ಬೆಂಗಳೂರು, ಆ.6- ಕೋವಿಡ್ ಸೋಂಕಿನಿಂದ ಕಳೆದ ಬಾರಿ ನಗರದಲ್ಲಿ ವಾರ್ಡ್‍ಗೆ ಒಂದು ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಕಲ್ಪಿಸಲಾಗಿತ್ತು. ಸೋಂಕು ಇನ್ನೂ ಸಂಪೂರ್ಣವಾಗಿ ನಿರ್ಮೂಲನೆಯಾಗದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಈ ಬಾರಿಯೂ ಸಹ ಕಳೆದ ವರ್ಷದ ನೀಯಮವೇ ಜಾರಿಯಲ್ಲಿರಲಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಈ ಬಾರಿ ಗಣೇಶ ಚತುರ್ಥಿ ಆಚರಣೆಗೆ ಪಾಲಿಕೆಯಿಂದ ಕೆಲ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಕಳೆದ ಬಾರಿ ವಾರ್ಡ್‍ಗೆ ಒಂದು ಮೂರ್ತಿಯನ್ನು ಪ್ರತಿಷ್ಠಾಪಿಸಲು ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಈ ಬಾರಿಯೂ ಸಹ ಹಳೆ ನೀಯಮಗಳೆ ಜಾರಿಯಲ್ಲಿರಲಿವೆ ಎಂದರು.
ಪಿಒಪಿ ಗಣೇಶ ಮೂರ್ತಿಗಳನ್ನು ತಯಾರು ಮಾಡಬಾರದೆಂಬ ನಿಯಮವಿದೆ. ಈ ಹಿನ್ನೆಲೆಯಲ್ಲಿ ಯಾರೂ ಸಹ ಪಿಒಪಿ ಮೂರ್ತಿಗಳನ್ನು ತಯಾರು ಮಾಡಿ ಮಾರಾಟ ಮಾಡಬಾರದು. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಮಾಲಿನ್ಯ ನಿಯಂತ್ರಣ ಮಂಡಳಿಯೊಂದಿಗೆ ದಾಳಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾ ಗುವುದೆಂದು ಎಚ್ಚರಿಕೆ ನೀಡಿದರು.
ಸ್ವಾತಂತ್ರೋತ್ಸದ ಅಮೃತ ಮಹೋತ್ಸವಕ್ಕೆ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಕಾರ್ಯಕ್ರಮ ಯಶಸ್ವಿಯಾಗಿ ನಡೆಯಬೇಕು ಮತ್ತು ಉತ್ತಮ ಗುಣಮಟ್ಟದ ಧ್ವಜವನ್ನು ವಿತರಣೆ ಮಾಡಬೇಕು. ದೋಷವಿರುವ ಧ್ವಜವನ್ನು ವಾಪಸ್ ನೀಡಿ ಚೆನ್ನಾಗಿರುವ ಬಾವುಟ ತೆಗೆದುಕೊಂಡು ಹೋಗಿ ವಿತರಣೆ ಮಾಡುವಂತೆ ಪಾಲಿಕೆ ವ್ಯಾಪ್ತಿಯ ಎಲ್ಲಾ ವಲಯದ ಜಂಟಿ ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದರು.
ಕೆಆರ್ ಮಾರುಕಟ್ಟೆ ಕಟ್ಟಡ ಬಿರುಕು ವಿಚಾರ ಕುರಿತಂತೆ ಮಾತನಾಡಿದ ಅವರು, ಈ ಸಂಬಂಧ ಪರಿಶೀಲನೆ ಮಾಡ ಲಾಗಿದೆ. ಯಾವ ಕಟ್ಟಡವೂ ಬಿರುಕು ಬಿಟ್ಟಿಲ್ಲ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.