ಆಸ್ತಿ ತೆರಿಗೆ, ಅಡುಗೆ ಅನಿಲ ದರ ಹೆಚ್ಚಳ ವಿರೋಧಿಸಿ ಕಾಂಗ್ರೆಸ್‍ನಿಂದ ಬಿಬಿಎಂಪಿಗೆ ಮುತ್ತಿಗೆ

ಬೆಂಗಳೂರು, ಆ.26- ಬಿಜೆಪಿ ಸರ್ಕಾರದ ಹಲವು ನೀತಿಗಳನ್ನು ಖಂಡಿಸಿ ಕಾಂಗ್ರೆಸ್ ಬಿಬಿಎಂಪಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿತು. ಜನವಿರೋಧಿ ಕೇಂದ್ರ, ರಾಜ್ಯ ಹಾಗೂ ಬಿಬಿಎಂಪಿ ನೀತಿಗಳ ವಿರುದ್ಧ ಕೈ ಕಾರ್ಯಕರ್ತರು, ಮುಖಂಡರು ಪ್ರತಿಭಟನೆ ನಡೆಸಿದರು. ಬೆಂಗಳೂರು ಕೇಂದ್ರ, ದಕ್ಷಿಣ, ಮತ್ತು ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಸಲೀಂ ಅಹಮ್ಮದ್, ರಿಜ್ವಾನ್ ಅರ್ಷದ್, ರಾಮಲಿಂಗಾರೆಡ್ಡಿ ಮತ್ತಿತರ ನಾಯಕರ ನೇತೃತ್ವದಲ್ಲಿ ಪಾಲಿಕೆಗೆ ಮುತ್ತಿಗೆ ಹಾಕಿ ಬಿಬಿಎಂಪಿ ಚಲೋ ಎಂಬ ಘೋಷವಾಕ್ಯದೊಂದಿಗೆ ಪ್ರತಿಭಟನೆ ನಡೆಸಲಾಯಿತು.

# ನಗರದಲ್ಲಿ ಆಸ್ತಿ ತೆರಿಗೆ ಹೆಚ್ಚಳ:

ವಲಯ ವರ್ಗೀಕರಣ ನೆಪದಲ್ಲಿ ಸ್ವತ್ತು ಮಾಲೀಕರ ಮೇಲೆ 120 ಕೋಟಿ ಕಂದಾಯಕ್ಕೆ 240 ಕೋಟಿ ಬಡ್ಡಿ ವಸೂಲಿ ಮತ್ತು ಅಡುಗೆ ಅನಿಲ, ಪೆಟ್ರೋಲ್, ಡಿಸೇಲ್ ದರ ಹೆಚ್ಚಳದ ವಿರುದ್ಧ ಘೋಷಣೆ ಕೂಗಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಹಲಸೂರು ಗೇಟ್, ಎಸಿಪಿ  ಫಾರೂಖಿ ಹಾಗೂ ಪಿಐ ದೀಪಕ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಬಿಬಿಎಂಪಿ ಆವರಣದಲ್ಲಿ ಸುಮಾರು 70 ಪೊಲೀಸರು ಹಾಗೂ ಒಂದು ಕೆಎಸ್‍ಆರ್‍ಪಿ ತುಕಡಿ ನಿಯೋಜನೆ ಮಾಡಲಾಗಿದೆ.

ರಾಜ್ಯ ಹಾಗೂ ಕೇಂದ್ರದ ವಿರುದ್ಧ ವಿಧಾನ ಪರಿಷತ್ ಸದಸ್ಯ ಪಿ.ಆರ್.ರಮೇಶ್ ಅಸಮಾಧಾನ ಹೊರಹಾಕಿ, ವಿನಾಕಾರಣ ನಗರದ ಜನತೆ ಮೇಲೆ ಆರ್ಥಿಕ ಹೊರೆ ಹೇರುತ್ತಿದ್ದಾರೆ. ಬಿಡಿಎಯನ್ನು ಖಾಸಗೀಕರಣ ಮಾಡಲು ಹೊರಟಿದ್ದಾರೆ. ಎಲ್ಲಾ ಕಾಂಪ್ಲೆP್ಸï ಗಳನ್ನು ಮಾರಾಟ ಮಾಡಲು ಹೊರಟಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಗಳಿಗೆ ಮುಂದಾಗಿದ್ದಾರೆ. ಕೂಡಲೇ ಅನಧಿಕೃತ ಹೊರೆಯಾಗುತ್ತಿರುವ ಹೆಚ್ಚುವರಿ ತೆರಿಗೆಯನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.

ಮಾಜಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಕೋವಿಡ್ ಇರುವುದರಿಂದ ಹೆಚ್ಚು ಸಂಖ್ಯೆಯಲ್ಲಿ ಜನ ಸೇರದೆ ಪ್ರತಿಭಟನೆ ಮಾಡುತ್ತಿದ್ದೇವೆ. ಬಿಬಿಎಂಪಿಯಿಂದ ಆಸ್ತಿ ತೆರಿಗೆ ವಿಚಾರದಲ್ಲಿ ತಪ್ಪಾಗಿದೆ. ಸರಿಪಡಿಸಲು ನೀಡಿದ ಗಡುವು ಮುಗಿದಿದ್ದು, ಈಗ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದೇವೆ ಎಂದರು.

ವಲಯ ವರ್ಗೀಕರಣದ ನೆಪ ಹೇಳಿ ಆಸ್ತಿ ಮಾಲೀಕರಿಗೆ ವಿನಾಕಾರಣ 120 ಕೋಟಿ ರೂ. ಕಂದಾಯಕ್ಕೆ 240 ಕೋಟಿ ರೂ. ಬಡ್ಡಿ ಹಾಗೂ ದಂಡ ವಸೂಲಿ ಮಾಡಲು ಮುಂದಾಗಿರುವ ಕ್ರಮ ತಪ್ಪು. ಬಿಜೆಪಿ ಸರ್ಕಾರ ಜನರ ಹಿತ ಕಾಯುವಲ್ಲಿ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪೆಟ್ರೋಲ್ 105, ಗ್ಯಾಸ್ ಬೆಲೆ 900 ರೂ. ದಾಟಿದೆ. ಅಧಿಕಾರದಲ್ಲಿಲ್ಲದೆ ಇರುವಾಗ ಒಂದು, ಇದ್ದಾಗ ಒಂದು ಜನವಿರೋಧಿ ನೀತಿ ಕೈಗೊಳ್ಳುತ್ತಿದ್ದಾರೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಆಡಳಿತಕ್ಕೆ ಬಂದ ನಂತರ 23 ಕೋಟಿ ಜನ ಬಡತನ ರೇಖೆಗಿಂತ ಕೆಳಗೆ ಬಂದಿದ್ದಾರೆ. ಕೇವಲ ಬಣ್ಣಬಣ್ಣದ ಮಾತನಾಡಿ, ಜನರ ಸಂಕಷ್ಟ ಕೇಳುವವರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ, ಪೆಟ್ರೋಲï, ಡಿಸೇಲï, ಅಡುಗೆ ಎಣ್ಣೆ ದರ ಗಗನಕ್ಕೇರಿರುವ ಈ ಸಮಯದಲ್ಲಿ ದೇಶ ಪ್ರೇಮಿಗಳೆಲ್ಲ ಎಲ್ಲಿ ಹೋದರು ಎಂದು ಪ್ರಶ್ನಿಸಿದರು.

ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ದುಬಾರಿ ದುನಿಯಾ ಅಂತ ಸಿಲಿಂಡರ್ ಹಿಡಿದು ಸ್ಮೃತಿ ಇರಾನಿ, ಶೋಭಾ ಕರಂದ್ಲಾಜೆ ಅವರು ಪ್ರತಿಭಟನೆ ಮಾಡಿದ್ದರು. ಅವರು ಪ್ರತಿಭಟನೆ ಮಾಡಿದ್ದಕ್ಕೆ ಕೇಂದ್ರದಲ್ಲಿ ಮಂತ್ರಿಗಿರಿ ಸಿಕ್ಕಿದೆ ಎಂದು ವ್ಯಂಗ್ಯವಾಡಿದರು. ತಾಕತ್ತಿದ್ದರೆ ಬಿಜೆಪಿಯವರು ಹೆಚ್ಚುವರಿ ತೆರಿಗೆ ವಸೂಲಿಗೆ ಮನೆ ಬಳಿ ಬನ್ನಿ ಎಂದು ಸವಾಲು ಹಾಕಿದರು.

ವಿಧಾನಸಭೆ ವಿಸರ್ಜನೆ ಮಾಡಿ ಚುನಾವಣೆಗೆ ಹೋಗೋಣ. ಬಿಜೆಪಿ 30 ಸೀಟು ಮೇಲೆ ಗೆಲ್ಲುವುದಿಲ್ಲ ಎಂದ ಅವರು, ನಿಮಗೆ ಗೌರವವಿದ್ದರೆ ಜನರಿಗೆ ಹಾಕುತ್ತಿರುವ ತೆರಿಗೆಯನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ ಅವರು ಹೋರಾಟದ ಮೂಲಕ ನಾವು ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಹೇಳಿದರು.