ಕೋಟಿ ಕೋಟಿ ಮೌಲ್ಯದ ಆಸ್ತಿಯನ್ನು ಚಿಲ್ಲರೆ ಕಾಸಿಗೆ ಗುತ್ತಿಗೆ ನೀಡಿದ ಬಿಬಿಎಂಪಿ..!

Social Share

ಬೆಂಗಳೂರು,ಸೆ.29- ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ ನಾಲ್ಕುವರೆ ಸಾವಿರ ಕೋಟಿ ರೂ.ಮೌಲ್ಯ ಆಸ್ತಿಯನ್ನು ಬಿಬಿಎಂಪಿ ಕವಡೆ ಕಾಸಿನ ಬೆಲೆಗೆ ಗುತ್ತಿಗೆ ನೀಡಿ ಕೈ ತೊಳೆದುಕೊಂಡಿದೆ. ಆದರೆ, ಸಾಮಾಜಿಕ ಕಳಕಳಿ ಉದ್ದೇಶದಿಂದ ಇಂತಹ ನೂರಾರು ಕಟ್ಟಡಗಳನ್ನು ಕಡಿಮೆ ದರಕ್ಕೆ ಗುತ್ತಿಗೆ ಪಡೆದುಕೊಂಡಿರುವ ಸಂಘ ಸಂಸ್ಥೆಗಳು ಬೇರೆ ಸಂಸ್ಥೆಗಳಿಗೆ ಲಕ್ಷಾಂತರ ರೂ.ಗಳಿಗೆ ಬಾಡಿಗೆ ನೀಡಿ ಪಾಲಿಕೆ ಬೊಕ್ಕಸಕ್ಕೆ ಕೋಟ್ಯಾಂತರ ರೂ. ವಂಚಿಸುತ್ತಿದ್ದಾರೆ.

ಬಿಬಿಎಂಪಿ ಇದುವರೆಗೂ 324 ಆಸ್ತಿಗಳನ್ನು ಬಾಡಿಗೆಗೆ ನೀಡಿದ್ದು ವರ್ಷಕ್ಕೆ ಈ ಆಸ್ತಿಗಳಿಂದ ಕೇವಲ 54 ಲಕ್ಷ ರೂ. ಮಾತ್ರ ಬಾಡಿಗೆ ಸಂಗ್ರಹ ಮಾಡುತ್ತಿದೆ. ಅದರೆ ಗುತ್ತಿಗೆ ಪಡೆದುಕೊಂಡಿರುವವರು ತಮ್ಮ ಕಟ್ಟಡಗಳನ್ನು ಅನ್ಯ ಉದ್ದೇಶಗಳಿಗೆ ಬೇರೆಯವರಿಗೆ ಬಾಡಿಗೆ ನೀಡಿ ಕೋಟ್ಯಾಂತರ ರೂ.ಗಳನ್ನು ಜೇಬಿಗಿಳಿಸಿಕೊಳ್ಳುತ್ತಿದ್ದಾರೆ.

ಹಲವಾರು ಸಂಘ ಸಂಸ್ಥೆಗಳು, ಶಾಲಾ-ಕಾಲೇಜುಗಳು ಹಾಗೂ ಧಾರ್ಮಿಕ ಸಂಸ್ಥೆಗಳಿಗೆ ಬಿಬಿಎಂಪಿ ತನ್ನ ಆಸ್ತಿಗಳನ್ನು ಕವಡೆ ಕಾಸಿನ ಬೆಲೆಗೆ ಗÀುತ್ತಿಗೆ ನೀಡಿದೆ. ದಶಕಗಳ ಹಿಂದೆ ಸಾವಿರಾರು ಚದರ ಅಡಿ ವಿಸ್ತೀರ್ಣದ ಸ್ವತ್ತುಗಳಿಗೆ ಕೇವಲ 12 ರಿಂದ 25 ರೂ ಗಳ ಗುತ್ತಿಗೆಗೆ ನಿಗದಿ ಮಾಡಲಾಗಿದೆ.

ನಗರದಲ್ಲಿ ಇಂತಹ 6815 ಆಸ್ತಿಗಳಿದ್ದು ಇವುಗಳ ಪೈಕೆ 324 ಆಸ್ತಿಗಳನ್ನು ಕಡಿಮೆ ಬೆಲೆಗೆ ಗುತ್ತಿಗೆ ನೀಡಲಾಗಿದೆ. ಇಂಚಿಂಚು ಭೂಮಿಗೆ ಚಿನ್ನದ ಬೆಲೆ ಇರುವ ರಾಜಧಾನಿಯಲ್ಲಿ ಎಕರೆಗಟ್ಟಲೇ ಪ್ರದೇಶಗಳನ್ನು ಇದೇ ರೀತಿ ಗುತ್ತಿಗೆ ನೀಡಲಾಗಿದೆ.

ಈ ರೀತಿ ಗುತ್ತಿಗೆ ಪಡೆದ ಕೆಲವರು ಷರತ್ತು ಉಲ್ಲಂಘಿಸಿದ್ದರೂ ಅಂತಹವರ ವಿರುದ್ಧ ಬಿಬಿಎಂಪಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಪಾಲಿಕೆಯ ಕಂದಾಯ ಮತ್ತು ಆಸ್ತಿಗಳ ವಿಭಾಗ ಅಧಿಕಾರಿಗಳ ಈ ದಿವ್ಯ ನಿರ್ಲಕ್ಷ್ಯದಿಂದ ಬಿಬಿಎಂಪಿಗೆ ಭಾರಿ ಪ್ರಮಾಣದ ಆರ್ಥಿಕ ನಷ್ಟ ಸಂಭವಿಸಿರುವುದು ದಾಖಲೆಗಳಲ್ಲಿ ಬಹಿರಂಗೊಂಡಿದೆ. ವಾಣಿಜ್ಯ ಉದ್ದೇಶಕ್ಕಾಗಿ 235, ಶಿಕ್ಷಣಕ್ಕಾಗಿ 24, ಸರ್ಕಾರಿ ಇಲಾಖೆ 43 ಮತ್ತು ಧಾರ್ಮಿಕ ಕಾರ್ಯಕ್ಕೆ 22 ಸ್ವತ್ತುಗಳ ಗುತ್ತಿಗೆ ನೀಡಲಾಗಿದೆ.

ಇದರಲ್ಲಿ 116 ಆಸ್ತಿಗಳ ಗುತ್ತಿಗೆ ಅವ ಮುಗಿದು ಎರಡು ವರ್ಷಗಳು ಕಳೆದಿವೆ ಆದರೂ ಅವುಗಳನ್ನು ವಾಪಸ್ ಪಡೆಯುವ ಯತ್ನಕ್ಕೆ ಬಿಬಿಎಂಪಿ ಮುಂದಾಗದಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Articles You Might Like

Share This Article