ಬೆಂಗಳೂರು, ಸೆ.19- ಸಿಎಜಿ ವರದಿ ಜಾರಿಗೊಳಿಸದ ಬಿಬಿಎಂಪಿ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ನೇತೃತ್ವದ ಹೈಕೋರ್ಟ್ ವಿಭಾಗಿಯ ಪೀಠ ಈ ಕೂಡಲೆ ಸಿಎಜಿ ವರದಿ ಜಾರಿ ಅನುಷ್ಠಾನಕ್ಕೆ ಮೂವರು ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸುವಂತೆ ಸೂಚನೆ ನೀಡಿದೆ.
ಹೊಸದಾಗಿ ರಚನೆಯಾಗುವ ಸಮಿತಿ ಸಿಎಜಿ ವರದಿಯಲ್ಲಿ ಪ್ರಸ್ತಾಪವಾಗಿರುವ ರಾಜಕಾಲುವೆ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಬೇಕು ಹಾಗೂ 15 ದಿನಗಳಿಗೊಮ್ಮೆ ವರದಿ ಜಾರಿಯ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಆದೇಶಿಸಿ ವಿಚಾರಣೆಯನ್ನು ಸೆ.30ಕ್ಕೆ ಮುಂದೂಡಿದೆ.
ಮಳೆಯಿಂದಾಗಿ ಬೆಂಗಳೂರಿನಲ್ಲಿ ಸಂಭವಿಸಿದ್ದ ಪ್ರವಾಹ ಪರಿಸ್ಥಿತಿ ಕುರಿತಂತೆ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಹಾಗೂ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ನೇತೃತ್ವದ ವಿಭಾಗೀಯ ಪೀಠ ಈ ಮಹತ್ವದ ಆದೇಶ ಹೊರಡಿಸಿದೆ.
ಇದನ್ನೂ ಓದಿ : ಆಟೋ ಚಾಲಕನಿಗೆ ಹೊಡೀತು 25 ಕೋಟಿ ರೂ. ಬಂಪರ್ ಲಾಟರಿ..!
2021ರ ಸೆಪ್ಟೆಂಬರ್‍ನಲ್ಲಿ ಸಿಎಜಿ ವರದಿ ಬಂದಿದ್ದರೂ ವರದಿಯಲ್ಲಿ ಪ್ರಸ್ತಾಪಿಸಲಾಗಿದ್ದ ರಾಜಕಾಲುವೆ ಒತ್ತುವರಿ ತೆರವಿಗೆ ಸ್ಪಂದಿಸದೆ ಕೇವಲ ಅರೆ ಬರೆ ಒತ್ತುವರಿ ತೆರವು ಮಾಡುತ್ತಿದ್ದ ಬಿಬಿಎಂಪಿ ಕ್ರಮಕ್ಕೆ ನ್ಯಾಯಾಲಯ ಆಕ್ರೋಶ ವ್ಯಕ್ತಪಡಿಸಿದೆ.
ಸಿಎಜಿ ವರದಿಯಲ್ಲಿ 2626 ಒತ್ತುವರಿಯಾಗಿದೆ ಎಂದು ಸೂಚಿಸಲಾಗಿತ್ತು. ಅದರ ಪೈಕಿ 2024 ಒತ್ತುವರಿ ತೆರವುಗೊಳಿಸಲಾಗಿದ್ದು, 602 ಒತ್ತುವರಿ ತೆರವು ಬಾಕಿ ಇದೆ ಎಂದು ಬಿಬಿಎಂಪಿ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದರು.
ವಕೀಲರ ಹೇಳಿಕೆ ನಂತರ ಬಿಬಿಎಂಪಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಲಯ ಉಳಿದ ಒತ್ತುವರಿಗಳ ತೆರವಿಗೆ ಕ್ರಮ ಕೈಗೊಳ್ಳಬೇಕು ಹಾಗೂ ಮೂವರು ಅಧಿಕಾರಿಗಳ ಸಮಿತಿ ರಚನೆ ಮಾಡಿ ಸಿಎಜಿ ವರದಿ ಜಾರಿಗೆ ಮುಂದಾಗಬೇಕು ಹಾಗೂ 15 ದಿನಗಳಿಗೊಮ್ಮೆ ಒತ್ತುವರಿ ತೆರವಿನ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕು. ಒಂದು ವೇಳೆ ನ್ಯಾಯಾಲಯದ ಆದೇಶ ಪಾಲನೆ ಮಾಡದಿದ್ದರೆ ಅದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದೆ.