ಬಿಬಿಎಂಪಿಯಿಂದ ವಿಶೇಷ ಲಸಿಕಾ ಮೇಳ

Spread the love

ಬೆಂಗಳೂರು, ಅ.22- ರಾಜಧಾನಿ ಬೆಂಗಳೂರಿನಲ್ಲಿ ಶೇ.100ರಷ್ಟು ಕೋವಿಡ್ ಲಸಿಕೆ ಗುರಿಮುಟ್ಟಲು ಪಣತೊಟ್ಟಿರುವ ಬಿಬಿಎಂಪಿ ಇಂದು ನಗರದೆಲ್ಲೇಡೆ ವಿಶೇಷ ಲಸಿಕಾ ಮೇಳ ಆಯೋಜಿಸಿತ್ತು. ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಲಸಿಕಾ ಕೇಂದ್ರ, ಮೊಬೈಲ್ ಲಸಿಕಾ ಕೇಂದ್ರಗಳು, ಬ್ಲಾಕ್ ಮತ್ತು ಲೇನ್ ಮಟ್ಟದಲ್ಲಿ ನಾಗರೀಕರು ಲಸಿಕೆ ಪಡೆಯುತ್ತಿದ್ದ ದೃಶ್ಯ ಸಾಮಾನ್ಯ ವಾಗಿತ್ತು.

ಈ ಕುರಿತು ಪ್ರತಿಕ್ರಿಯಿಸಿದ ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ)ತ್ರಿಲೋಕ್ ಚಂದ್ರ, ನಗರದಲ್ಲಿ ಶೇ.86ರಷ್ಟು ಮೊದಲನೆ ಡೋಸ್, ಶೇ.52ರಷ್ಟು ಎರಡನೆ ಡೋಸ್ ಲಸಿಕೆಯನ್ನು ನಗರದ ನಾಗರಿಕರಿಗೆ ಇದುವರೆಗೆ ನೀಡಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಲಸಿಕಾ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ ಬ್ಲಾಕ್ ಮತ್ತು ಲೇನ್ ಮಟ್ಟದಲ್ಲಿ ಲಸಿಕೆ ನೀಡಲಾಗುತ್ತಿದೆ.

ಲಸಿಕೆ ಪಡೆಯದವರನ್ನು ಗುರುತಿಸಿ ಎಲ್ಲರಿಗೂ ಲಸಿಕೆ ನೀಡುವ ಸಲುವಾಗಿ ವಿಶೇಷ ಲಸಿಕಾ ಮೇಳವನ್ನು ಇಂದು ನಗರದಾದ್ಯಂತ ಹಮ್ಮಿಕೊಳ್ಳಲಾಯಿತು ಎಂದು ಹೇಳಿದರು. ಇದರ ಪ್ರಯೋಜನವನ್ನು ನಾಗರಿಕರು ಪಡೆಯುವಂತೆ ವ್ಯವಸ್ಥೆ ಮಾಡಲಾಗಿದೆ. ನಗರದ ಅರ್ಹ ನಾಗರಿಕರು ಈ ಮೇಳದ ಪ್ರಯೋಜನ ಪಡೆಯುವಂತೆ ಹಾಗೂ ಕೊಳಗೇರಿ ಪ್ರದೇಶಗಳಲ್ಲಿನ ನಿವಾಸಿಗಳು, ಬೀದಿ ಬದಿ ವ್ಯಾಪಾರಿಗಳು,

ವಿವಿಧ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ, ಕಟ್ಟಡ ನಿರ್ಮಾಣ ಮಾಡುವ ಸ್ಥಳಗಳಲ್ಲಿ, ಮಾರುಕಟ್ಟೆ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಇನ್ನಿತರ ಸ್ಥಳಗಳಲ್ಲಿ ಲಸಿಕಾ ಕೇಂದ್ರಗಳ ವ್ಯವಸ್ಥೆ ಮಾಡಿಕೊಂಡು ಲಸಿಕೆ ನೀಡಬೇಕೆಂದು ಈ ಹಿಂದಿನ ಸಭೆಯಲ್ಲಿಯೇ ಸೂಚಿಸಲಾಗಿತ್ತು ಎಂದು ತಿಳಿಸಿದರು.

ಮುಖ್ಯವಾಗಿ ಟ್ರೇಡರ್ಸ್ ಅಸೋಸಿಯೇಷನ್, ಹೋಟೆಲ್ ಅಸೋಸಿಯೇಷನ್, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳೊಂದಿಗೆ ಸಮನ್ವಯ ಸಾಸಿ ಲಸಿಕೆ ಪಡೆಯದವರಿಗೆ ಲಸಿಕೆ ನೀಡಬೇಕು ಎಂದು ಅವರು ತಿಳಿಸಿದರು.

Facebook Comments