ಬೆಂಗಳೂರು, ಫೆ.19- ಬಾಕಿ ಬಿಲ್ ಪಾವತಿಗೆ ಆಗ್ರಹಿಸಿ ಬಿಬಿಎಂಪಿ ಕಸ ಗುತ್ತಿಗೆದಾರರು ಧರಣಿ ಮುಂದುವರೆಸಿರುವ ಹಿನ್ನೆಲೆಯಲ್ಲಿ ನಗರದ ಬಹುತೇಕ ಕಡೆ ತ್ಯಾಜ್ಯ ಸಂಗ್ರಹವಾಗುತ್ತಿದ್ದು, ಮಾರುಕಟ್ಟೆ, ಸಾರ್ವಜನಿಕ ಪ್ರದೇಶ ಗಬ್ಬೆದ್ದು ಹೋಗಿದೆ. ವಿವಿಧ ರೀತಿಯ ಪ್ಲಾಸ್ಟಿಕ್, ತರಕಾರಿ, ಕೊಳೆತ ವಸ್ತುಗಳನ್ನು ಒಳಗೊಂಡ ತರಹೇವಾರಿ ಕಸ ಇದ್ದು ಅಲ್ಲಲ್ಲಿ ನಾಯಿ, ಹಂದಿ, ದನ ಕರುಗಳು ಅದರಲ್ಲಿಯೇ ಬಿದ್ದು ಹೊರಳಾಡುತ್ತಿರುತ್ತವೆ.
ಇನ್ನು ತ್ಯಾಜ್ಯ ವಿಲೇವಾರಿ ಮಾಡಬೇಕಾದ ಬಿಬಿಎಂಪಿ ನಿರ್ಲಕ್ಷ್ಯ ವಹಿಸಿದೆ ಎಂದು ತರಕಾರಿ ವ್ಯಾಪಾರಿಗಳು, ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು. ಪ್ರಮುಖವಾಗಿ ಕೆಆರ್ ಮಾರುಕಟ್ಟೆ, ಯಶವಂತಪುರ, ರೆಸಲ್ ಮಾರುಕಟ್ಟೆ ಸೇರಿದಂತೆ ದಿನನಿತ್ಯವೂ ವ್ಯಾಪಾರ ವಹಿವಾಟು ನಡೆಯುತ್ತಿರುತ್ತದೆ.
ಸುತ್ತಲೂ ಸಾವಿರಾರು ಅಕ ಅಂಗಡಿಗಳು, ಮನೆಗಳು ಇದ್ದು, ಪಕ್ಕದಲ್ಲಿಯೇ ಜನವಸತಿ ಪ್ರದೇಶ ಇದೆ. ಸಾಕಷ್ಟು ಜನಸಂದಣಿ
ಇರುವ ಈ ಪ್ರದೇಶವನ್ನು ಸ್ವಚ್ಛವಾಗಿರಿಸಿಕೊಳ್ಳುವುದಕ್ಕೆ ಬಿಬಿಎಂಪಿ ಮುಂದಾಗಿಲ್ಲ. ಸಂತೆ ಮಾರುಕಟ್ಟೆಗೆ ಹೊಂದಿ ಕೊಂಡೇ ಕೋಳಿ ಮಾಂಸದ ಅಂಗಡಿಗಳು ಸಾಲುಗಟ್ಟಿದ್ದು ಎಲ್ಲ ಹೊಲಸು, ಮಾಂಸದ ತ್ಯಾಜ್ಯವನ್ನೆಲ್ಲ ಮಾರುಕಟ್ಟೆಯ ಚರಂಡಿಯಲ್ಲಿ ಬಿಸಾಡಲಾಗುತ್ತಿದೆ ಎಂದು ಸಾರ್ವಜನಿಕರು ದೂರಿದರು.
ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಎಸ್.ಎನ್. ಬಾಲಸುಬ್ರಹ್ಮಣ್ಯ ಮಾತನಾಡಿ, ಗುತ್ತಿಗೆದಾರರು ಎಲ್ಲರಂತೆ ಮನುಷ್ಯರು ಎಂಬುದನ್ನು ಅಕಾರಿಗಳು ಅರ್ಥ ಮಾಡಿಕೊಳ್ಳಬೇಕು. ಸಮಯಕ್ಕೆ ಸರಿಯಾಗಿ ಹಣ ಬಿಡುಗಡೆ ಮಾಡದಿದ್ದರೆ ಸಾವಿ ರಾರು ಕುಟುಂಬಗಳು ಬೀದಿಗೆ ಬೀಳುತ್ತದೆ. ಅಲ್ಲದೆ, ನಾವೂ ಬಾಕಿ ಹಣ ಪಾವತಿ ಮಾಡುವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದರು.
ಮನೆ-ಮನೆಯಿಂದ ಕಸ ಸಂಗ್ರಹ ಮಾಡಿ ವಿಲೇವಾರಿ ಮಾಡುವ ಮೂಲಕ ಬೆಂಗಳೂರು ನಗರದ ಜನರ ಕೆಲಸಗಳಲ್ಲಿ ನಾವು ನಿತ್ಯ ಪ್ರತ್ಯಕ್ಷವಾಗಿ ಪಾಲ್ಗೊಳ್ಳುತ್ತಿದ್ದೇವೆ. ನಾವು ಮಾಡಿದ ಕೆಲಸಕ್ಕೆ ತಕ್ಕಂತೆ ನೀಡಬೇಕಾದ ಹಣವನ್ನು ಬಿಬಿಎಂಪಿ ಬಿಡುಗಡೆ ಮಾಡದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.
ಬಿಬಿಎಂಪಿ ವಿಶೇಷ ಆಯುಕ್ತರಾದ ತುಳಸಿ ಮದ್ದಿನೇನಿ ಅವರ ಮೊಂಡುತನ, ಸರ್ವಾಕಾರಿ ಧೋರಣೆಯಿಂದ ಈ ಸಂಕಷ್ಟ ಬಂದಿದೆ. ಕಸ ವಿಲೇವಾರಿ ಜತೆಗೆ ಬಿಬಿಎಂಪಿಯ ಕಲ್ಯಾಣ ಕಾರ್ಯಕ್ರಮಗಳು, ಕಾಮಗಾರಿ ಬಿಲ್ಲುಗಳು ಕೂಡ ಪಾವತಿಯಾಗಿಲ್ಲ. ಇದರಿಂದ ಬೆಂಗಳೂರಿನ ಅಭಿವೃದ್ದಿ ಕುಂಠಿತವಾಗಲಿದೆ ಎಂದರು.
