ರಸ್ತೆಗಳಲ್ಲಿ ಗುಂಡಿ ಕಂಡು ಅಧಿಕಾರಿಗಳ ಚಳಿ ಬಿಡಿಸಿದ ಮೇಯರ್..!

ಬೆಂಗಳೂರು, ಫೆ.14- ನಗರದ ವಾರ್ಡ್ ನಂ.109ರ ವ್ಯಾಪ್ತಿಯ ಬಿವಿಕೆ ಅಯ್ಯಂಗಾರ್ ರಸ್ತೆ, ಕಾಟನ್ ಪೇಟೆ ಮತ್ತಿತರೆಡೆ ರಸ್ತೆಗಳಲ್ಲಿ ಗುಂಡಿಗಳನ್ನು ಕಂಡು ಮೇಯರ್ ಗೌತಮ್‍ಕುಮಾರ್ ಸಿಡಿಮಿಡಿಗೊಂಡರು. ದ್ವಿಚಕ್ರ ವಾಹನದಲ್ಲಿ ಸಂಚರಿಸಿ ತಪಾಸಣೆ ನಡೆಸಿದ ಮೇಯರ್, ರಸ್ತೆಗುಂಡಿಗಳನ್ನು ಮುಚ್ಚದಿರುವುದಕ್ಕೆ ತೀವ್ರ ಆಕ್ರೋಶಗೊಂಡು ಸ್ಥಳದಲ್ಲಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಡಿಸೆಂಬರ್ ಅಂತ್ಯ, ಜನವರಿ ಮೊದಲ ಭಾಗದಲ್ಲಿ ಗುಂಡಿಮುಕ್ತ ನಗರ ಮಾಡುವುದಾಗಿ ಹೇಳಿದ್ದೆವು. ಆದರೆ, ಬಹಳಷ್ಟು ರಸ್ತೆಗಳಲ್ಲಿ ಇನ್ನೂ ಗುಂಡಿಗಳು ಹಾಗೆಯೇ ಇವೆ. ನೀವೇನು ಕೆಲಸ ಮಾಡುತ್ತಿದ್ದೀರೆ, ಇಲ್ಲವೆ ಎಂದು ಖಾರವಾಗಿ ಪ್ರಶ್ನಿಸಿದರು. ರಸ್ತೆ ಗುಂಡಿ ಬಿದ್ದಿರುವುದು, ಅಲ್ಲಲ್ಲಿ ಕಸ ಬಿದ್ದಿರುವ ಕುರಿತು ಹೈಕೋರ್ಟ್ ಪಾಲಿಕೆಗೆ ಚಾಟಿ ಬೀಸುತ್ತಲೇ ಇದೆ. ನೀವು ನೋಡಿದರೆ ಏನೂ ಅರಿಯದವರಂತೆ ನಿರ್ಲಕ್ಷ್ಯದಿಂದಿದ್ದೀರಿ. ಹೀಗೇ ಆದರೆ ಜನರೇ ನಮಗೆ ಬುದ್ಧಿ ಕಲಿಸುತ್ತಾರೆ.

ಈಗಿಂದೀಗಲೇ ರಸ್ತೆಗುಂಡಿಗಳನ್ನು ಮುಚ್ಚಿ ನಗರಗಳನ್ನು ಸ್ವಚ್ಛ ಗೊಳಿಸಬೇಕೆಂದು ಖಡಕ್ ಎಚ್ಚರಿಕೆ ನೀಡಿದರು. ರಸ್ತೆಗಳು ಗುಂಡಿಬಿದ್ದಿವೆ. ಚರಂಡಿಗಳಲ್ಲಿ ಕಸದ ರಾಶಿ ರಾರಾಜಿಸುತ್ತಿದೆ. ತಪಾಸಣೆ ವೇಳೆಯಲ್ಲೂ ಪಶ್ಚಿಮ ವಿಭಾಗದ ವಿಶೇಷ ಆಯುಕ್ತ ಬಸವರಾಜು ಅವರು ಹಾಜರಾಗಿಲ್ಲವೇಕೆಂದು ಮೇಯರ್ ಪ್ರಶ್ನಿಸಿದರು. ಅದಕ್ಕೆ ಸ್ಥಳದಲ್ಲೇ ಇದ್ದ ಜಂಟಿ ಆಯುಕ್ತರು 10 ಗಂಟೆಗೆ ಮೀಟಿಂಗ್ ಇತ್ತು ಎಂದು ಹೇಳಿದರು. ನನಗೂ 10 ಗಂಟೆಗೆ 10 ಮೀಟಿಂಗ್‍ಗಳಿವೆ. ಬೆಳಗ್ಗೆ 7 ಗಂಟೆಗೇ ಇಲ್ಲಿಗೆ ಬರಲು ಹೇಳಲಾಗಿತ್ತು. ಮೀಟಿಂಗ್ ಇದೆ ಎಂದು ವಾರ್ಡ್ ಸಮಸ್ಯೆ ಕೇಳಬಾರದಾ ಎಂದು ಮೇಯರ್ ಗರಂ ಆಗಿ ನುಡಿದರು.

ನಿನ್ನೆಯಷ್ಟೆ ಬೆಂಗಳೂರು ನಗರಾಭಿವೃದ್ಧಿ ಸಂಬಂಧ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿ ಅಲ್ಲೂ ಕೂಡ ಪಾಲಿಕೆ ಕಮಿಷನರ್ ಸೇರಿದಂತೆ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಸ್ವತಃ ದ್ವಿಚಕ್ರ ವಾಹನದಲ್ಲಿ ಮೇಯರ್ ತಪಾಸಣೆ ನಡೆಸಿ ಪರಿಶೀಲಿಸಿ ಅಧಿಕಾರಿಗಳಿಗೆ ಈಗಿಂದೀಗಲೇ ಗುಂಡಿ ಮುಚ್ಚಲು ಕ್ರಮ ಕೈಗೊಳ್ಳುವಂತೆ ಆದೇಶಿಸಿದರು.