ಬೆಂಗಳೂರು,ಆ.4- ಬಿಬಿಎಂಪಿಯ 243 ವಾರ್ಡ್ಗಳಿಗೆ ರಾತ್ರೋರಾತ್ರಿ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಟಿಕೆಟ್ ಆಕಾಂಕ್ಷಿಗಳ ಅಸಮಾಧಾನ ಸ್ಫೋಟಗೊಂಡಿದೆ. ಮೀಸಲಾತಿ ನಿಗಧಿ ಜನಸಂಖ್ಯೆಗೆ ಅನುಗುಣವಾಗಿ ನಡೆದಿಲ್ಲ ಎಂಬ ಆರೋಪದ ಜೊತೆಗೆ ಕೆಲ ಶಾಸಕರು ತಮಗಾದವರಿಗೆ ಟಿಕೆಟ್ ತಪ್ಪಿಸುವ ಉದ್ದೇಶದಿಂದಲೇ ಮನಸೋ ಇಚ್ಚೆ ಮೀಸಲಾತಿ ವಿಂಗಡಿಸಿ ಕೆಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇದರ ಜೊತೆಗೆ ಪ್ರತಿಪಕ್ಷಗಳಿಗೆ ಪ್ರತಿಕೂಲ ಪರಿಣಾಮ ಉಂಟು ಮಾಡುವಂತೆ ಮೀಸಲಾತಿ ಹಂಚಿಕೆ ಮಾಡಿ ಮುಂಬರುವ ದಿನಗಳಲ್ಲಿ ನಡೆಯಲಿರುವ ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಗೆಲುವಿಗೆ ಸಹಕಾರಿಯಾಗುವಂತೆ ನೋಡಿಕೊಳ್ಳಲಾಗಿದೆ ಎಂದು ಕೆಲವರು ಆರೋಪಿಸಿದ್ದಾರೆ.
ಅದರಲ್ಲೂ ಪ್ರಮುಖವಾಗಿ ಬಿಜೆಪಿಗೆ ಪ್ರಬಲ ಪೈಪೋಟಿ ನೀಡುವ ಕಾಂಗ್ರೆಸ್ ಪಕ್ಷದ ಕೆಲ ಘಟಾನುಘಟಿಗಳು ಚುನಾವಣೆಯಲ್ಲಿ ಸ್ರ್ಪಧಿಸಲು ಸಾಧ್ಯವಿಲ್ಲದಂತಹ ಸನ್ನಿವೇಶ ನಿರ್ಮಾಣ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಬಿಜೆಪಿ ವಿರುದ್ಧ ಸದಾ ಘರ್ಜಿಸುತ್ತಿದ್ದ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎಂ.ಶಿವರಾಜು, ಅಬ್ದುಲ್ ವಾಜೀದ್, ಮಾಜಿ ಮೇಯರ್ ಪದ್ಮಾವತಿ, ಗಂಗಾಂಬಿಕೆ, ಮಂಜುನಾಥ್ ರೆಡ್ಡಿ ಮಾಜಿ ಸದಸ್ಯರಾದ ಬೈರಸಂದ್ರ ನಾಗರಾಜ್, ಮಹಮದ್ ರಿಜ್ವಾನ್ ಮತ್ತಿತರರು ಅವರ ವಾರ್ಡ್ಗಳಲ್ಲಿ ಸ್ರ್ಪಸಲು ಸಾಧ್ಯವಾಗದಂತೆ ನೋಡಿಕೊಳ್ಳಲಾಗಿದೆ.
ಆಡಳಿತ ಪಕ್ಷದವರಿಗೂ ಬಿಸಿ: ಬಿಜೆಪಿಯವರು ಕೇವಲ ಪ್ರತಿಪಕ್ಷಗಳ ಸದಸ್ಯರ ಮೇಲೆ ಮಾತ್ರ ಸೇಡು ತೀರಿಸಿಕೊಂಡಿಲ್ಲ. ತಮ್ಮ ಪಕ್ಷದಲ್ಲೇ ತಮ್ಮ ವಿರುದ್ಧ ತಿರುಗಿಬಿದ್ದ ಸ್ವಪಕ್ಷಿಯ ಸದಸ್ಯರು ಬಿಬಿಎಂಪಿ ಚುನಾವಣೆಯಲ್ಲಿ ಸ್ರ್ಪಧಿಸಲು ಸಾಧ್ಯವಾಗದಂತೆ ನೋಡಿಕೊಳ್ಳಲಾಗಿದೆ.
