ಇಲ್ಲಿದೆ ನೋಡಿ ಕೆರೆಗಳನ್ನು ನುಂಗಿ ನೀರುಕುಡಿದು ನಿವೇಶನ ಪಡೆದ ರಾಜಕಾರಣಿಗಳ ಪಟ್ಟಿ

Social Share

ಕೆರೆ ಮುಚ್ಚಿ ಬಡಾವಣೆ ನಿರ್ಮಿಸಿದ ಬಿಡಿಎನಲ್ಲಿ ನಿವೇಶನ ಪಡೆದಿರುವ, ಬಂಗಲೆ ಕಟ್ಟಿರುವವರ ಪಟ್ಟಿ ನಗರದಲ್ಲಿದ್ದ 23ಕ್ಕೂ ಹೆಚ್ಚು ಕೆರೆಗಳನ್ನು ನುಂಗಿ ನೀರು ಕುಡಿದು ಬಿಡಿಎ ನಿರ್ಮಿಸಿರುವ ಬಡಾವಣೆಗಳಲ್ಲಿ ಜಿ ಕೆಟಗರಿ ಕೋಟಾದಲ್ಲಿ ನಿವೇಶನ ಪಡೆದು ಬಂಗಲೆ ನಿರ್ಮಿಸಿಕೊಂಡು ವಾಸಿಸುತ್ತಿರುವ ರಾಜಕಾರಣಿಗಳ ಪಟ್ಟಿ ಈ ಸಂಜೆಗೆ ಲಭ್ಯವಾಗಿದೆ.

ಲಭ್ಯವಿರುವ ಮಾಹಿತಿಗಳ ಪ್ರಕಾರ ಪ್ರಮುಖ ಮೂರು ಪಕ್ಷಗಳ ಪ್ರಭಾವಿ ರಾಜಕಾರಣಿಗಳಿರುವುದು ವಿಶೇಷವಾಗಿದೆ. ಅದರಲ್ಲೂ ಕೆರೆ ಒತ್ತುವರಿ ತೆರವುಗೊಳಿಸಿ ಎಂದು ಬೊಬ್ಬೆ ಹೊಡೆಯುತ್ತಿರುವ ಶಾಸಕರೇ ಕೆರೆ ಒತ್ತುವರಿ ಮಾಡಿ ನಿರ್ಮಿಸಿರುವ ಬಿಡಿಎ ಬಡಾವಣೆ ನಿವಾಸಿಗಳಾಗಿದ್ದಾರೆ.

ಕೆರೆ ಮೇಲೆ ನಿವೇಶನ ಪಡೆದ ರಾಜಕಾರಣಿಗಳ ಪಟ್ಟಿ ಹೀಗಿದೆ:
ಸಚಿವ ಗೋವಿಂದ ಕಾರಜೋಳ ಅವರು 1998ರಲ್ಲಿ ತಮ್ಮ ಶಾಸಕ ಸ್ಥಾನದ ಕೋಟಾದಡಿ ಆರ್‍ಎಂವಿ 2ನೇ ಹಂತದಲ್ಲಿ 5್ಡ080 ವಿಸ್ತೀರ್ಣದ 105ನೇ ನಂಬರಿನ ನಿವೇಶನ ಪಡೆದುಕೊಂಡಿದ್ದಾರೆ. ಆರ್‍ಎಂವಿ 2ನೇ ಹಂತದ ಬಡಾವಣೆಯನ್ನು ಗೆದ್ದಲ್ಲಹಳ್ಳಿ ಕೆರೆ ಹಾಗೂ ಚಿಕ್ಕಮಾರನಹಳ್ಳಿ ಕೆರೆಗಳನ್ನು ಮುಚ್ಚಿ ಬಿಡಿಎ ಬಡಾವಣೆ ನಿರ್ಮಿಸಿದೆ.

