ಬೆಂಗಳೂರು,ಸೆ.15- ಮಳೆಯಾದಾಗ ಅನಾಹುತ ಸಂಭವಿಸುವ ಪ್ರದೇಶಗಳನ್ನು ಬಿಟ್ಟು ಹೊರ ಪ್ರದೇಶದಲ್ಲಿರುವ ರಾಜಕಾಲುವೆ ಒತ್ತುವರಿ ತೆರವು ಮಾಡುತ್ತಿರುವ ಬಿಬಿಎಂಪಿ ಕ್ರಮಕ್ಕೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ನಗರದ ಪ್ರಮುಖ ಬಡಾವಣೆಗಳಾದ ರೈನ್ ಬೋ ಲೇಔಟ, ಇಕೋ ಸ್ಪೇಸ್, ಎಪ್ಸಿಲಾನ್ ಪ್ರದೇಶಗಳು ಇತ್ತೀಚೆಗೆ ಬಿದ್ದ ಭಾರಿ ಮಳೆಯಿಂದ ಸಂಪೂರ್ಣ ಕೆರೆಗಳಾಗಿ ಪರಿಣಮಿಸಿದ್ದವು.
ಸತತ ನಾಲ್ಕು ದಿನ ಈ ಬಡಾವಣೆಗಳಲ್ಲಿ ನೀರು ನಿಂತಿದ್ದರಿಂದ ಅಲ್ಲಿ ಜನ ವಾಸಿಸಲು ಸಾಧ್ಯವಾಗಿರಲಿಲ್ಲ. ಇಷ್ಟೆಲ್ಲಾ ಆದರೂ ಆ ಪ್ರದೇಶದಲ್ಲಿ ಒತ್ತುವರಿ ತೆರವು ಮಾಡದೆ ಬೇರೆ ಪ್ರದೇಶಗಳಲ್ಲಿ ರಾಜಕಾಲುವೆ ಒತ್ತುವರಿ ತೆರವುಗೊಳಿಸಲಾಗುತ್ತಿದೆ.
ಸತತ ನಾಲ್ಕು ದಿನ ಕೆರೆಯಂತಾಗಿದ್ದ ಬಡಾವಣೆಗಳು ನಗರದ ಪ್ರತಿಷ್ಠಿತ ರಾಜಕಾರಣಿಗಳಿಗೆ ಸೇರಿದ್ದು ಎಂಬ ಗುಮಾನಿ ಇದೆ. ಹೀಗಾಗಿಯೇ ಬಿಬಿಎಂಪಿಯವರು ಈ ಬಡಾವಣೆಗಳನ್ನು ಬಿಟ್ಟು ಬೇರೆ ಪ್ರದೇಶಗಳಲ್ಲಿ ಒತ್ತುವರಿ ಮಾರ್ಕಿಂಗ್ ಮಾಡಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಕೆಲವರು ಆರೋಪಿಸಿದ್ದಾರೆ.
ಇದನ್ನೂ ಓದಿ : ವಿಧಾನಸಭೆ ಕಲಾಪಕ್ಕೆ ಸಚಿವರು ಚಕ್ಕರ್, ಸ್ಪೀಕರ್ ತರಾಟೆ
460ಕ್ಕೂ ಹೆಚ್ಚು ವಿಲ್ಲಾಗಳಿರುವ ರೈನ್ ಬೋ ಲೇಔಟ್ ಕೆರೆ ಜಾಗ ಒತ್ತುವರಿ ಮಾಡಿರೋದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೂ ಮನೆ ಖಾಲಿ ಮಾಡಿ ಎಂದು ನೋಟೀಸ್ ನೀಡಿರುವ ಕಂದಾಯ ಇಲಾಖೆಯವರು ಇದೀಗ ಜಾಣ ಮೌನಕ್ಕೆ ಜಾರಿದ್ದಾರೆ.
ಇನ್ನು ಇಕೋ ಸ್ಪೇಸ್ ಅನ್ನು ಐದು ಕಿ.ಮೀ ರಾಜಕಾಲುವೆ ಒತ್ತುವರಿ ಮಾಡಿ ನಿರ್ಮಾಣ ಮಾಡಲಾಗಿದೆ. ಆದರೆ, ಈ ಸ್ಥಳ ಕೂಡ ಪ್ರಭಾವಿ ರಾಜಕಾರಣಿ ಒಡೆತನದ್ದು, ಜೊತೆಗೆ ಐಟಿ ಪಾರ್ಕ್ ಅನ್ನೊ ಕಾರಣಕ್ಕೆ ಡೆಮಾಲಿಷನ್ ಮಾಡುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಇನ್ನು ಎಪ್ಸಿಲಾನ್ ವಿಲ್ಲಾಗಳನ್ನು ರಾಜಕಾಲುವೆ ಗಾತ್ರ ಚಿಕ್ಕದು ಮಾಡಿ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಈ ವಿಲ್ಲಾಗಳನ್ನು ದೇಶದ ಶ್ರೀಮಂತ ವ್ಯಕ್ತಿಗಳು 15 ರಿಂದ 20 ಕೋಟಿ ರೂ.ಗಳಿಗೆ ಖರೀದಿಸಿ ವಾಸಿಸುತ್ತಿದ್ದಾರೆ ಎಂಬ ಕಾರಣಕ್ಕೆ ಇತ್ತ ಜೆಸಿಬಿಗಳು ಸುಳಿಯುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.
