ಅನಧಿಕೃತವಾಗಿ ಫ್ಲೆಕ್ಸ್-ಬ್ಯಾನರ್ ಅಳವಡಿಸಿದರೆ ಬೀಳುತ್ತೆ ಎಫ್‍ಐಆರ್

Social Share

ಬೆಂಗಳೂರು,ಫೆ.23- ನಗರದಲ್ಲಿ ಇನ್ನು ಮುಂದೆ ಫ್ಲೆಕ್ಸ್,ಬ್ಯಾನರ್‍ಗಳನ್ನು ಅನಧಿಕೃತವಾಗಿ ಹಾಕಿದರೆ ಬೀಳುತ್ತೆ ಎಫ್‍ಐಆರ್. ಎಂಟು ವಲಯಗಳಲ್ಲಿ ಯಾವುದೇ ಪ್ರದೇಶದಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಅಳವಡಿಸಿದರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಬಿಬಿಎಂಪಿ
ಮುಖ್ಯ ಆಯುಕ್ತ ಗೌರವ್ ಗುಪ್ತಾ ಇಂದಿಲ್ಲಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಧಿಕೃತ ಫ್ಲೆಕ್ಸ್, ಬ್ಯಾನರ್‍ಗಳನ್ನು ಎಂತಹ ಪ್ರಭಾವಿ ವ್ಯಕ್ತಿಗಳೆ ಹಾಕಿದರೂ ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು. ಸಾರ್ವಜನಿಕರು ತಮ್ಮ ಕಣ್ಣಿಗೆ ಬೀಳುವ ಅನಧಿಕೃತ ಫ್ಲೆಕ್ಸ್‍ಗಳ ಬಗ್ಗೆ ಆಯಾ ವಲಯಗಳ ನಿಯಂತ್ರಣ ಕೊಠಡಿಗಳಿಗೆ ಮಾಹಿತಿ ನೀಡಿದರೆ ಅಂತಹ ಜಾಹೀರಾತು ಫಲಕಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲಾಗುವುದು ಎಂದು ಅವರು ವಿವರಣೆ ನೀಡಿದರು.
ನಗರದಲ್ಲಿ ಅನಧಿಕೃತ ಜಾಹೀರಾತು ಫಲಕಗಳ ಮೇಲೆ ಹದ್ದಿನಕಣ್ಣಿಡುವಂತೆ ಆಯಾ ವಲಯಗಳ ಮುಖ್ಯ ಅಭಿಯಂತರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ವಿವಿಧ ತಂಡಗಳನ್ನು ರಚಿಸಲಾಗಿದೆ. ಅನಧಿಕೃತ ಜಾಹೀರಾತು ಪ್ರದರ್ಶಿಸುವವರು ರಾಜಕೀಯ ಪಕ್ಷಗಳ ಮುಖಂಡರಾಗಿರಲಿ, ಇಲ್ಲವೆ ಸಂಘ ಸಂಸ್ಥೆಗಳಾಗಿರಲಿ ಅವರ ವಿರುದ್ಧ ಯಾವುದೆ ಪ್ರಭಾವಕ್ಕೆ ಒಳಗಾಗದೆ ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಅನಧಿಕೃತ ಜಾಹೀರಾತು ಫಲಕ ಪ್ರದರ್ಶಿಸುವವರ ವಿರುದ್ಧ ಪರಿಸರ ಸಂರಕ್ಷಣೆ ಕಾಯಿದೆ 1986 ಸೆಕ್ಷನ್ 5ರ ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗುವುದು ಎಂದು ಆಯುಕ್ತರು ವಿವರಣೆ ನೀಡಿದರು.
ಮುಂದಿನ ದಿನಗಳಲ್ಲಿ ಬಿಬಿಎಂಪಿ ಬಜೆಟ್ ಮಂಡನೆ ಮಾಡಲು ತಯಾರಿ ನಡೆಸಿದೆ. ಹೀಗಾಗಿ ನಗರದ ಅಭಿವೃದ್ಧಿ ದೃಷ್ಟಿಯಿಂದ ತಮ್ಮ ಸಲಹೆ ಸೂಚನೆಗಳನ್ನು ನಿಡಬಹುದಾಗಿದೆ. ಹೀಗಾಗಿ ಜನಾಗ್ರಹ ಸಂಸ್ಥೆ ಇಂದು ಕಾರ್ಯಕ್ರಮ ಕೈಗೊಂಡಿದೆ. ಸಭೆಯಲ್ಲಿ ಸಾರ್ವಜನಿಕರು ನೀಡುವ ಸಲಹೆ ಸೂಚನೆಗಳ ಪಾಲನೆಗೆ ಬಜೆಟ್‍ನಲ್ಲಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

Articles You Might Like

Share This Article