ಬಿಬಿಎಂಪಿ ಮೀಸಲಾತಿ ಅಕ್ಷೇಪಣೆಗಳಿದ್ದರೆ ನ್ಯಾಯಾಲಯದಲ್ಲಿ ಪ್ರಶ್ನಿಸಿ

Social Share

ಬೆಂಗಳೂರು,ಆ.6- ಸುಪ್ರೀಂಕೋರ್ಟ್ ನಿರ್ದೇಶನದಂತೆ ಬಿಬಿಎಂಪಿ ವಾರ್ಡ್ ಪುನರ್‍ ವಿಂಗಡಣೆ ಹಾಗೂ ಮೀಸಲಾತಿಯನ್ನು ಜಾರಿ ಮಾಡಲಾಗಿದೆ. ಒಂದು ವೇಳೆ ಯಾರಿಗಾದರೂ ತಕರಾರರು ಇದ್ದರೆ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ ಸವಾಲು ಹಾಕಿದ್ದಾರೆ.

ನಾವು ವೈಜ್ಞಾನಿಕವಾಗಿಯೇ ಬಿಬಿಎಂಪಿ ವಾರ್ಡ್‍ಗಳನ್ನು ಪುನರ್ ವಿಂಗಡಿಸಿ ಪ್ರತಿಯೊಂದು ಸಮುದಾಯಕ್ಕೂ ಸಾಮಾಜಿಕ ನ್ಯಾಯ ಒದಗಿಸುವ ಸದುದ್ದೇಶದಿಂದಲೇ ಮೀಸಲಾತಿ ನಿಗದಿಪಡಿಸಿದ್ದೇವೆ. ವೈಜ್ಞಾನಿಕವಾಗಿ ನ್ಯಾಯಾಲಯದಲ್ಲಿ ಪ್ರಶ್ನಿಸುವುದಾದರೆ ನಮ್ಮದೇನು ಅಭ್ಯಂತರವಿಲ್ಲ ಎಂದು ಸ್ಪಷ್ಟಪಡಿಸಿದರು.

ಪಕ್ಷದ ಕಚೇರಿಯಲ್ಲಿ ಸುದ್ದಿ ಗೋಷ್ಠಿ ನಡೆಸಿದ ಅಶ್ವಥ್ ನಾರಾಯಣ, ಮಹಿಳೆಯರಿಗೆ ಶೇ.50ರಷ್ಟು, ಹಿಂದುಳಿದ ವರ್ಗದವರಿಗೆ ಶೇ.50, ಎಸ್ಸಿಎಸ್ಸಿಯವರಿಗೆ ಶೇ.50ರಷ್ಟು ಸಾಮಾನ್ಯ ವರ್ಗದವರಿಗೆ ಶೇ.50 ಮೀಸಲಾತಿ ನೀಡಿದ್ದೇವೆ. ಇದು ಸಾಮಾಜಿಕ ನ್ಯಾಯವಲ್ಲವೇ ಎಂದು ಪ್ರಶ್ನಿಸಿದರು.

ಸರ್ಕಾರ ಹೊರಡಿಸಿರುವ ಅಧಿಸೂಚನೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಎಲ್ಲರೂ ಸರ್ವ ಸ್ವತಂತ್ರರು. ಅದನ್ನು ಬಿಟ್ಟು ತೋಳ್ಬಲ ತೋರಿಸುವುದು, ಗೂಂಡಾಗಿರಿ ನಡೆಸುವುದು ಯಾರಿಗೂ ಶೋಭೆ ತರುವುದಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ನಾಯಕರ ತಲೆಯಲ್ಲಿ ಏನೂ ಇಲ್ಲ. ಚುನಾವಣೆ ಮುಂದೂಡಬೇಕೆಂಬುದು ಅವರ ಉದ್ದೇಶ. ಹೇಗಿದ್ದರೂ ಸೋಲುತ್ತೇವೆ ಎಂಬುದು ಅವರಿಗೆ ಗೊತ್ತು. ಚುನಾವಣೆ ಎದುರಿಸಲು ಸಾಧ್ಯವಾಗದ ಅವರು ವಾರ್ಡ್ ಪುನರ್ ವಿಂಗಡನೆ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ತಕರಾರು ತೆಗೆದಿದ್ದಾರೆಂದು ಕಿಡಿಕಾರಿದರು. ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೆ ವೈಜ್ಞಾನಿಕವಾಗಿಯೇ ಮೀಸಲಾತಿಯನ್ನು ನಿಗದಿಪಡಿಸಲಾಗಿದೆ.