ಇದೇ ಬಡಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು 1992 ರಲ್ಲಿ 5್x080 ವಿಸ್ತೀರ್ಣದ 105ನೇ ನಂಬರಿನ ನಿವೇಶನ, ಸಚಿವ ಡಾ. ಸುಧಾಕರ್ ಅವರು 2010ರಲ್ಲಿ 5್x080 ವಿಸ್ತೀರ್ಣದ 286/ಸಿ ನಂಬರಿನ ನಿವೇಶನ ಹೊಂದಿದ್ದಾರೆ.
ಎಲ್ಲ ಒತ್ತುವರಿಗಳನ್ನು ಯಾರ ಮುಲಾಜಿಗೂ ಒಳಗಾಗದೆ ತೆರವು ಮಾಡಿಸುತ್ತೇನೆ ಎಂದು ಸದನದಲ್ಲಿ ಬಡಾಯಿ ಕೊಚ್ಚಿಕೊಂಡಿದ್ದ ಕಂದಾಯ ಸಚಿವ ಆರ್.ಅಶೋಕ್ ಅವರು ತಮ್ಮ ಸಚಿವ ಸ್ಥಾನದ ಕೋಟಾದಡಿ 2007ರಲ್ಲಿ ಹೆಚ್‍ಬಿಆರ್ ಮೊದಲ ಹಂತದ ಬಡಾವಣೆಯಲ್ಲಿ 5್x080 ವಿಸ್ತೀರ್ಣದ, ನಿವೇಶನ ಸಂಖ್ಯೆ 195/ಎಲ್ ನಂಬರಿನ ನಿವೇಶನ ಹೊಂದಿದ್ದಾರೆ. ಈ ಬಡಾವಣೆಯನ್ನು ಹೆಣ್ಣೂರು ಕೆರೆ ಮುಚ್ಚಿ ನಿರ್ಮಿಸಲಾಗಿದೆ.

2009ರಲ್ಲಿ ಸಂಸದ ಬಿ.ವೈ ರಾಘವೇಂದ್ರ, ಶಾಸಕ ಬಿ.ಕೆ.ಸಂಗಮೇಶ್ ಅವರು ಆರ್‍ಎಂವಿ 2ನೇ ಹಂತದ ಬಡಾವಣೆಯಲ್ಲಿ ನಿವೇಶನಗಳನ್ನು ಹೊಂದಿದ್ದಾರೆ. ಅದೇ ರೀತಿ 2006ರಲ್ಲಿ ವೀರಣ್ಣ ಚರಂತಿಮಠ ಅವರು ತಮ್ಮ ಶಾಸಕರ ಕೋಟಾದಡಿ ನಾಗಶೆಟ್ಟಿಹಳ್ಳಿಯಲ್ಲಿರುವ ಆರ್ ಎಂವಿ 2 ಸ್ಟೇಜ್ 4 ಬ್ಲಾಕ್‍ನಲ್ಲಿ , 2009ರಲ್ಲಿ ಶಾಸಕ ಎಸ್ ಸುರೇಶ್ ಕುಮಾರ್ ಅವರು ತನ್ನ ಸಚಿವ ಸ್ಥಾನದ ಕೋಟಾದಡಿ ಆರ್ ಎಂವಿ 2 ಸ್ಟೇಜ್4 ಬ್ಲಾಕ್‍ನಲ್ಲಿ ನಿವೇಶನ ಹಂಚಿಕೆ ಮಾಡಿಸಿಕೊಂಡಿದ್ದಾರೆ.

1992ರಲ್ಲಿ ಶಾಸಕ ನಜೀರ್ ಆಹ್ಮದ್, ಮಾಜಿ ಶಾಸಕ ಆರ್.ವಿ.ದೇವರಾಜ್ ಅವರು, 2009ರಲ್ಲಿ ಗೂಳಿಹಟ್ಟಿ ಶೇಖರ್ , ಕೃಷ್ಣಪಾಲೇಮಾರ್, ಶಿವರಾಜ್ ತಂಗಡಗಿ ಅವರುಗಳು ಆರ್ ಎಂವಿ 2 ನೇ ಹಂತ 2 ನೇ ಬ್ಲಾಕ್‍ನಲ್ಲಿ ನಿವೇಶನ ಹಂಚಿಕೆ ಮಾಡಿಸಿಕೊಂಡಿದ್ದಾರೆ.

ಫಕೀರಪ್ಪ ಅವರು ತಮ್ಮ ಎಂಪಿ ಕೋಟಾದಡಿ ್ಡ580 ವಿಸ್ತೀರ್ಣದ ನಿವೇಶನ ಸಂ.71 ನೇ ನಂಬರಿನ ನಿವೇಶನವನ್ನು ಭೂಪಸಂದ್ರದ ಆರ್ ಎಂವಿ 2 ನೇ ಹಂತದ ಬಡಾವಣೆಯಲ್ಲಿ ಪಡೆದುಕೊಂಡಿದ್ದಾರೆ. ಇನ್ನು ತಿಪ್ಪಸಂದ್ರ ಕೆರೆ ಒತ್ತುವರಿ ಮಾಡಿ ನಿರ್ಮಿಸಿರುವ ಹೆಚ್‍ಎಎಲ್ ಎರಡನೆ ಹಂತದ ಬಡಾವಣೆಯಲ್ಲಿ ಶಾಸಕ ಹಾಗೂ ಮಾಜಿ ಸಚಿವ ಕೆ.ಜೆ.ಜಾರ್ಜ್ ಅವರು ಎಂಎಲ್‍ಎ ಕೋಟಾದಡಿ 7್ಡ060 ವಿಸ್ತೀರ್ಣದ 4033 ನೇ ನಂಬರಿನ ನಿವೇಶನ ಹೊಂದಿದ್ದಾರೆ.