ಒಂದು ಕಾಲದಲ್ಲಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರ ಬಲಗೈ ಭಂಟನಂತಿದ್ದ ಹೆಮ್ಮಿಗೆಪುರ ವಾರ್ಡ್ನ ಆರ್ಯ ಶ್ರೀನಿವಾಸ್ ಇತ್ತಿಚೆಗೆ ಸಚಿವರ ವಿರುದ್ಧ ಅಸಮಾಧಾನಗೊಂಡಿದ್ದರು. ತಮ್ಮ ವಿರುದ್ಧವೇ ತಿರುಗಿಬಿದ್ದ ಒಂದು ಕಾಲದ ಶಿಷ್ಯ ಆರ್ಯ ಶ್ರೀನಿವಾಸ್ ಈ ಬಾರಿ ಹೆಮ್ಮಿಗೆಪುರದಿಂದ ಸ್ರ್ಪಧಿಸಲು ಸಾಧ್ಯವಾಗದಂತೆ ನೋಡಿಕೊಳ್ಳುವ ಮೂಲಕ ಸೋಮಶೇಖರ್ ತನ್ನ ಹಳೆ ಶಿಷ್ಯನ ಮೇಲೆ ಸೇಡು ತೀರಿಸಿಕೊಂಡಿದ್ದಾರೆ.
ಅದೇ ರೀತಿ ಇನ್ನು ಕೆಲವು ವಾರ್ಡ್ಗಳಲ್ಲೂ ತಮಗೆ ಬೇಕಾದವರಿಗೆ ಮಾತ್ರ ಸ್ರ್ಪಧಿಸಲು ಅವಕಾಶ ಕಲ್ಪಿಸಿಕೊಡುವಲ್ಲಿಯೂ ಅವರು ಯಶಸ್ವಿಯಾಗಿದ್ದಾರೆ. ಅದೇ ರೀತಿ ಪದ್ಮನಾಭನಗರ, ರಾಜರಾಜೇಶ್ವರಿ ನಗರ, ಮಹಾಲಕ್ಷ್ಮಿ ಬಡಾವಣೆ, ರಾಜಾಜಿನಗರ ಮತ್ತಿತರ ಕ್ಷೇತ್ರಗಳಲ್ಲೂ ಇದೇ ರೀತಿ ಶಾಸಕರ ವಿರುದ್ಧ ತಿರುಗಿಬಿದ್ದವರು ಎಲ್ಲೂ ಸ್ರ್ಪಧಿಸಲು ಅವಕಾಶವಿಲ್ಲದಂತೆ ಮಾಡಲಾಗಿದೆ.
ಮಾಜಿ ಮೇಯರ್ಗಳಿಗೂ ನಿರಾಸೆ: ಬಿಬಿಎಂಪಿಯಲ್ಲಿ ಅತ್ಯಂತ ಹಿರಿಯ ಸದಸ್ಯ ಎಂಬ ಹಿರಿಮೆಗೆ ಪಾತ್ರರಾಗಿರುವ ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ, ಎಸ್.ಕೆ.ನಟರಾಜ್ ಅವರು ಕೂಡ ಎಲ್ಲೂ ಸ್ರ್ಪಧಿಸಲು ಅವಕಾಶವಿಲ್ಲದೆ ನಿರಾಶರಾಗಿದ್ದಾರೆ.
ಕಂದಾಯ ಸಚಿವ ಆರ್.ಅಶೋಕ್ ಅವರ ಕಟ್ಟಾ ಬೆಂಬಲಿಗರಾಗಿ ಸತತ ನಾಲ್ಕು ವರ್ಷಗಳ ಕಾಲ ಬಿಬಿಎಂಪಿಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಬಿಜೆಪಿಯ ಹಿರಿಯ ಸದಸ್ಯ ಪದ್ಮನಾಭರೆಡ್ಡಿ ಅವರು ಪ್ರತಿನಿಧಿಸುವ ಕಾಚರಕನಹಳ್ಳಿ ವಾರ್ಡ್ ಮೀಸಲಾತಿಯನ್ನು ಬದಲಾವಣೆ ಮಾಡಲಾಗಿದೆ.
