭನಗರದಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಜೊತೆಯಲ್ಲಿರುತ್ತೇವೆ. ಪಕ್ಷಕ್ಕಾಗಿ ದುಡಿಯುತ್ತೇವೆ. ರಾಹು ಕಾಲಕ್ಕೂ ಮೊದಲು ನಮ್ಮನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ. ಮುಂದೆ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಭರವಸೆ ನೀಡಿದರು.
ಜೆಡಿಎಸ್ನ ಕಬ್ಬಡ್ಡಿ ಬಾಬು ಮಾತನಾಡಿ, ಹಲವು ದಿನಗಳಿಂದಲೂ ನನಗೂ ಕಾಂಗ್ರೆಸ್ ಸೇರುವಂತೆ ಡಿ.ಕೆ.ಶಿವಕುಮಾರ್ ಹೇಳುತ್ತಲೇ ಇದ್ದರು. ಎಸ್.ಎಂ.ಕೃಷ್ಣ ಮುಖ್ಯ ಮಂತ್ರಿಯಾಗಿದ್ದ ನಿಗಮ ಮಂಡಳಿ ಅಧ್ಯಕ್ಷನನ್ನಾಗಿ ಮಾಡುವ ಭರವಸೆ ನೀಡಿದ್ದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗಲೂ ಆಹ್ವಾನ ನೀಡಲಾಗಿತ್ತು. ವಿಧಾನಪರಿಷತ್ ಸದಸ್ಯನನ್ನಾಗಿ ಮಾಡುವ ಭರವಸೆ ನೀಡಲಾಗಿತ್ತು. ಆದರೆ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗಿದ್ದ ಬಾಂಧವ್ಯದಿಂದಾಗಿ ಪಕ್ಷ ಬಿಟ್ಟು ಬರಲಾಗಿರಲಿಲ್ಲ ಎಂದರು.
ಇತ್ತೀಚೆಗೆ ತಮ್ಮ ಮಗನಿಗಾಗಿ ಬಿಬಿಎಂಪಿ ವಾರ್ಡ್ ಮೀಸಲಾತಿಯನ್ನು ಬದಲಾವಣೆ ಮಾಡಿಕೊಡುವಂತೆ ಡಿ.ಕೆ. ಶಿವಕುಮಾರ್ ಅವರನ್ನು ಕೇಳಿಕೊಂಡಾಗ ಅಚಾನಕ್ ಮಾತುಕತೆ ನಡೆದು ನಾನೂ ಪಕ್ಷ ಸೇರುವಂತಾಗಿದೆ. ಮುಂದಿನ ದಿನಗಳಲ್ಲಿ ಕೇಬಲ್ ನಿರ್ವಹಣಾ ಸಂಘದ ಪದಾಧಿಕಾರಿಗಳು, ಕಾರ್ಯಕರ್ತರು, ಕಬ್ಬಡ್ಡಿ ಕ್ರೀಡಾಪಟುಗಳನ್ನು ಜಿಲ್ಲಾ ಕೇಂದ್ರಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕರೆ ತರುತ್ತೇನೆ. ರಾಜಕೀಯದಲ್ಲಿ ಮಹತ್ವದ ಬದಲಾವಣೆ ಆಗಲಿದೆ ಎಂದು ಹೇಳಿದರು.
ತಾಲೂಕು ಪಂಚಾಯಿತಿ ಅಧ್ಯಕ್ಷ ಅಂಜನಕುಮಾರ್ ಮಾತನಾಡಿ, ಪದ್ಮನಾಭನಗರದಲ್ಲಿ ಸಣ್ಣ ಸಸಿಗೆ ನಾವೆಲ್ಲಾ ನೀರೆರೆದು ಬೆಳೆಸಿದ್ದೆವು. ಮರವಾದ ಮೇಲೆ ಅದು ಮುಳ್ಳಿನ ಗಿಡ ಎಂದು ಗೊತ್ತಾಗಿದೆ. ಮುಳ್ಳನ್ನು ಯಾರೂ ತಬ್ಬಿಕೊಳ್ಳಲು ಸಾಧ್ಯವಿಲ್ಲ ಎಂದು ತಮ್ಮ ಅಸಮಾಧಾನ ಹೊರಹಾಕಿದರು.