ಹೆಚ್‍ಬಿಆರ್ ಮೊದಲನೆ ಹಂತದ 5ನೇ ಬ್ಲಾಕ್ ಲೇಔಟ್‍ನಲ್ಲಿ ಸಿ.ಟಿ.ರವಿ ಅವರು ತಮ್ಮ ಶಾಸಕ ಸ್ಥಾನದ ಕೋಟಾದಲ್ಲಿ ನಿವೇಶನ ಹಂಚಿಕೆ ಮಾಡಿಸಿಕೊಂಡಿದ್ದಾರೆ. ಎಸ್.ಆರ್.ಪಾಟೀಲ್, ಆರ್.ಎಸ್.ಪಾಟೀಲ್, ಹಂಪನಗೌಡ ಬಾದರ್ಲಿ ಅವರುಗಳು ಆರ್‍ಎಂವಿ ಬಡಾವಣೆಯಲ್ಲಿ ನಿವೇಶನ ಪಡೆದುಕೊಂಡಿದ್ದಾರೆ.

ಆರ್‍ಎಂವಿ 2 ಹಂತದಲ್ಲಿ ರಮೇಶ್ ಕತ್ತಿ, ಶಿವನಗೌಡನಾಯಕ್, ಪಿಎಂ ನರೇಂದ್ರ ಸ್ವಾಮಿ, ಜೆ.ಶಾಂತ, ಸುನೀಲ್ ವಲ್ಯಾಪುರ, ಸಿ.ರಮೇಶ್, ಜಲಜಾ ನಾಯ್ಕ್, ಎಂಪಿ ಜನಾರ್ಧನ ಸ್ವಾಮಿ, ಹಾಲಪ್ಪ ಅವರುಗಳ ನಿವೇಶನಗಳಿವೆ. ಇನ್ನು ಹೆಚ್‍ಆರ್‍ಬಿಆರ್ ಬಡಾವಣೆಯಲ್ಲಿ ಸಿ.ಸಿ ಪಾಟೀಲ್, ಡಾಲರ್ಸ್ ಕಾಲನಿಯಲ್ಲಿ ಸಚಿವ ಬಿ.ಸಿ.ಪಾಟೀಲ್ ಅವರುಗಳು ನಿವೇಶನಗಳನ್ನು ಹಂಚಿಕೆ ಮಾಡಿಕೊಂಡಿದ್ದಾರೆ.

ಬಾಣಸವಾಡಿಯ ಚನ್ನಸಂದ್ರ ಕೆರೆ ಒತ್ತುವರಿ ಮಾಡಿ ನಿರ್ಮಿಸಿರುವ ಹೆಚ್‍ಆರ್‍ಬಿಆರ್ ಬಡಾವಣೆಯ 3ನೇ ಬ್ಲಾಕ್‍ನಲ್ಲಿ ಶಾಸಕ ಪರಮೇಶ್ವರ್ ನಾಯಕ್, ಮೊದಲನೆ ಬ್ಲಾಕ್‍ನಲ್ಲಿ ಪ್ರಕಾಶ್ ಖಂಡ್ರೆ, 5ನೇ ಬ್ಲಾಕ್‍ನಲ್ಲಿ ಮಲ್ಲಿಕಾರ್ಜುನ ಅಕ್ಕಿ ಅವರು ತಮ್ಮ ಶಾಸಕ ಸ್ಥಾನದಡಿ ನಿವೇಶನ ಹಂಚಿಕೆ ಮಾಡಿಸಿಕೊಂಡಿದ್ದಾರೆ.

ನಮ್ಮನ್ನಾಳುವ ರಾಜಕಾರಣಿಗಳೇ ಕೆರೆ ಮುಚ್ಚಿ ಬಿಡಿಎ ನಿರ್ಮಿಸಿರುವ ನಿವೇಶನಗಳಲ್ಲಿ ಐಷರಾಮಿ ಮನೆಗಳನ್ನು ಕಟ್ಟಿಕೊಂಡು ನೆಮ್ಮದಿಯಾಗಿದ್ದಾರೆ. ಇಂತಹ ವ್ಯಕ್ತಿಗಳೇ ಸದನಗಳಲ್ಲಿ ಕೆರೆ ಒತ್ತುವರಿಯನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಿ ಎಂದು ಬೊಬ್ಬೆ ಹೊಡೆದು ಕೊಂಡಿದ್ದನ್ನು ನೋಡಿದರೆ ನಗಬೇಕೋ ಅಳಬೇಕೋ ಎನ್ನುವುದು ಅರ್ಥವಾಗುತ್ತಿಲ್ಲ.

Articles You Might Like

Share This Article