4 ಐತಿಹಾಸಿಕ ಕೆರೆ ನುಂಗಿರುವವರ ವಿರುದ್ಧ ಕ್ರಮಕ್ಕೆ NR ರಮೇಶ್ ಆಗ್ರಹ

Social Share

ಬೆಂಗಳೂರು,ನ.14- ನಗರದ ಪ್ರಮುಖ ನಾಲ್ಕು ಕೆರೆಗಳನ್ನು ಒತ್ತುವರಿ ಮಾಡಿರುವವರು ಹಾಗೂ ಅವರ ಈ ಕಾರ್ಯಕ್ಕೆ ಕುಮಕ್ಕು ನೀಡಿರುವ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ಅವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರನ್ನು ಒತ್ತಾಯಿಸಿದ್ದಾರೆ.

ಬೆಂಗಳೂರು ನಗರ ಮತ್ತು ನಗರ ಜಿಲ್ಲಾ ವ್ಯಾಪ್ತಿಯಲ್ಲಿರುವ ಹತ್ತಾರು ಐತಿಹಾಸಿಕ ಕೆರೆಗಳಿಗೆ ಎ.ಟಿ.ರಾಮಸ್ವಾಮಿ ಹಾಗೂ ಕೋಳಿವಾಡ ಸಮಿತಿ ಪರಿಶೀಲನೆ ನಡೆಸಿ ವರದಿ ನೀಡಿದೆ. ಆದರೆ, ಕೆಲ ಅಧಿಕಾರಿಗಳು ಸಮಿತಿಗೆ ಉದ್ದೇಶಪೂರ್ವಕವಾಗಿಯೇ ಕೆಲ ಕೆರೆಗಳ ಮಾಹಿತಿ ನೀಡದೆ ವಂಚಿಸಿದ್ದಾರೆ ಎಂದು ರಮೇಶ್ ಅವರು ಸಿಎಂ ಹಾಗೂ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ಸಂಪೂರ್ಣ ಮಾಹಿತಿ ನೀಡಿದ್ದಾರೆ.

ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಯಲಹಂಕ ಹೋಬಳಿಯಲ್ಲಿರುವ ಸಿಂಗಾಪುರಕೆರೆ, ಅಬ್ಬಿಗೆರೆ ಕೆರೆ, ಚಿಕ್ಕಬಾಣವಾರ ಹಾಗೂ ಹೆಬ್ಬಾಳ ಕೆರೆಗಳ ಬಗ್ಗೆ ಉದ್ದೇಶಪೂರ್ವಕವಾಗಿಯೇ ಮಾಹಿತಿ ನೀಡದೆ ಭೂಗಳ್ಳರಿಗೆ ಸಹಕರಿಸಲಾಗಿದೆ ಎಂಬ ಆಘಾತಕಾರಿ ಅಂಶವನ್ನು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ ಸಮರ್ಥಿಸಿಕೊಂಡ ಸಿಎಂ ಬೊಮ್ಮಾಯಿ

ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಯಲಹಂಕ ಹೋಬಳಿಯ ಸರ್ವೆ ನಂಬರ್ 102 ರ ಸುಮಾರು 66.18 ಎಕರೆಗಳಷ್ಟು ವಿಸ್ತೀರ್ಣದ ಸಿಂಗಾಪುರ ಕೆರೆ ಸಂಪೂರ್ಣವಾಗಿ ಭೂಗಳ್ಳರಿಂದ ಕಬಳಿಸಲ್ಪಟ್ಟು, ಅಕ್ರಮ ಬಡಾವಣೆಗಳು ನಿರ್ಮಾಣಗೊಂಡಿರುತ್ತವೆ. ಸದರಿ ಸಿಂಗಾಪುರ ಕೆರೆಯನ್ನು 1528 ರಲ್ಲಿ ನಾಲಪ್ಪ ನಾಯಕನು ನಿರ್ಮಿಸಿರುವ ಬಗ್ಗೆ ಸ್ಥಳದಲ್ಲೇ ಇರುವ ಶಾಸನವು ಇಂದಿಗೂ ಸಾರಿ ಹೇಳುತ್ತದೆ.

ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಯಲಹಂಕ ಹೋಬಳಿ ಸಿಂಗಾಪುರ ಗ್ರಾಮದ ಅಬ್ಬಿಗೆರೆ ಕೆರೆಯು ಸುಮಾರು 75 ಎಕರೆಗಳಿಗೂ ಹೆಚ್ಚು ವಿಸ್ತೀರ್ಣವಿದ್ದು, ಸಂಪೂರ್ಣ ಕೆರೆಯು ಒತ್ತುವರಿಯಾಗಿ ವಿನಾಯಕ ನಗರ ಎಂಬ ಬಡಾವಣೆಯೂ ಸಹ ತಲೆ ಎತ್ತಿರುತ್ತದೆ.

ಇಡಿ ಮುಂದೆ ಡಿ.ಕೆ.ಶಿವಕುಮಾರ್ ಮತ್ತೆ ಹಾಜರು

ಬೆಂಗಳೂರು ಉತ್ತರ ತಾಲ್ಲೂಕಿನ ಚಿಕ್ಕಬಾಣಾವರ ಕೆರೆಯು ಸುಮಾರು 170 ಎಕರೆಗಳಷ್ಟು ವಿಸ್ತೀರ್ಣವಿದ್ದು, ಅದರ ಪೈಕಿ ಈಗಾಗಲೇ 20 ಎಕರೆಗಳಿಗೂ ಹೆಚ್ಚು ಕೆರೆ ಪ್ರದೇಶವನ್ನು ಸರ್ಕಾರೀ ನೆಲಗಳ್ಳರು ಕಬಳಿಸಿ ಅಕ್ರಮ ಬಡಾವಣೆಗಳನ್ನು ನಿರ್ಮಿಸಿರುತ್ತಾರೆ.