ಬೆಂಗಳೂರಿನಲ್ಲಿ ಬಿಬಿಎಂಪಿಗೆ ಜನಪ್ರತಿನಿಧಿಗಳ ಸರ್ಕಾರ ಇರಬೇಕೆಂಬುದು ಜನತೆಯ ಒತ್ತಾಸೆಯಾಗಿದೆ. ಆದರೆ ಇದಕ್ಕೆ ಕಾಂಗ್ರೆಸ್ ಅಡ್ಡಿಯಾಗಿದೆ ಎಂದು ಆರೋಪಿಸಿದರು.

ಬೊಮ್ಮನಹಳ್ಳಿ ಶಾಸಕ ಹಾಗೂ ವಿಧಾನಸಭೆಯ ಮುಖ್ಯ ಸಚೇತಕ ಸತೀಶ್ ರೆಡ್ಡಿ ಮಾತನಾಡಿ, ಮೀಸಲಾತಿ ಮತ್ತು ಪುನರ್ ವಿಂಗಡಣೆ ಮಾಡುವ ಮುನ್ನ ಹೊರ ರಾಜ್ಯಕ್ಕೆ ತೆರಳಿ ಅಧಿಕಾರಿಗಳು ಅಧ್ಯಯನ ನಡೆಸಿದ್ದಾರೆ. ಇದನ್ನು ವೈಜ್ಞಾನಿಕವಾಗಿ ಮಾಡಿದ್ದರೂ ತಕರಾರರು ಏಕೆ ಎಂದು ಪ್ರಶ್ನಿಸಿದರು.

ಯಾವುದೇ ಸಮುದಾಯ ಅಥವಾ ಕ್ಷೇತ್ರಗಳನ್ನು ಗುರಿಯಾಗಿಟ್ಟುಕೊಂಡು ಪುನರ್ ವಿಂಗಡಣೆ ಮಾಡಿಲ್ಲ. ಬೊಮ್ಮನಹಳ್ಳಿ, ಕೆ.ಆರ್.ಪುರಂ, ರಾಜರಾಜೇಶ್ವರಿನಗರ, ಶಿವಾಜಿನಗರ, ಸರ್.ಸಿ.ವಿ.ರಾಮನಗರ, ಮಹದೇವಪುರ ಸೇರಿದಂತೆ ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೂ ಸಾಮಾಜಿಕ ನ್ಯಾಯದಡಿ ಮೀಸಲಾತಿ ಒದಗಿಸಲಾಗಿದೆ.

ರೊಟೇಷನ್ ಪ್ರಕಾರವೇ ಮೀಸಲಾತಿ ಹಾಗೂ ಪುನರ್ ವಿಂಗಡಣೆ ಮಾಡಿರುವಾಗ ಚುನಾವಣೆ ಎದುರಿಸಲು ಸಾಧ್ಯವಿಲ್ಲದ ಕಾಂಗ್ರೆಸ್ ಕುಂಟು ನೆಪ ಹೇಳುತ್ತಿದೆ ಎಂದು ವ್ಯಂಗ್ಯವಾಡಿದರು.

ನಾವು ನಮ್ಮ ಸರ್ಕಾರದ ಕಾರ್ಯಕ್ರಮಗಳ ಮೇಲೆ ಚುನಾವಣೆಗೆ ಹೋಗುತ್ತೇವೆ. ಬಿಬಿಎಂಪಿ ಚುನಾವಣೆಯಲ್ಲಿ ಖಂಡಿತವಾಗಿಯೂ ಬಿಜೆಪಿ ಸ್ಪಷ್ಟಜನಾದೇಶ ಪಡೆದು ಅಕಾರ ಹಿಡಿಯಲಿದೆ. ಕಾಂಗ್ರೆಸ್‍ಗೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಸತೀಶ್ ರೆಡ್ಡಿ ಎಚ್ಚರಿಕೆ ನೀಡಿದರು.

ನಮಗೆ ಅನುಮಾನಗಳಿದ್ದರೆ ಎಲ್ಲಿ ಬೇಕಾದರೂ ಪ್ರಶ್ನೆ ಮಾಡಿ. ಆದರೆ ವಿಧಾನಸೌಧ, ವಿಕಾಸಸೌಧಕ್ಕೆ ಬಂದು ಗೂಂಡಾಗಿರಿ ಮಾಡಬೇಡಿ. ಹಲವಾರು ವರ್ಷ ಆಡಳಿತ ನಡೆಸಿರುವ ಕಾಂಗ್ರೆಸ್‍ಗೆ ಇದು ಶೋಭೆ ತರುವುದಿಲ್ಲ ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯ ರವಿಕುಮಾರ್ ಉಪಸ್ಥಿತರಿದ್ದರು.

Articles You Might Like

Share This Article