ಗಣೇಶೋತ್ಸವಕ್ಕೆ ನಿರ್ಬಂಧ ಸಡಿಲ

Social Share

ಬೆಂಗಳೂರು,ಆ.11- ನಗರದಲ್ಲಿ ಗಣೇಶೋತ್ಸವ ಆಚರಣೆಗೆ ಕಳೆದ ಬಾರಿ ಇದ್ದ ನಿಯಮಗಳನ್ನು ಸಡಿಲಗೊಳಿಸಲಾಗಿದ್ದು, ಹೊಸದಾಗಿ ನಿಯಮಗಳನ್ನು ವಿಧಿಸಿಲ್ಲ. 2018ರಲ್ಲಿ ಅಳವಡಿಸಿದ್ದ ನೀತಿ-ನಿಯಮಗಳೇ ಮುಂದುವರೆಸಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾಹಿತಿ ನೀಡಿದರು.

ಗಣೇಶೋತ್ಸವ ಆಚರಣೆ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಬೆಂಗಳೂರುನಗರ ಪೊಲೀಸ್ ಮತ್ತು ಬಿಬಿಎಂಪಿ ಸಹಯೋಗದಲ್ಲಿ ಪುರಭವನದಲ್ಲಿಂದು ಹಮ್ಮಿಕೊಂಡಿದ್ದ ಸಾರ್ವಜನಿಕ ಶಾಂತಿ ಸೌಹಾರ್ದ ಸಭೆಯಲ್ಲಿ ಅವರು ಮಾತನಾಡಿದರು.

ಕೊರೊನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಸಾರ್ವಜನಿಕ ಗಣೇಶ ಉತ್ಸವ ಆಚರಣೆಗೆ ಅವಕಾಶ ಇರಲಿಲ್ಲ. ಈ ಬಾರಿ ಅವಕಾಶ ಕಲ್ಪಿಸಲಾಗಿದ್ದು, 2018-19ರಲ್ಲಿ ಅಳವಡಿಸಿದ್ದ ನಿಯಮಗಳನ್ನು ಮುಂದುವರೆಸಲಾಗುತ್ತದೆ. ಹೊಸದಾಗಿ ಯಾವುದೇ ನಿರ್ಬಂಧ ಹಾಕುವುದಿಲ್ಲ ಎಂದರು.

ನಾವು ಮಾಡುವ ವಿಜೃಂಭಣೆ ಆಚರಣೆಯಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗಬಾರದು. ತುರ್ತು ಸೇವೆಗಳನ್ನು ಗಮನದಲ್ಲಿಟ್ಟುಕೊಂಡು ಕೆಲವು ನಿಯಮಗಳನ್ನು ಹಾಕಲಾಗುತ್ತದೆ. ನಾವು ಹಬ್ಬ ಆಚರಣೆಗೆ ಹಾಕುವ ಪೆಂಡಾಲ್ ಅಥವಾ ರಸ್ತೆ ಬಂದ್ ಮಾಡುವುದರಿಂದ ತೊಂದರೆಯಾಗುತ್ತದೆ. ತುರ್ತು ಸೇವೆಗಾಗಿ ಆ್ಯಂಬುಲೆನ್ಸ್‍ಗೆ ಜಾಗ ಸಿಗದಿರಬಹುದು. ಒಂದು ವೇಳೆ ಅವಘಡ ಸಂಭವಿಸಿದರೆ ನಿಗದಿತ ಸಮಯಕ್ಕೆ ಅಗ್ನಿಶಾಮಕ ದಳ ಸ್ಥಳಕ್ಕೆ ಬರಲು ತಡವಾಗಬಹುದು ಎಂದರು.

ಸಾರ್ವಜನಿಕರ ಭದ್ರತಾ ದೃಷ್ಟಿಯಿಂದ ಸಿಸಿಟಿವಿಗಳನ್ನು ಅಳವಡಿಸಬೇಕು. ಗಣಪತಿ ಪ್ರತಿಷ್ಠಾಪನಾ ಮಂಡಳಿಗಳು ಲಕ್ಷಾಂತರ ಹಣ ಖರ್ಚು ಮಾಡಿ ಉತ್ಸವ ಮಾಡುತ್ತಾರೆ. ಪ್ರತಿ ಪ್ರದೇಶಗಳಲ್ಲೂ ಭದ್ರತೆ ನೀಡಲು ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಸಿಸಿಟಿವಿ ಅಳವಡಿಸುವುದು ಸೂಕ್ತ ಎಂದರು.

ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಏಕಗವಾಕ್ಷಿ ಪದ್ದತಿ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಪೆಂಡಾಲ್ ಬಳಿ ಲೈಟ್ ವ್ಯವಸ್ಥೆ ಉತ್ತಮವಾಗಿರಬೇಕು. ಮೂರ್ತಿ ವಿಸರ್ಜನೆ ಮಾಡುವ ಸಿಬ್ಬಂದಿಗೂ ಹೆಚ್ಚಿನ ತರಬೇತಿ ನೀಡಲಾಗುತ್ತಿದೆ.
ನಗರದಲ್ಲಿ ನಾಲ್ಕು ಕಡೆ ದೊಡ್ಡ ದೊಡ್ಡ ಗಣೇಶಮೂರ್ತಿಗಳ ವಿಸರ್ಜನೆಗೆ ವ್ಯವಸ್ಥೆ ಮಾಡಲಾಗಿದೆ. ಕ್ರೇನ್ ವ್ಯವಸ್ಥೆ ಕೂಡ ಕಲ್ಪಿಸಲಾಗಿದ್ದು, ಕಲ್ಯಾಣಿಗಳ ಸ್ವಚ್ಚ ಕಾರ್ಯ ಭರದಿಂದ ಸಾಗಿದೆ ಎಂದರು.

ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಮಾತನಾಡಿ, ಕೋವಿಡ್‍ನಿಂದ ಕಳೆದೆರಡು ವರ್ಷ ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶವಿರಲಿಲ್ಲ. ಈ ಬಾರಿ 2019ರಲ್ಲಿ ಇದ್ದ ನಿಯಮಗಳೇ ಜಾರಿಯಲ್ಲಿರುತ್ತವೆ. ಯಾವುದನ್ನು ಬದಲಿಸಿಲ್ಲ. ನಗರದ ನಾಗರಿಕರಿಗೆ ಆಗುವ ಸಮಸ್ಯೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೆಲವು ನೀತಿ ನಿಯಮಗಳನ್ನು ಮಾಡಲಾಗಿದೆ.

ಗಣೇಶಮೂರ್ತಿ ಪ್ರತಿಷ್ಠಾಪಿಸಲು ಹಾಕುವ ಪೆಂಡಾಲ್‍ನಿಂದ ಆ್ಯಂಬುಲೆನ್ಸ್, ಅಗ್ನಿಶಾಮಕ ವಾಹನಗಳು ಹೋಗಲು ಸಮಸ್ಯೆಯಾಗುತ್ತದೆ. ಆದ್ದರಿಂದ ಪೂರ್ವನಿಯೋಜಿತವಾಗಿ ಭದ್ರತಾ ದೃಷ್ಟಿಯಿಂದ ಸಿಸಿಟಿವಿಗಳನ್ನು ಅಳವಡಿಸಬೇಕು. ಅಗತ್ಯಬಿದ್ದರೆ ಸ್ವಯಂ ಸೇವಕರು ಹಾಗೂ ಸಿಬ್ಬಂದಿಯನ್ನು ನಿಯೋಜಿಸಲು ಏಕಗವಾಕ್ಷಿ ಪದ್ದತಿ ಜಾರಿ ಮಾಡಲಾಗಿದೆ ಎಂದರು.

ಸಾರ್ವಜನಿಕ ಸ್ಥಳದಲ್ಲಿ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ ಹಾಕಬೇಡಿ ಉತ್ಸವವನ್ನು ಶಾಂತಿಯುತವಾಗಿ ನಡೆಯಲು ಸಹಕಾರ ಕೊಡುತ್ತೇವೆ. ಇದಕ್ಕೆ ನಿಮ್ಮ ಸಹಕಾರವೂ ಅಗತ್ಯ ಎಂದರು. ಈ ವೇಳೆ ಸಾರ್ವಜನಿಕರು ಮನವಿಗಳ ಮಹಾಪೂರವೇ ಹರಿಸಿದ್ದಾರೆ. ಗಣೇಶ ವಿಸರ್ಜನೆ ವೇಳೆ ಬಾರ್‍ಗಳನ್ನು ಮುಚ್ಚಿಸಬೇಕು. ಇದರಿಂದ ಯಾವುದೇ ಗಲಾಟೆಗಳು ನಡೆಯುವುದಿಲ್ಲ ಎಂದು ಧಾರ್ಮಿಕ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದರು.

ಮೂರ್ತಿ ವಿಸರ್ಜನೆಗೆ ಕಲ್ಯಾಣಿಗಳನ್ನು ಇನ್ನು ಸ್ವಚ್ಚ ಮಾಡಿಲ್ಲ. ಪಿಒಪಿ ಮೂರ್ತಿಗಳನ್ನು ಕೆರೆಗಳಲ್ಲಿ ವಿಸರ್ಜನೆ ಮಾಡುವುದಿಲ್ಲ. ಪೂಜೆಗೆ ಅವಕಾಶ ಮಾಡಿಕೊಟ್ಟರೆ ಸಾಕು ಎಂದು ಸಾರ್ವಜನಿಕರು ಕೋರಿದರು.

ಸಭೆಯಲ್ಲಿ ಸಂಚಾರಿ ವಿಭಾಗದ ಪೊಲೀಸ್ ಆಯುಕ್ತ ರವಿಕಾಂತೇ ಗೌಡ, ಪೂರ್ವ ವಲಯದ ಹೆಚ್ಚುವರಿ ಪೊಲೀಸ್ ಆಯುಕ್ತ ಸುಬ್ರಹ್ಮಣ್ಯೇಶ್ವರ ರಾವ್, ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಸೇರಿದಂತೆ ಎಲ್ಲಾ ವಿಭಾಗದ ಡಿಸಿಪಿಗಳು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ ಶ್ರೀನಿವಾಸಲು, ಜಿಲ್ಲಾ ಅಗ್ನಿಶಾಮಕ ಅಕಾರಿ ಹೇಮಂತ್, ಬೆಸ್ಕಾಂ ಇಲಾಖೆಯ ಅಭಿಯಂತರರು, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಕಾರಿಗಳು, ಬೆಸ್ಕಾಂ, ಗಣೇಶ ಪ್ರತಿಷ್ಠಾನದ ಆಯೋಜಕರು ಸೇರಿದಂತೆ ಎಲ್ಲ ಸಮುದಾಯದ ಮುಖಂಡರು ಹಾಜರಿದ್ದರು.

Articles You Might Like

Share This Article