ಬೆಂಗಳೂರು, ಫೆ.25- ಎಸಿಬಿ ಬಿಡಿಎ ಕಚೇರಿ ಮೇಲೆ ದಾಳಿ ನಡೆಸಿ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಬಯಲಿಗೆಳೆದು ಸಂಚಲನ ಮೂಡಿಸಿದ್ದ ಬೆನ್ನಲ್ಲೇ ಇದೀಗ ಬಿಬಿಎಂಪಿ ಕಚೇರಿ ಮೇಲೆ ಮುಗಿಬಿದ್ದಿದೆ. ಇಂದು ಬಿಬಿಎಂಪಿಯ ಹಣಕಾಸು ವಿಭಾಗದ ವಿಶೇಷ ಆಯುಕ್ತರಾದ ತುಳಸಿ ಮದ್ದಿನೇನಿ ಕಚೇರಿ ಸೇರಿದಂತೆ ನಗರ ಯೋಜನೆ, ಕೇಂದ್ರ ಕಚೇರಿ, ಟಿಡಿಆರ್, ವಲಯ ಕಚೇರಿ, ಜಂಟಿ ಆಯುಕ್ತರ ಕಚೇರಿ, ರೆವಿನ್ಯೂ ಕಚೇರಿ ಸೇರಿದಂತೆ 27 ಕಡೆ ಏಕಕಾಲದಲ್ಲಿ ದಾಳಿ ನಡೆಸಿ ಶೋಧ ಕಾರ್ಯ ಮುಂದುವರಿಸಿದೆ.
ಡಿವೈಎಸ್‍ಪಿ, ಪೊಲೀಸ್ ಇನ್ಸ್‍ಪೆಕ್ಟರ್ ಅವರನ್ನೊಳಗೊಂಡ 200 ಅಧಿಕಾರಿ ಸಿಬ್ಬಂದಿಗಳ ವಿವಿಧ ತಂಡಗಳು ಎಂಟು ವಲಯಗಳ ಜಂಟಿ ಆಯುಕ್ತರ ಕಚೇರಿ, ಬಿಬಿಎಂಪಿಗೆ ಸೇರಿದ ರೆವಿನ್ಯೂ ಕಚೇರಿ, ನಗರ ಯೋಜನೆ ವಿಭಾಗ, ಜಾಹೀರಾತು, ಟಿಡಿಆರ್, ಆರೋಗ್ಯ ವಿಭಾಗ, ರಸ್ತೆ ಮತ್ತು ಮೂಲ ಸೌಕರ್ಯ (ರಾಜಕಾಲುವೆ) ವಿಭಾಗಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಶೋಧ ನಡೆದ್ದಾರೆ.
ಈ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ತಮಗೆ ವಹಿಸಿಕೊಟ್ಟಿರುವ ಮತ್ತು ನಿಯಂತ್ರಣದಲ್ಲಿರುವ ಸರ್ಕಾರಿ ಸ್ವತ್ತನ್ನು ದುರುಪಯೋಗಪಡಿಸಿಕೊಂಡು ಮಧ್ಯವರ್ತಿಗಳು ಮತ್ತು ಫಲಾನುಭವಿಗಳು ಹಾಗೂ ಖಾಸಗಿ ವರ್ತಿಗಳೊಂದಿಗೆ ಸೇರಿಕೊಂಡು ನಿಯಮಗಳನ್ನು ಉಲ್ಲಂಘಿಸಿ ಕಾನೂನು ಬಾಹಿರವಾಗಿ ಸರ್ಕಾರಕ್ಕೆ ನಷ್ಟ ಉಂಟುಮಾಡಿ ಅಕ್ರಮ ಲಾಭ ಮಾಡಿಕೊಳ್ಳುವ ಮೂಲಕ ಭ್ರಷ್ಟಾಚಾರದಲ್ಲಿ ತೊಡಗಿರುವ ಕುರಿತು ಮೌಖಿಕ ಮತ್ತು ಲಿಖಿತ ದೂರುಗಳು ಬಂದ ಹಿನ್ನೆಲೆಯಲ್ಲಿ ಎಸಿಬಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ನಗರದ 11 ಸ್ಥಳಗಳಲ್ಲಿ 27 ಕಡೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ದಾಖಲೆಗಳ ಪರಿಶೀಲನೆ ಕಾರ್ಯ ಮುಂದುವರಿದಿದೆ.
