ಬಿಬಿಎಂಪಿ ವಾರ್ಡ್‍ಗಳ ಪುನರ್ ವಿಂಗಡಣಾ ವರದಿ ಸಿದ್ಧ

Spread the love

ಬೆಂಗಳೂರು,ಜೂ.9- ಅಂತೂ ಇಂತೂ ಬಿಬಿಎಂಪಿ ವಾರ್ಡ್ ಪುನರ್‍ ವಿಂಗಡಣಾ ವರದಿ ಸಿದ್ದಗೊಂಡಿದೆ. ಎಂಟು ವಾರಗಳ ಒಳಗೆ ವಾರ್ಡ್‍ಪುನರ್‍ ವಿಂಗಡಣೆ ಹಾಗೂ ಮೀಸಲಾತಿ ಪಟ್ಟಿ ಸಿದ್ದಪಡಿಸುವಂತೆ ಸುಪ್ರೀಂಕೋರ್ಟ್ ಕಟ್ಟುನಿಟ್ಟಿನ ಸೂಚನೆ ನೀಡಿ ಮೂರು ವಾರ ಕಳೆದರೂ ಬಿಬಿಎಂಪಿಯವರಿಗೆ ವಾರ್ಡ್ ಪುನರ್‍ ವಿಂಗಡಣೆ ಮಾಡಲು ಸಾಧ್ಯವಾಗಿರಲಿಲ್ಲ.

ಈಗಾಗಲೇ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ ಎಂದು ಕೆಲವರು ಹೇಳಿದರೆ ಇನ್ನೂ ಕೆಲವರು ಇನ್ನು ಸಲ್ಲಿಕೆಯಾಗಿಲ್ಲ ಎಂಬ ಅಂತೆ ಕಂತೆಗಳನ್ನೆ ಹೇಳಿಕೊಂಡು ಬರುತ್ತಿದ್ದರು. ಆದರೆ, ನಿನ್ನೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದು ಗುರುವಾರ ನಾವು ಪುನರ್‍ ವಿಂಗಡಣಾ ವರದಿ ಸರ್ಕಾರಕ್ಕೆ ಸಲ್ಲಿಸಲ್ಲಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದರು. ಅವರ ಹೇಳಿಕೆಯಂತೆ ಇದೀಗ ಕನ್ನಡ ಮತ್ತು ಇಂಗ್ಲೀಷ್‍ನಲ್ಲಿರುವ 300ಕ್ಕೂ ಹೆಚ್ಚು ಪುಟಗಳ ಡಿಲಿಮಿಟೇಷನ್ ವರದಿ ಸಿದ್ದಗೊಂಡಿರುವುದು ದೃಢಪಟ್ಟಿದೆ.

ಇಂದು ಅಧಿಕೃತವಾಗಿ ವಾರ್ಡ್ ಪುನರ್‍ ವಿಂಗಡಣಾ ವರದಿ ಸಲ್ಲಿಸಿದೆ ಎಂದು ಬಿಬಿಎಂಪಿ ಉನ್ನತ ಮೂಲಗಳು ಖಚಿತಪಡಿಸಿವೆ. ಈ ಹಿಂದೆ ಇದ್ದ ಬಿಬಿಎಂಪಿಯ 198 ವಾರ್ಡ್‍ಗಳನ್ನು 243 ವಾರ್ಡ್‍ಗಳನ್ನಾಗಿ ಪರಿವರ್ತಿಸಲಾಗಿದೆ. ಕೆಲ ವಾರ್ಡ್‍ಗಳ ಗಡಿ ಗುರುತಿಸುವಿಕೆಯಲ್ಲಿ ಕೆಲ ಲೋಪದೋಷ ಕಂಡುಬಂದಿದ್ದ ಹಿನ್ನಲೆಯಲ್ಲಿ ಕರಡುಪ್ರತಿ ಸಲ್ಲಿಕೆ ಇದುವರೆಗೂ ಸಾಧ್ಯವಾಗಿರಲಿಲ್ಲ.

ಡಿಲಿಮಿಟೇಷನ್ ವರದಿ ಇಂದು ಸರ್ಕಾರದ ಕೈ ಸೇರಿರುವುದರಿಂದ ಸರ್ಕಾರ ನಾಳೆ ಇಲ್ಲವೆ ನಾಡಿದ್ದು ಗೆಜೆಟ್ ನೋಟಿಫಕೇಷನ್ ಹೊರಡಿಸುವ ಸಾಧ್ಯತೆ ಇದೆ. ನೋಟಿಫೀಕೇಷನ್ ನಂತರ ಪುನರ್‍ವಿಂಗಡಣಾ ವರದಿಗೆ 15 ದಿನಗಳ ಕಾಲ ಸಾರ್ವಜನಿಕ ಆಕ್ಷೇಪಣೆಗೆ ಅವಕಾಶ ನೀಡಿದ ನಂತರ ಡಿಲಿಮಿಟೇಷನ್‍ಗೆ ಅಂತಿಮ ರೂಪುರೇಷೆ ನೀಡಲಾಗುವುದು ಎಂದು ತಿಳಿದುಬಂದಿದೆ.

ವಾರ್ಡ್ ಪುನರ್‍ ವಿಂಗಡಣೆಗೆ ಬಿಬಿಎಂಪಿ ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚಿಸಿ ಒಂದೂವರೆ ವರ್ಷ ಆಗಿದ್ದರೂ ಇದುವರೆಗೂ ಡಿಲಿಮಿಟೇಷನ್ ವರದಿ ಸೋರಿಕೆಯಾಗದಂತೆ ನೋಡಿಕೊಂಡಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಬಿಬಿಎಂಪಿಯವರು ಕೆಲ ದಿನಗಳ ಹಿಂದೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರೂ ವರದಿ ಸೋರಿಕೆಯಾಗಿರಲಿಲ್ಲ. ಮಾಧ್ಯಮದವರು ಏನೆ ಕಸರತ್ತು ನಡೆಸಿದರೂ ವರದಿ ಪಡೆದುಕೊಳ್ಳಲು ಸಾಧ್ಯವಾಗಿರಲಿಲ್ಲ.

ಇದೀಗ ವರದಿ ಸಲ್ಲಿಕೆಯಾಗಿದ್ದರೂ ಇದುವರೆಗೂ ಯಾರಿಗೂ ವರದಿ ಸಿಕ್ಕಿಲ್ಲ. ಇದನೆಲ್ಲಾ ಗಮನಿಸಿದರೆ ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲವಾಗುವಂತೆ ವರದಿ ಸಿದ್ದಪಡಿಸಿರುವ ಸಾಧ್ಯತೆಗಳಿವೆ ಎಂಬ ಅನುಮಾನ ಕಾಡಲಾರಂಭಿಸಿದೆ.

Facebook Comments