ತೆನೆ ಹೊರುವರೇ ಮಾಜಿ ಮೇಯರ್ ಸಂಪತ್‍ರಾಜ್..!

Social Share

ಬೆಂಗಳೂರು,ಅ.2- ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಬಲಗೈ ಭಂಟ ಹಾಗೂ ಮಾಜಿ ಮೇಯರ್ ಸಂಪತ್‍ರಾಜ್ ಅವರು ಕಾಂಗ್ರೆಸ್ ಪಕ್ಷಕ್ಕೆ ಗುಡ್‍ಬೈ ಹೇಳಿ ಜೆಡಿಎಸ್ ಪಾಳಯ ಸೇರುವ ಸಾಧ್ಯತೆಗಳಿವೆ. ಪುಲಿಕೇಶಿನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರ ಎದುರಾಳಿ ಎಂದೇ ಗುರುತಿಸಿಕೊಂಡಿರುವ ಸಂಪತ್‍ರಾಜ್ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಖಂಡ ಶ್ರೀನಿವಾಸ್ ಮೂರ್ತಿ ವಿರುದ್ಧ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

ಆಖಂಡ ಶ್ರೀನಿವಾಸ ಮೂರ್ತಿ ಮನೆ ಮೇಲಿನ ದಾಳಿ ಪ್ರಕರಣದಲ್ಲಿ ಸಂಪತ್‍ರಾಜ್ ಕೈವಾಡ ಇತ್ತು ಎಂಬ ಆರೋಪಗಳು ಕೇಳಿ ಬಂದಿತ್ತು. ಸಂಪತ್‍ರಾಜ್ ಕೈವಾಡ ಕುರಿತಂತೆ ಖುದ್ದು ಶ್ರೀನಿವಾಸ್ ಮೂರ್ತಿ ಅವರೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ದೂರು ನೀಡಿದ್ದರೂ ಶಿವಕುಮಾರ್ ಅವರು ಸಂಪತ್‍ರಾಜ್ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ.

ಅಖಂಡ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪಾಳಯದಲ್ಲಿ ಗುರುತಿಸಿಕೊಂಡಿದ್ದರೆ ಸಂಪತ್‍ರಾಜ್ ಡಿಕೆಶಿ ಬಲಗೈ ಭಂಟ ಎಂದೇ ಬಿಂಬಿಸಿಕೊಂಡಿದ್ದಾರೆ. ಸ್ವತಃ ಸಿದ್ದರಾಮಯ್ಯ ಅವರೇ ಸಂಪತ್‍ರಾಜ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಮುಂದಿನ ಚುನಾವಣೆಯಲ್ಲಿ ಪುಲಿಕೇಶಿ ನಗರದಿಂದ ಸಂಪತ್‍ರಾಜ್ ಅವರಿಗೆ ಕೈ ಟಿಕೆಟ್ ನೀಡಲು ಡಿಕೆಶಿ ಮನಸ್ಸು ಮಾಡಿದ್ದರು.

ಈ ವಿಚಾರ ತಿಳಿಯುತ್ತಿದ್ದಂತೆ ಶ್ರೀನಿವಾಸ್ ಮೂರ್ತಿ ಕಾಂಗ್ರೆಸ್ ತೊರೆದು ಬಿಜೆಪಿ ಇಲ್ಲವೇ ಜೆಡಿಎಸ್ ಸೇರಲು ತೀರ್ಮಾನಿಸಿದ್ದರು.
ಆ ಸಂದರ್ಭದಲ್ಲಿ ಅಖಂಡ ಅವರಿಗೆ ಸಿದ್ದರಾಮಯ್ಯ ಅವರು ಮುಂದಿನ ಚುನಾವಣೆಯಲ್ಲಿ ನಿನಗೆ ಟಿಕೆಟ್ ಕೊಡಿಸುತ್ತೇನೆ ಎಂದು ಅಭಯ ನೀಡಿ ಪಕ್ಷದಲ್ಲಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

ಯಾವಾಗ ನನಗೆ ಕೈ ಟಿಕೆಟ್ ಸಿಗುವುದಿಲ್ಲ ಎಂದು ಖಚಿತವಾಗುತ್ತಿದ್ದಂತೆ ಆಖಾಡಕ್ಕೆ ಇಳಿದ ಸಂಪತ್‍ರಾಜ್ ಅವರು ಜೆಡಿಎಸ್ ವರಿಷ್ಠರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಸಂಪತ್‍ರಾಜ್ ಅವರಿಗೆ ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಟಿಕೆಟ್ ನೀಡುವ ಭರವಸೆ ನೀಡಿರುವುದರಿಂದ ಅವರು ಕ್ಷೇತ್ರದಲ್ಲಿ ಓಡಾಡಿಕೊಂಡು ಮತ ಬೇಟೆ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.

ತನ್ನ ಬಲಗೈ ಭಂಟ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಲು ತೀರ್ಮಾನಿಸಿದ್ದರೂ ಡಿಕೆಶಿ ತುಟಿಪಿಟಿಕ್ ಎನ್ನದಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಪುಲಿಕೇಶಿ ನಗರದಲ್ಲಿ ಬೋವಿ ಹಾಗೂ ಮುಸ್ಲಿಂ ಮತದಾರರೇ ನಿರ್ಣಾಯಕರಾಗಿದ್ದು, ಬೋವಿ ಜನಾಂಗದ ಆಖಂಡ ಶ್ರೀನಿವಾಸ್ ಮೂರ್ತಿ ವಿರುದ್ಧ ಮುಸಲ್ಮಾನರು ಮುನಿಸಿಕೊಂಡಿದ್ದಾರೆ.

ಆದರೆ, ಮುಸ್ಲಿಂ ಮತದಾರರೊಂದಿಗೆ ಅತ್ಯುತ್ತಮ ಸಂಬಂಧ ಇರಿಸಿಕೊಂಡಿರುವ ಸಂಪತ್‍ರಾಜ್ ಅವರು ಇದನ್ನೆ ಪ್ಲಸ್ ಪಾಯಿಂಟ್ ಮಾಡಿಕೊಂಡು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಆಖಂಡ ಅವರಿಗೆ ಟಾಂಗ್ ನೀಡಲು ಸಿದ್ದತೆ ನಡೆಸಿಕೊಂಡಿದ್ದಾರೆ.

ಪುಲಿಕೇಶಿನಗರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ತಮ್ಮದೆ ಆದ ಮತ ಬ್ಯಾಂಕ್‍ಗಳನ್ನು ಹೊಂದಿದ್ದು ಇಲ್ಲಿ ಬಿಜೆಪಿ ನಗಣ್ಯ ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಆಖಂಡ ಮತ್ತು ಸಂಪತ್‍ರಾಜ್ ನಡುವಿನ ಸ್ಪರ್ಧೆ ತೀವ್ರ ಕೂತುಹಲ ಕೆರಳಿಸಿದೆ.

Articles You Might Like

Share This Article