ಸಚಿವರ ತರಾಟೆಯ ಬೆನ್ನಲ್ಲೇ ರಸ್ತೆ ಉಬ್ಬು ಸರಿಪಡಿಸಿದ ಬಿಬಿಎಂಪಿ

Social Share

ಬೆಂಗಳೂರು,ಫೆ.8- ಮಲ್ಲೇಶ್ವರಂನ ಮಾರ್ಗೋಸಾ ರಸ್ತೆಯಲ್ಲಿ ಅವೈಜ್ಞಾನಿಕ ರಸ್ತೆ ಉಬ್ಬನ್ನು ಬಿಬಿಎಂಪಿ ಸಿಬ್ಬಂದಿ ತಡರಾತ್ರಿಯೇ ಸರಿಪಡಿಸಿದ್ದಾರೆ.
ವಾಹನ ಸವಾರರಿಗೆ ಇದು ಸ್ಪಷ್ಟವಾಗಿ ಕಾಣಿಸುವಂತೆ ಬಿಳಿ ಬಣ್ಣದ ಪಟ್ಟೆಗಳನ್ನು ಕೂಡ ಬಳಿದಿದ್ದಾರೆ. ಜತೆಗೆ, ರಸ್ತೆ ಉಬ್ಬಿಗೂ ಸ್ವಲ್ಪ ಮೊದಲೇ ವಾಹನ ಸವಾರರು ತಮ್ಮ ವೇಗವನ್ನು ನಿಯಂತ್ರಿಸಲು ಅನುಕೂಲವಾಗುವಂತೆ ಈಗ ರಂಬ್ಲರ್ ಕೂಡ ಹಾಕಲಾಗಿದೆ.
ಈ ಅವೈಜ್ಞಾನಿಕ ರಸ್ತೆ ಉಬ್ಬಿಗೆ ಸಂಬಂಸಿದಂತೆ ಕ್ಷೇತ್ರದ ಶಾಸಕರಾದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ನಿನ್ನೆ ಸಂಜೆ ಬಿಬಿಎಂಪಿ ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡು, ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದ್ದರು.
ಬಿಬಿಎಂಪಿ ಬೃಹತ್ ರಸ್ತೆಗಳ ವಿಭಾಗದ ಎಂಜಿನಿಯರ್ ಪ್ರವೀಣ್ ಅವರಿಗೆ ಎಚ್ಚರಿಕೆ ನೀಡಿ, ಸಮಸ್ಯೆ ಯನ್ನು ತ್ವರಿತವಾಗಿ ಸರಿಪಡಿ ಸಲು ಸೂಚಿಸಿದ್ದರು. ಅಲ್ಲದೆ, ಇಲ್ಲಿ ಇತ್ತೀಚೆಗೆ ಒಂದಿಷ್ಟು ಅಪಘಾತಗಳು ಸಂಭವಿಸಿದ್ದರೂ ಈ ಅಧಿಕಾರಿಯು ಸ್ಥಳಕ್ಕೆ ಭೇಟಿ ನೀಡದೆ ಇದ್ದುದನ್ನು ಸಚಿವರು ಗಂಭೀರವಾಗಿ ಪರಿಗಣಿಸಿದ್ದರು.
ಇದರಿಂದ ಕೂಡಲೇ ಎಚ್ಚೆತ್ತುಕೊಂಡ ಬಿಬಿಎಂಪಿ ಸಿಬ್ಬಂದಿ, ನಿನ್ನೆ ರಾತ್ರಿಯೇ ಮಾರ್ಗೋಸಾ ರಸ್ತೆಯಲ್ಲಿ ಕೆಲದಿನಗಳ ಹಿಂದೆ ತಾವೇ ಅವೈಜ್ಞಾನಿಕವಾಗಿ ನಿರ್ಮಿಸಿದ್ದ ರಸ್ತೆ ಉಬ್ಬನ್ನು ಸರಿಪಡಿಸಿದ್ದಾರೆ. ಇದರ ಜತೆಗೆ ಕ್ಷೇತ್ರದ ವ್ಯಾಪ್ತಿಗೆ ಬರುವ ರಾಮಮೋಹನಪುರ, ಮಹಾಕವಿ ಕುವೆಂಪು ರಸ್ತೆ, ಶ್ರೀರಾಂಪುರದ 3ನೇ ಮುಖ್ಯ ರಸ್ತೆ, ಗಾಯತ್ರೀನಗರ ಡಿ ಬ್ಲಾಕ್, ರಾಜಾಜಿನಗರ 2ನೇ ಬ್ಲಾಕ್ ಮುಂತಾದ ಕಡೆಗಳಲ್ಲೂ ರಸ್ತೆ ಉಬ್ಬುಗಳಿಗೆ ಬಿಳಿ ಬಣ್ಣದ ಪಟ್ಟೆಗಳನ್ನು ಹಾಕಲಾಗಿದೆ.
ಸಮಸ್ಯೆಗೆ ಸ್ಪಂದಿಸಿ, ಕ್ಷಿಪ್ರ ಗತಿಯಲ್ಲಿ ಬಗೆಹರಿಸಿದ್ದಕ್ಕಾಗಿ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಚಿವರ ಸೂಚನೆ ಮೇರೆಗೆ ತಕ್ಷಣ ರಸ್ತೆ ಉಬ್ಬು ಸರಿಪಡಿಸಿದ ಅಕಾರಿಗಳನ್ನು ಸಚಿವರು ಅಭಿನಂದಿಸಿದ್ದಾರೆ.

Articles You Might Like

Share This Article