ನವದೆಹಲಿ, ಜು.28- ಕಳೆದ ಎರಡು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬಿಬಿಎಂಪಿ ಚುನಾವಣೆಗೆ ಸುಪ್ರೀಂಕೋರ್ಟ್ ಹಸಿರು ನಿಶಾನೆ ತೋರಿದೆ. ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ನೇತೃತ್ವದ ಪೀಠ ಇಂದು ವಿಚಾರಣೆ ಕೈಗೆತ್ತಿಕೊಂಡು ಒಂದು ವಾರದೊಳಗೆ ವಾರ್ಡ್‍ಗಳ ಮೀಸಲಾತಿ ಘೋಷಣೆ ಮಾಡಬೇಕೆಂದು ರಾಜ್ಯಸರ್ಕಾರಕ್ಕೆ ತಾಕೀತು ಮಾಡಿದೆ.
ಇದಲ್ಲದೆ, ಚುನಾವಣೆ ಆಯೋಗವು ಕೂಡ ಕೂಡಲೇ ಬಿಬಿಎಂಪಿಗೆ ಚುನಾವಣೆ ನಡೆಸಲು ಸಿದ್ಧತೆ ಆರಂಭಿಸಬೇಕು ಮತ್ತು ರಾಜ್ಯ ಸರ್ಕಾರ ಇದಕ್ಕೆ ಸಹಕಾರ ನೀಡಬೇಕು ಎಂದು ತಿಳಿಸಿದೆ. ಕಳೆದ 2020 ಸೆಪ್ಟೆಂಬರ್‍ನಲ್ಲಿ ಅಂತ್ಯಗೊಂಡಿದ್ದ ಬಿಬಿಎಂಪಿ ಚುನಾಯಿತ ಸದಸ್ಯರ ಅವ ನಂತರ ರಾಜ್ಯ ಸರ್ಕಾರ ಅಕಾರ ವಿಕೇಂದ್ರೀಕರಣದ ನೆಪದಲ್ಲಿ 198 ವಾರ್ಡ್‍ಗಳನ್ನು 243ಕ್ಕೆ ಹೆಚ್ಚಿಸಿ ಕ್ಷೇತ್ರ ಪುನರ್‍ವಿಂಗಡಣೆಗೆ ಚಾಲನೆ ನೀಡಿತ್ತು.
ಇದನ್ನು ಪ್ರಶ್ನಿಸಿ ಕೆಲವರು ಹೈಕೋರ್ಟ್ ಮೊರೆ ಹೋಗಿದ್ದರು. ಈ ನಡುವೆ ಮುಖ್ಯ ಆಯುಕ್ತರಾಗಿದ್ದ ಓಕಾ ಅವರು ಬಿಬಿಎಂಪಿ ಚುನಾವಣೆ ನಡೆಸುವಂತೆ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು.
ಕಳೆದ ಮೇನಲ್ಲಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಪೀಠ ಮೂರು ತಿಂಗಳೊಳಗೆ ಕ್ಷೇತ್ರ ಪುನರ್ವಿಂಗಡಣೆ ಹಾಗೂ ಮೀಸಲಾತಿಯನ್ನು ಪ್ರಕಟಿಸಲು ಗಡುವು ನೀಡಿತ್ತು.
ಅದರಂತೆ ರಾಜ್ಯ ಸರ್ಕಾರ ಕ್ಷೇತ್ರ ಪುನರ್ವಿಂಗಡಣೆ ಕುರಿತಂತೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿತ್ತು. ನಂತರ ನ್ಯಾಯಮೂರ್ತಿ ಭಕ್ತವತ್ಸಲಂ ನೇತೃತ್ವದ ಸಮಿತಿ ನೀಡಿದ್ದ ಮೀಸಲಾತಿ ವರದಿ ಕುರಿತಂತೆ ಪರಿಶೀಲಿಸಿ ಕ್ರಮ ಕೈಗೊಳ್ಳಲು ಒಂದು ವಾರ ಅವಕಾಶ ಕೋರಿ ಸರ್ಕಾರ ವಾದ ಮಂಡಿಸಿತ್ತು.
ಅವಧಿ ಪೂರ್ಣಗೊಂಡ ನಂತರ ಮತ್ತೆ ಸುಪ್ರೀಂಕೋರ್ಟ್‍ನಲ್ಲಿ ವಿಚಾರಣೆಗೆ ಬಂದ ಸಂದರ್ಭದಲ್ಲಿ ಸರ್ಕಾರದ ಪರ ಹಾಗೂ ಚುನಾವಣೆ ನಡೆಸುವಂತೆ ಕೋರಿದ್ದ ಅರ್ಜಿದಾರರ ಪರ ವಾದಗಳು ಮಂಡನೆಯಾಗಿ ಅಂತಿಮವಾಗಿ ಜುಲೈ 25ರಂದು ಅಂತಿಮ ಆದೇಶಕ್ಕೆ ದಿನಾಂಕ ನಿಗದಿಯಾಗಿತ್ತು.
ಆದರೆ, ಅಂದು ರಿಜಿಸ್ಟ್ರಾರ್ ಜನರಲ್ ಅವರು ಹಾಜರಿರದ ಕಾರಣ ಇಂದು ಅರ್ಜಿ ವಿಚಾರಣೆಗೆ ಬಂದು ರಾಜ್ಯ ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ಚುನಾವಣೆ ನಡೆಸುವಂತೆ ಸೂಚನೆ ನೀಡಿದೆ. ಒಟ್ಟಾರೆ ಚುನಾವಣೆಗೆ ಈಗ ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ್ದು, ರಾಜ್ಯ ಸರ್ಕಾರದ ಮೇಲೆ ಎಲ್ಲ ಅವಲಂಬಿತವಾಗಿದೆ.
ಇನ್ನೊಂದು ವಾರದಲ್ಲಿ ಮೀಸಲಾತಿ ಪೂರ್ಣಗೊಂಡ ನಂತರ ಚುನಾವಣಾ ಆಯೋಗ ಚುನಾವಣಾ ಪ್ರಕ್ರಿಯೆಗಳನ್ನು ಘೋಷಿಸುವ ಸಾಧ್ಯತೆಯೂ ಹೆಚ್ಚಾಗಿದೆ. ಈಗಾಗಲೇ ಮತದಾರರ ನೋಂದಣಿ ಪ್ರಕ್ರಿಯೆಗೆ ಚಾಲನೆ ಸಿಕ್ಕಿದ್ದು, ವಲಯ ಆಯುಕ್ತರನ್ನು ನೇಮಿಸಲಾಗಿದೆ. ಸದ್ಯದಲ್ಲೇ ಸಭೆ ಕೂಡ ನಡೆಸುವ ಸಾಧ್ಯತೆ ಇದ್ದು, ಚುನಾವಣೆ ನಡೆಯುವ ವಾತಾವರಣ ದಟ್ಟವಾಗಿದೆ.