ಅದೇ ರೀತಿ ಬಿಜೆಪಿಯಲ್ಲಿ ನಿಷ್ಠಾವಂತ ಕಾರ್ಯಕರ್ತೆಯಾಗಿದ್ದ ಭಾಗ್ಯವತಿ ಅಮರೇಶ್ ಅವರಿಗೆ ಹೊಂಬೇಗೌಡ ನಗರದಲ್ಲಿ ಮೀಸಲು ಕಲ್ಪಿಸುವ ಭರವಸೆ ನೀಡಿ ಇದೀಗ ಮಾತಿಗೆ ತಪ್ಪಿರುವ ಬಿಜೆಪಿ ಮುಖಂಡರು ಖ್ಯಾತ ಚಿತ್ರನಟ ಸುದೀಪ್ ಅವರ ಬಲಗೈ ಭಂಟ ಜಾಕ್ ಮಂಜು ಅವರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ.
ಡಬ್ಬಲ್ಗೇಮ್: ಮೀಸಲು ನಿಗದಿ ವಿಚಾರದಲ್ಲಿ ನಗರವನ್ನು ಪ್ರತಿನಿಸುವ ಶಾಸಕರು ಈ ಬಾರಿ ಡಬ್ಬಲ್ ಗೇಮ್ ಆಡಿದ್ದಾರೆ ಎಂದು ಅಸಮಾಧನಗೊಂಡಿರುವ ಕೆಲವರು ಆರೋಪಿಸಿದ್ದಾರೆ. ಇದು ಕೇವಲ ಬಿಜೆಪಿ ಶಾಸಕರಿಗೆ ಮಾತ್ರ ಅನ್ವಯಿಸುವುದಿಲ್ಲ. ಕಾಂಗ್ರೆಸ್ನ ಕೆಲ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ತಮ್ಮ ಮಾತು ಕೇಳದ ಮಾಜಿ ಸದಸ್ಯರಿಗೂ ಟಿಕೆಟ್ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಂಗ್ರೆಸ್ನಿಂದ ಮೇಯರ್ ಆಗಿದ್ದ ಸಂಪತ್ರಾಜ್ ಸ್ರ್ಪಧಿಸುತ್ತಿದ್ದ ಡಿ.ಜೆ.ಹಳ್ಳಿ ವಾರ್ಡ್ ಅನ್ನು ಈ ಬಾರಿ ಹಿಂದುಳಿದ ವರ್ಗಕ್ಕೆ ಮೀಸಲಾಗಿಡುವಂತೆ ನೋಡಿಕೊಳ್ಳಲಾಗಿದೆ. ಈ ಷಡ್ಯಂತ್ರದ ಹಿಂದೆ ಶಾಸಕ ಅಖಂಡ ಶ್ರೀನಿವಾಸ್ಮೂರ್ತಿ ಕೈವಾಡವಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಒಟ್ಟಾರೆ, ಬಿಬಿಎಂಪಿಯ 243 ವಾರ್ಡ್ಗಳಿಗೆ ರೂಪಿಸಿರುವ ಮೀಸಲಾತಿಗೆ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರಲ್ಲೂ ಅಸಮಾಧಾನ ಹೆಚ್ಚಾಗಲು ಕಾರಣವಾಗಿದ್ದು, ಕೆಲವರು ನ್ಯಾಯಾಲಯದ ಮೆಟ್ಟಿಲೇರುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.
ವಿಧಾನಸಭೆಗೂ ಮುನ್ನ ಬಿಬಿಎಂಪಿ ಚುನಾವಣೆ ನಡೆಸಲು ಇಷ್ಟವಿಲ್ಲದೆ ಬಿಜೆಪಿಯವರು ಯದ್ವಾತದ್ವಾ ಮೀಸಲಾತಿ ಕಲ್ಪಿಸಿ ಕೆಲವರು ನ್ಯಾಯಾಲಯದ ಮೆಟ್ಟಿಲೇರಲು ಪರೋಕ್ಷವಾಗಿ ಸಹಕರಿಸುವ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಪ್ಲಾನ್ ಮಾಡಿದ್ದಾರೆ ಎಂಬ ಮಾತುಗಳು ಬಿಬಿಎಂಪಿ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ.