ಬೆಂಗಳೂರು : ಬಿಬಿಎಂಪಿಯವರು ಕಿತ್ತು ಹೋದ ರಸ್ತೆಗೆ ತೇಪೆ ಹಚ್ಚುವ ಕಾರ್ಯಕ್ಕೆಂದೇ ಕೋಟಿ ಕೋಟಿ ಖರ್ಚು ಮಾಡುತ್ತಿದ್ದರೂ, ರಸ್ತೆ ಗುಂಡಿಗಳಿಂದ ಆಗುತ್ತಿರುವ ಅನಾಹುತ ಮಾತ್ರ ಕಡಿಮೆಯಾಗುತ್ತಿಲ್ಲ.
ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ, ಇತ್ತೀಚಿನ ವರ್ಷಗಳಲ್ಲಿ ಇಲ್ಲಿಯವರೆಗೆ 15ಕ್ಕೂ ಹೆಚ್ಚು ಅಮಾಯಕ ಜೀವಗಳು ರಸ್ತೆಗುಂಡಿಗಳಿಗೆ ಬಲಿಯಾಗಿದೆ.ಅದರಲ್ಲೂ ಕಳೆದ ಒಂದು ವರ್ಷದಲ್ಲೇ ಬರೋಬ್ಬರಿ ಎಂಟು ಜೀವಗಳ ಪ್ರಾಣ ಪಕ್ಷಿಗಳು ರಸ್ತೆಗುಂಡಿಗಳಿಂದಾಗಿ ಹಾರಿ ಹೋಗಿವೆ.
ಎಲ್ಲೆಲ್ಲಿ ಸಾವುಗಳು: ಕಳೆದ ಡಿಸಂಬರ್‍ನಲ್ಲಿ ಯಲಹಂಕದ ಎಂ.ಎಸ್.ಪಾಳ್ಯದಲ್ಲಿ 27 ವರ್ಷದ ಅಶ್ವಿನ್ ಎಂಬ ಸಾಫ್ಟ್‍ವೇರ್ ಎಂಜಿನಿಯರ್ ರಸ್ತೆಗುಂಡಿಯಿಂದ ಸಂಭವಿಸಿದ್ದ ಅಪಘಾತದಲ್ಲಿ ಮೃತಪಟ್ಟಿದ್ದರು. ಇನ್ನು ವಿವಾಹವಾಗದ ಅಶ್ವಿನ್ ಅವರ ತಾಯಿ ಕೆಲ ದಿನಗಳ ಹಿಂದಷ್ಟೇ ತಮ್ಮ ಪತಿಯನ್ನು ಕಳೆದುಕೊಂಡಿದ್ದರು. ಅವರ ಆಸರೆಗೆ ಇದ್ದ ಮಗ ಕೂಡ ರಸ್ತೆ ಗುಂಡಿಯಿಂದಾಗಿ ಪ್ರಾಣ ಕಳೆದುಕೊಳ್ಳುವಂತಾಗಿತ್ತು.
ಅದೇ ರೀತಿ ಹೂಡಿ ಜಂಕ್ಷನ್‍ನಲ್ಲಿ ರಸ್ತೆ ಆಗೆತ ತಪ್ಪಿಸಲು ಹೋಗಿ ನಡೆದ ಅಪಘಾತದಲ್ಲಿ ಮೂರು ವರ್ಷದ ಹೆಣ್ಣು ಮಗು ಮೃತಪಟ್ಟಿತ್ತು. ಮಾತ್ರವಲ್ಲಿ ಬೈಕ್‍ನಲ್ಲಿದ್ದ ಮಗುವಿನ ತಂದೆ-ತಾಯಿ ತೀವ್ರವಾಗಿ ಗಾಯಗೊಂಡಿದ್ದರು.
ಮೈಸೂರು ರಸ್ತೆಯ ಜೆ.ಜೆ.ನಗರದ ಬಳಿ ಬೈಕ್‍ನಲ್ಲಿ ತೆರಳುತ್ತಿದ್ದ ಎರಡು ಹಿರಿಯ ಜೀವಗಳನ್ನು ರಸ್ತೆ ಗುಂಡಿ ಬಲಿ ತೆಗೆದುಕೊಂಡಿತ್ತು.
ಈ ಅಪಘಾತದಲ್ಲಿ ಅಂತೋಣಿ ಜೋಸೆಫ್ ಹಾಗೂ ಆತನ ಪತ್ನಿ ಸಗಾಯಿ ಮೇರಿ ಎಂಬ ವೃದ್ಧರು ಮೃತಪಟ್ಟಿದ್ದರು. ಘಟನೆಯಲ್ಲಿ ಚೇರಿಯನ್ ಎಂಬ ಮಗು ಪ್ರಾಣಾಪಾಯದಿಂದ ಪಾರಾಗಿತ್ತು. ವೈಟ್‍ಫೀಲ್ಡ್‍ನಲ್ಲಿ ಸಂಭವಿಸಿದ್ದ ಮತ್ತೊಂದು ಘಟನೆಯಲ್ಲಿ ಕಿಂಡರ್ ಗಾರ್ಡನ್ ಟೀಚರ್ ಉಮಾ ರಮಣನ್ ಅವರು ಇದೇ ರಸ್ತೆ ಗುಂಡಿಗೆ ಬಲಿಯಾಗಿದ್ದರು.
ಕಳೆದ ನವೆಂಬರ್ 27ರಂದು ಹೆಸರಘಟ್ಟದಲ್ಲಿ ನಡೆದ ರಸ್ತೆ ಗಂಡಾಗುಂಡಿಗೆ ಫುಡ್ ಡೆಲಿವರಿ ಬಾಯ್ ಅಜೀಜ್ ಆಹ್ಮದ್ ಎಂಬಾತನ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಸೆಪ್ಟೆಂಬರ್‍ನಲ್ಲಿ ಕಂಠೀರವ ಸ್ಟುಡಿಯೋ ಬಳಿ ಸಂಭವಿಸಿದ ಅಪಘಾತದಲ್ಲಿ ಮನೋಜ್ ಕುಮಾರ್ ಗೌಡರ್ ಎಂಬಾತ ಜೀವ ಕಳೆದುಕೊಂಡಿದ್ದ.
ಅದೇ ರೀತಿ ವಿಶ್ವೇಶ್ವರಯ್ಯ ಬಡಾವಣೆ ಸಮೀಪದ ಮಂಗಮ್ಮನಹಳ್ಳಿ ಕ್ರಾಸ್ ಸಮೀಪ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೀದಿ ಬದಿ ವ್ಯಾಪಾರಿ ಖುರ್ಷಿದ್ ಆಹ್ಮದ್ ಖಾನ್ ಎಂಬ ವೃದ್ಧ ರಸ್ತೆ ಗುಂಡಿ ತಪ್ಪಿಸಲು ಹೋಗಿ ಆಯತಪ್ಪಿ ಬಿದ್ದ ಪರಿಣಾಮ ಪ್ರಾಣ ಕಳೆದುಕೊಂಡಿದ್ದ. ಇತ್ತಿಚೆಗೆ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸುಪ್ರೀತ್ ಎಂಬುವರು ಪ್ರಾಣ ಕಳೆದುಕೊಂಡಿದ್ದರು.
ರಸ್ತೆ ಗುಂಡಿಗೆ ಎಷ್ಟು ಖರ್ಚು
ಕಳೆದ ಐದು ವರ್ಷಗಳಲ್ಲಿ ರಸ್ತೆ ಗುಂಡಿಗೆ ತೇಪೆ ಹಚ್ಚಲು ಬರೋಬ್ಬರಿ 210 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ.
2017-18ರಲ್ಲಿ 47.8 ಕೋಟಿ
2018-19ರಲ್ಲಿ 49.2 ಕೋಟಿ
2019-20ರಲ್ಲಿ 54.8ಕೋಟಿ
2020-21ರಲ್ಲಿ 16.4ಕೋಟಿ ಹಾಗೂ
2021-22ರಲ್ಲಿ 47ಕೋಟಿ ರೂ.ಖರ್ಚು ಮಾಡಲಾಗಿದೆ.
ಅದರಲ್ಲೂ 2019-20ನೆ ಸಾಲಿನಲ್ಲಿ ಅತಿ ಹೆಚ್ಚು ಎಂದರೆ 54.8ಕೋಟಿ ರೂ.ಗಳನ್ನು ರಸ್ತೆ ಗುಂಡಿ ಮುಚ್ಚುವ ಕಾರ್ಯಕ್ಕೆ ಬಳಕೆ ಮಾಡಿಕೊಂಡಿದ್ದರೆ, 2020-21ರಲ್ಲಿ 16.4ಕೋಟಿ ರೂ.ಗಳಷ್ಟು ಕಡಿಮೆ ಖರ್ಚು ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ 47 ಕೋಟಿ ರೂ. ಖರ್ಚು ಮಾಡಿದ್ದರೂ ಅನಾಹುತ ತಡೆಯಲು ಸಾಧ್ಯವಾಗದಿರುವುದು ವಿಪರ್ಯಾಸವೇ ಸರಿ.