ಬಾಲಕೃಷ್ಣ ಅವರು, ಮುಂದಿನ ದಿನಗಳಲ್ಲಿ ಆರ್.ಅಶೋಕ್ ಅವರನ್ನು ಸೋಲಿಸಿಯೇ ಸೋಲಿಸು ತ್ತೇವೆ. ಡಿ.ಕೆ.ಶಿವಕುಮಾರ್, ರಾಮಲಿಂಗಾ ರೆಡ್ಡಿಯವರು ನಂಬಿದವರನ್ನು ಕೈಬಿಡುವು ದಿಲ್ಲ. ಬಿಜೆಪಿಯಿಂದ ಬೆನ್ನಿಗೆ ಚೂರಿ ಹಾಕಿಸಿಕೊಂಡು ಸಾಕಾಗಿದೆ. ನನ್ನ ವಾರ್ಡ್ನಲ್ಲಿ ಪ್ರತಿಯೊಬ್ಬ ಕಾರ್ಯಕರ್ತ ನನ್ನು ಕಾಂಗ್ರೆಸ್ಗೆ ಕರೆತರುತ್ತೇನೆ. ಇದು ಸಾಧ್ಯವಾಗದೇ ಇದ್ದರೆ ನಡುರಸ್ತೆಯಲ್ಲೇ ಡಿ.ಕೆ.ಶಿವಕುಮಾರ್ ಎದುರು ಆತ್ಮ ಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಭಾವೋದ್ವೇಗದಿಂದ ಹೇಳಿದರು.
ಸಚಿವ ರಾಮಲಿಂಗಾರೆಡ್ಡಿ ಅವರು ಈ ಎಲ್ಲಾ ನಾಯಕರ ಸೇರ್ಪಡೆಯಿಂದ ಪಕ್ಷಕ್ಕೆ ಆನೆಬಲ ಬಂದಂತಾಗಿದೆ ಎಂದು ಹೇಳಿದರು. ಡಿ.ಕೆ.ಶಿವಕುಮಾರ್ ಅವರು, ಪ್ರಭಾವಿ ನಾಯಕರನ್ನು ಕಾಂಗ್ರೆಸ್ನ ದೊಡ್ಡ ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡಿದ್ದಲ್ಲದೆ ಎಲ್ಲರ ಜೊತೆ ವೇದಿಕೆಯ ಮುಂಭಾಗದಲ್ಲಿ ಸಾಲಾಗಿ ನಿಂತು ಫೋಟೊಗೆ ಪೊೀಸ್ ನೀಡಿದರು. ಈ ಫೋಟೊವನ್ನು ಇಡೀ ರಾಜ್ಯ ನೋಡಬೇಕೆಂದು ಹೇಳುವ ಮೂಲಕ ಕನಕಪುರದಲ್ಲಿ ತಮ್ಮ ಪ್ರತಿಸ್ರ್ಪಯಾಗಿದ್ದ ಆರ್.ಅಶೋಕ್ ಅವರಿಗೆ ಟಾಂಗ್ ನೀಡಿದರು.
ಜೆಡಿಎಸ್, ಬಿಜೆಪಿಯ ಪ್ರಮುಖ ನಾಯಕರು, ಪಾಲಿಕೆ ಸದಸ್ಯರಾದ ಎಲ್.ಶ್ರೀನಿವಾಸ್, ಪ್ರಸಾದ್ ಬಾಬು, ರವಿಕಿರಣ್, ಬಾಲಕೃಷ್ಣ, ಸುರೇಶ್, ಆಂಜನಪ್ಪ, ನಾರಾಯಣ್, ಗೋವಿಂದರಾಜು, ವೆಂಕಟಸ್ವಾಮಿ ನಾಯ್ಡು, ಎಲ್. ಗೋವಿಂದರಾಜು, ಸುಪ್ರಿಯಾ ಶೇಖರ್, ರಂಗರಾಮೇಗೌಡರು, ಲಕ್ಷ್ಮೀ ಸುರೇಶ್, ಶ್ರೀಪವನ್, ಅಕ್ಬರ್ಖಾನ್, ಗಿರೀಶ್ ನಾಯ್ಡು, ಎಂ.ನಾಗರಾಜು, ಆರ್.ಮುನಿರಾಜು, ನಟರಾಜು, ಯು.ಕೃಷ್ಣಮೂರ್ತಿ, ಕಿರಣ್, ಪ್ರಮೋದ್, ಸುಗುಣ ಬಾಲಕೃಷ್ಣ, ಜಿ.ವಿ.ರವಿ, ಕುಮಾರ್ ಸೇರಿದಂತೆ ಅನೇಕರು ಕಾಂಗ್ರೆಸ್ ಸೇರ್ಪಡೆಯಾದರು.
#BBMP #exmembers #RAshok,