ಇದನ್ನೂ ಓದಿ : “ರೈತರಿಗೆ 7 ಗಂಟೆ ವಿದ್ಯುತ್ ಪೂರೈಕೆ ಮಾಡಲು ಸರ್ಕಾರ ಬದ್ಧ”
ಮುಂದುವರೆದ ಮಾರ್ಕಿಂಗ್ ಕಾರ್ಯ: ನಿನ್ನೆ ಬಾಗ್ಮನೆ ಟೆಕ್ ಪಾರ್ಕ್, ಪೂರ್ವ ಪಾರ್ಕ್ ವಿಲ್ಲಾ ಮತ್ತಿತರ ಕಡೆ ಮಾರ್ಕಿಂಗ್ ಕಾರ್ಯ ನಡೆಸಿದ್ದ ಬಿಬಿಎಂಪಿ ಅದಿಕಾರಿಗಳು ಇಂದು ಇತರ ಕೆಲ ಪ್ರದೇಶಗಳಲ್ಲಿ ಮಾರ್ಕಿಂಗ್ ಕಾರ್ಯ ಮುಂದುವರೆಸಿದ್ದಾರೆ.
ಗರುಡಾಚಾರ್ ಪಾಳ್ಯ ಕೆರೆಯಿಂದ ಮಹದೇವಪುರ ಕೆರೆಗೆ ಕನೆP್ಟ ಆಗೋ ರಾಜಕಾಲುವೆ ಒತ್ತುವರಿ ಮಾಡಿ ಕಳೆದ 2004ರಿಂದ ಹಲವಾರು ಬೃಹತ್ ವಿಲ್ಲಾ, ಅಪಾರ್ಟ್ಮೆಂಟ್ಗಳನ್ನು ನಿರ್ಮಿಸಿದ್ದು, ಈ ಪ್ರದೇಶಗಳ ಒತ್ತುವರಿ ಪ್ರದೇಶಗಳನ್ನು ಗುರುತಿಸಲಾಗುತ್ತಿದೆ.
ತಡೆಯಾಜ್ಞೆ: ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ ಒಡೆತನದ ನಲಪಾಡ್ ಅಕಾಡೆಮಿ ಶಿಕ್ಷಣ ಸಂಸ್ಥೆಯ ಒತ್ತುವರಿ ತೆರವು ಕಾರ್ಯಾ ಚರಣೆಗೆ ಹೈಕೋರ್ಟ್ ತಡೆ ನೀಡಿದೆ ಎಂದು ಬಿಬಿಎಂಪಿ ಕಾರ್ಯಪಾಲಕ ಅಭಿಯಂತರರಾದ ಮಾಲತಿ ತಿಳಿಸಿದ್ದಾರೆ.
ಸಂಸ್ಥೆಯವರು ಜಂಟಿ ಸರ್ವೇಗೆ ಆಗ್ರಹಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅವರಿಗೆ ಶುಕ್ರವಾರದವರೆಗೆ ಒತ್ತುವರಿ ತೆರವು ಮಾಡದಂತೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಒತ್ತುವರಿ ತೆರವು ಕಾರ್ಯಾಚರಣೆಗೆ ಬ್ರೇಕ್: ಕಳೆದ ಮೂರು ದಿನಗಳಿಂದ ನಿರಂತರವಾಗಿ ನಡೆಸುತ್ತಿದ್ದ ಒತ್ತುವರಿ ತೆರವು ಕಾರ್ಯಾಚರಣೆಗೆ ಬಿಬಿಎಂಪಿ ಹಾಗೂ ಕಂದಾಯ ಇಲಾಖೆ ಇಂದು ಬ್ರೇಕ್ ಹಾಕಿದೆ. ಕಾನೂನು ತಜ್ಞರ ಸಲಹೆ ಮೇರೆಗೆ ತೆರವು ಕಾರ್ಯಾಚರಣೆಗೆ ಬ್ರೇಕ್ ಹಾಕಿ ಕೇವಲ ಒತ್ತುವರಿಯಾಗಿರುವ ರಾಜಕಾಲುವೆ ಹಾಗೂ ಕೆರೆಗಳ ಸರ್ವೇ ಕಾರ್ಯ ನಡೆಸಲಾಗುತ್ತಿದೆ.
ಒತ್ತುವರಿ ಮಾಡಿಕೊಂಡವರಿಗೆ ಮೊದಲು ನೋಟೀಸ್ ಜಾರಿ ಮಾಡಿ 7 ದಿನಗಳ ನಂತರ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.