ರಾಜಕಾಲುವೆ ಒತ್ತುವರಿ ತೆರವಿಗೆ ಸೂಚನೆ
ಬೆಂಗಳೂರು, ಮೇ 21- ರಾಜಕಾಲುವೆ ಒತ್ತುವರಿಯನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಮಹದೇವಪುರ ವಲಯದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಅವರು ಅಧಿಕಾರಿಗಳಿಗೆ ಈ ಸೂಚನೆ ನೀಡಿದರು.
ಹೊರಮಾವು ವಾರ್ಡ್ ಪೂರ್ವ ಫಾಮ್ ಬೀಚ್ ಅಪಾರ್ಟ್ ಮೆಂಟ್ ರಸ್ತೆ ಸಮೀಪ ಇರುವ ಕಚ್ಚಾ ಡ್ರೈನ್ಅನ್ನು ಪಕ್ಕಾ ಡ್ರೈನ್ ಆಗಿ ಪರಿವರ್ತಿಸುವಂತೆ ಅವರು ಸೂಚನೆ ನೀಡಿದರು. ಇದೇ ವೇಳೆ ರಾಜಕಾಲುವೆಗಳನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುವುದನ್ನು ಗುರುತಿಸಿ, ಕೂಡಲೆ ತೆರವು ಕಾರ್ಯ ಪ್ರಾರಂಭಿಸಲು ಹೇಳಿದರು.
ಕೆಆರ್ ಪುರಂ ವಾರ್ಡ್ನ ಹಲವಾರು ಮಳೆ ಅನಾಹುತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಆಯುಕ್ತರು, ಅನಾಹುತ ತಪ್ಪಿಸುವ ಕಾಮಗಾರಿಯನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದರು. ಮಹದೇವಪುರ ಕೆರೆ ಅಭಿವೃದ್ಧಿ ಕಾಮಗಾರಿ ಪರಿಶೀಲನೆ ನಡೆಸಿ ಆವರಣದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಅಭಿವೃದದ್ಧಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಕೆರೆಯಲ್ಲಿ ಹೂಳೆತ್ತುವಂತೆಯೂ ತಿಳಿಸಿದರು.
ಹಳೆ ವಿಮಾನ ನಿಲ್ದಾಣ ರಸ್ತೆ, ಹೆಚ್ಎಎಲ್ ಕೆಳಸೇತುವೆ, ಕುಂದಲಹಳ್ಳಿ ಕೆಳಸೇತುವೆ, ವರ್ತೂರು ವೃತ್ತದ ಬಳಿ ರಸ್ತೆ ಅಗಲೀಕರಣ ಕಾಮಗಾರಿ ಪರಿಶೀಲನೆ ಹಾಗೂ ಹೊರಮಾವಿನ ಮಸ್ಟರಿಂಗ್ ಪಾಯಿಂಟ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ಸಂದರ್ಭದಲ್ಲಿ
ಪೌರ ಕಾರ್ಮಿಕರುಮತ್ತಿತರರ ಸಮಸ್ಯೆಗಳನ್ನು ಆಲಿಸಿದರು.
ಪರಿಶೀಲನೆ ವೇಳೆ ವಲಯ ಆಯುಕ್ತ ಡಾ. ತ್ರಿಲೋಕ್ ಚಂದ್ರ, ವಲಯ ಜಂಟಿ ಆಯುಕ್ತ ವೆಂಕಟಾಚಲಪತಿ, ಮುಖ್ಯ ಅಭಿಯಂತರರಾದ ಪರಮೇಶ್ವರಯ್ಯ, ಪ್ರಹ್ಲಾದ್, ಬಸವರಾಜ್ ಕಬಾಡೆ, ವಿಜಯ್ ಕುಮಾರ್, ಹರಿದಾಸ್ ಹಾಗೂ ಮತ್ತಿತರ ಅಕಾರಿಗಳು ಉಪಸ್ಥಿತರಿದ್ದರು.