ಅದೇ ರೀತಿ ಯಲಹಂಕ ಹೋಬಳಿ ಹೆಬ್ಬಾಳ ವಿಧಾನಸಭಾ ಕ್ಷೇತ್ರ ಮತ್ತು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಹೆಬ್ಬಾಳ ಕೆರೆಯನ್ನು 1974 ರಲ್ಲಿ ಸರ್ವೆ ಮಾಡಿದ ಸಂದರ್ಭದಲ್ಲಿ ಕೆರೆಯ ಒಟ್ಟು ವಿಸ್ತೀರ್ಣ 75.95 ಹೆಕ್ಟೇರ್ (187.67 ಎಕರೆ) ಪ್ರದೇಶವಿರುವುದು ದಾಖಲೆಗಳಿಂದ ಸ್ಪಷ್ಟವಿರುತ್ತದೆ.

ಆದರೆ 1998 – 99 ರಲ್ಲಿ ಇದೇ ಕೆರೆಯನ್ನು ಮತ್ತೊಮ್ಮೆ ಸರ್ವೆ ಕಾರ್ಯ ನಡೆಸಿದಾಗ ಕೇವಲ 57.75 ಹೆಕ್ಟೇರ್ (142.70 ಎಕರೆ) ಪ್ರದೇಶಗಳಷ್ಟು ಮಾತ್ರವೇ ಇರುವ ದಾಖಲೆಗಳೂ ಸಹ ಲಭ್ಯವಿರುತ್ತವೆ.

ಸುಮಾರು 20 ಹೆಕ್ಟೇರ್ (49.42 ಎಕರೆ) ಗಳಷ್ಟು ಹಬ್ಬಾಳ ಕೆರೆಯ ಪ್ರದೇಶವು ಸಂಪೂರ್ಣವಾಗಿ ಒತ್ತುವರಿಯಾಗಿರುತ್ತದೆಯಲ್ಲದೇ, ಈ ರೀತಿ ಒತ್ತುವರಿಯಾದ ಸ್ಥಳದಲ್ಲಿಯೇ 27 ಅಂತಸ್ಥಿನ ಸುಮಾರು 106 ಐಷಾರಾಮಿ ಯುನಿಟ್ ಗಳನ್ನು ಒಳಗೊಂಡ ಬೃಹತ್ ಕಟ್ಟಡವು ತಲೆ ಎತ್ತಿರುತ್ತದೆ.

ಈ ರೀತಿ ಹಲವಾರು ಐತಿಹಾಸಿಕ ಕೆರೆಗಳನ್ನು ಭೂ ಕಬಳಿಕೆದಾರರು ತಮಗಿರುವ ರಾಜಕೀಯ ಮತ್ತು ಹಣದ ಪ್ರಭಾವಗಳಿಂದ ಕಬಳಿಸಿರುವ ದಾಖಲೆಗಳು ನಮ್ಮ ಮುಂದೆಯೇ ಅತ್ಯಂತ ಸ್ಪಷ್ಟವಾಗಿದ್ದರೂ ಸಹ ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕೆರೆಗಳ ವಿಭಾಗದ ಅಧಿಕಾರಿಗಳು ಈ ಎಲ್ಲಾ ಮಾಹಿತಿಗಳನ್ನು ದುರುದ್ದೇಶಪೂರ್ವಕವಾಗಿಯೇ ಎ. ಟಿ. ರಾಮಸ್ವಾಮಿ ಸಮಿತಿ ಮತ್ತು ಕೆ. ಬಿ. ಕೋಳಿವಾಡ ಸಮಿತಿಯ ಸದಸ್ಯರ ಗಮನಕ್ಕೆ ಬರದಂತೆ ಮುಚ್ಚಿ ಹಾಕುವಲ್ಲಿ ಯಶಸ್ವಿಯಾಗಿರುತ್ತಾರೆ.

ಸಿದ್ದು ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಅಖಾಡಕ್ಕಿಳಿಸಲು ಬಿಜೆಪಿ ಸಜ್ಜು

ಆದ ಕಾರಣ ಈ ಕೂಡಲೇ ಮೇಲೆ ತಿಳಿಸಿರುವ ಈ ನಾಲ್ಕು ಐತಿಹಾಸಿಕ ಕೆರೆಗಳ ಸರ್ವೆ ಕಾರ್ಯ ನಡೆಸಬೇಕೆಂದು ಮತ್ತು ಹಳೆಯ ದಾಖಲೆಗಳನ್ನು ಪರಿಶೀಲಿಸಿ ಒತ್ತುವರಿದಾರರ ಮತ್ತು ಅಮೂಲ್ಯ ಕೆರೆಗಳ ಪ್ರದೇಶಗಳನ್ನು ಒತ್ತುವರಿ ಮಾಡಿ ಕಬಳಿಕೆ ಮಾಡಲು ಅವಕಾಶ ಮಾಡಿಕೊಟ್ಟ ಭ್ರಷ್ಟ ಅಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದರ ಜೊತೆಗೆ, ನಿರ್ದಾಕ್ಷಿಣ್ಯವಾಗಿ ಮೇಲೆ ತಿಳಿಸಿರುವ ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಅವರು ಪತ್ರದಲ್ಲಿ ವಿನಂತಿಸಿಕೊಂಡಿದ್ದಾರೆ.

Articles You Might Like

Share This Article