ಬಿಬಿಎಂಪಿಯವರು ಕಾನೂನಿಗಿಂತ ಮೇಲಿದ್ದೇವೆ ಎಂದು ಭಾವಿಸಿದ್ದಾರೆ : ಹೈಕೋರ್ಟ್ ಗರಂ

Social Share

ಬೆಂಗಳೂರು,ಮಾ.5- ಮಿಟ್ಟಗಾನಹಳ್ಳಿ ಕ್ವಾರಿಯಲ್ಲಿ ಕಸ ವಿಲೇವಾರಿಗೆ ನಿರ್ಬಂಧ ವಿಧಿಸಿದ್ದರೂ ಪದೇ ಪದೇ ಆದೇಶ ಉಲ್ಲಂಘಿಸಿರುವ ಬಿಬಿಎಂಪಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, ಮುಖ್ಯ ಆಯುಕ್ತರನ್ನು ಜೈಲಿಗೆ ಕಳುಹಿ ಸುತ್ತೇವೆ ಎಂಬ ಎಚ್ಚರಿಕೆ ನೀಡಿದೆ.
ಪ್ರಕರಣದ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ಪೀಠ, ಬಿಬಿಎಂಪಿ ಆಯುಕ್ತರ ನಿರ್ಲಕ್ಷ್ಯ ಧೋರಣೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು.
ಹೈಕೋರ್ಟ್ ಆದೇಶ ಎಂದರೆ ಏನು ಎಂಬುದನ್ನು ಅರ್ಥ ಮಾಡಿಸುತ್ತೇವೆ. ಆಯುಕ್ತರನ್ನು ಜೈಲಿಗೆ ಕಳುಹಿಸುತ್ತೇವೆ. ಕಾನೂನು ಎಂದರೆ ಏನು ಎಂಬುದು ಅವರಿಗೆ ಮನವರಿಕೆಯಾಗಬೇಕು. ನಾವು ಬಿಬಿಎಂಪಿಯ ಆಯುಕ್ತರ ನಡೆಯನ್ನು ಗಮನಿಸುತ್ತಿದ್ದೇವೆ. ಪ್ರತಿ ದಿನ ಇದೇ ಸಮಸ್ಯೆಯಾಗಿದೆ. ಇದರಿಂದ ನಮಗೆ ಸಾಕಾಗಿ ಹೋಗಿದೆ. ಬಿಬಿಎಂಪಿಯವರು ಕಾನೂನಿಗಿಂತ ಮೇಲಿದ್ದೇವೆ ಎಂದು ಭಾವಿಸಿದ್ದಾರೆ. ಈ ಅಧಿಕಾರಿಗಳಿಗೆ ಸರಿಯಾದ ಸಂದೇಶ ರವಾನಿಸಬೇಕಾಗಿದೆ ಎಂದು ನ್ಯಾಯಮೂರ್ತಿಗಳು ಆಕ್ರೋಶ ವ್ಯಕ್ತಪಡಿಸಿದರು.
ಇದು ಕರುಣೆ ತೋರಲು ಅರ್ಹವಾದ ಪ್ರಕರಣವಲ್ಲ. ಯಾವುದೇ ಕಾನೂನು ಕೂಡ ಇವರನ್ನು ರಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಪೀಠದ ಎದುರು ಹಾಜರಾದ ಮುಖ್ಯ ಆಯುಕ್ತ ಗೌರವ್‍ಗುಪ್ತಬೇಷರತ್ ಕ್ಷಮೆಯಾಚಿಸಿದರು.
ಈಗ ಮಾಲಿನ್ಯ ನಿಯಂತ್ರಣ ಮಂಡಲಿ ಅನುಮತಿ ನೀಡಿದೆ. ಹೀಗಾಗಿ ಈ ಬಾರಿ ಕರುಣೆ ತೋರಬೇಕೆಂದು ನ್ಯಾಯಾಲಯಕ್ಕೆ ಬಿಬಿಎಂಪಿ ಪರ ಹಿರಿಯ ವಕೀಲ ಉದಯ್‍ಹೊಳ್ಳ ಮನವಿ ಮಾಡಿದರು. ಈ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತರೆ ಪ್ರಮಾಣ ಪತ್ರ ಸಲ್ಲಿಸಬೇಕು ಮತ್ತು ಅವರ ನಡವಳಿಕೆಗೆ ಕಾರಣವನ್ನು ವಿವರಿಸಬೇಕೆಂದು ಸೂಚನೆ ನೀಡಿತು.

Articles You Might Like

Share This Article