ರಾಜಕಾಲುವೆಗಳ ಹೂಳೆತ್ತುವುದು ಬರೀ ಓಳು

Spread the love

ಬೆಂಗಳೂರು, ಮೇ 21- ಕೇವಲ ಎರಡು ಗಂಟೆಗಳ ಭಾರೀ ಮಳೆಗೆ ಇಡಿ ನಗರ ತತ್ತರಿಸಿ ಹೋಗಿದೆ. ಮಳೆ ಅನಾಹುತ ಹೆಚ್ಚಾಗಲು ರಾಜಕಾಲುವೆಗಳ ಹೂಳೆತ್ತದಿರುವುದೇ ಕಾರಣ ಎಂಬ ಆರೋಪದ ಹಿನ್ನಲೆಯಲ್ಲಿ ಸರ್ಕಾರ ರಾಜಕಾಲುವೆಗಳ ಹೂಳು ತೆಗೆಯುವಂತೆ ಬಿಬಿಎಂಪಿಗೆ ಸೂಚನೆ ನೀಡಿದೆ. ಆದರೆ, ಹೂಳೆತ್ತುವುದು ಎಂದರೆ ಅದು ಬರೀ ಓಳು ಎಂಬ ಸತ್ಯ ಗೊತ್ತಿದ್ದರೂ ಮತ್ತೆ ಹೂಳೆತ್ತುವ ಕಾಮಗಾರಿಗೆ ಅನುಮತಿ ನೀಡಲು ಮುಂದಾಗಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಹೈದ್ರಾಬಾದ್ ಮೂಲದ ಯೋಗಾ ಎಂಬ ಗುತ್ತಿಗೆದಾರರರು ನಗರದ ರಾಜಕಾಲುವೆಗಳ ಹೂಳೆತ್ತುವ ಕಾಮಗಾರಿ ಕೈಗೆತ್ತಿಕೊಂಡಿದ್ದರು. ರೊಬೋಟಿಕ್ ತಂತ್ರಜ್ಞಾನ ಬಳಸಿ ರಾಜಕಾಲುವೆಗಳಲ್ಲಿ ಎಸ್ಕಲೇಟರ್ ಬಳಸಿ ಸಾವಿರಾರು ಕ್ಯೂಬಿಕ್ ಮೀಟರ್ ಹೂಳು ತೆಗೆದಿದ್ದೇವೆ ಎಂಬ ಲೆಕ್ಕ ನೀಡಿ 36 ಕೋಟಿ ರೂ.ಗಳಂತೆ ಈಗಾಗಲೆ ಎರಡು ಬಾರಿ 72 ಕೋಟಿ ರೂ.ಗಳನ್ನು ಹಣ ಪಡೆದುಕೊಂಡಿದ್ದಾರೆ.

ಮಾತ್ರವಲ್ಲ, ಇದೀಗ ಮತ್ತೆ ಅದೇ ಸಂಸ್ಥೆಗೆ ನಗರದ ರಾಜಕಾಲುವೆಗಳ ಹೂಳು ತೆಗೆಯುವ ಕಾಮಗಾರಿಯ ಗುತ್ತಿಗೆ ನವೀಕರಣ ಮಾಡಲು ಸರ್ಕಾರ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.

ಆದರೆ ಆ ಸಂಸ್ಥೆಯವರು ರೋಬೋಟಿಕ್ ತಂತ್ರಜ್ಞಾನ ಬಳಸಿ ಈ ಹಿಂದೆ ತೆಗೆಯಲಾದ ಸಾವಿರಾರು ಕ್ಯೂಬಿಕ್ ಮೀಟರ್ ಹೂಳನ್ನು ಎಲ್ಲಿ ಹಾಕಿದ್ದಾರೆ ಎಂಬ ಲೆಕ್ಕವನ್ನೇ ನೀಡಿಲ್ಲ. ಒಂದು ವೇಳೆ ಅವರು ಅಷ್ಟು ಪ್ರಮಾಣದ ಹೂಳು ತೆಗೆದಿದ್ದರೆ ಮೊನ್ನೆ ಬಿದ್ದ ಭಾರೀ ಮಳೆ ಸಂದರ್ಭದಲ್ಲಿ ಕಂಡು ಕೇಳರಿಯದಂತಹ ಅನಾಹುತಗಳು ಏಕೆ ಸಂಭವಿಸುತ್ತಿದ್ದವು ಎನ್ನುವುದು ಯಕ್ಷಪ್ರಶ್ನೆಯಾಗಿದೆ.

ನಗರದಲ್ಲಿ ಸರಿಸುಮಾರು 800 ಕಿ.ಮೀ. ಸುತ್ತಳತೆಯ ರಾಜಕಾಲುವೆಗಳಿವೆ. ಇಂತಹ ಕಾಲುವೆಗಳಲ್ಲಿ ಹೂಳು ತೆಗೆಯಬೇಕಾದರೆ ಕನಿಷ್ಠ 10 ಸಾವಿರ ಕೋಟಿ ರೂ. ಖರ್ಚು ಮಾಡಬೇಕಾಗುತ್ತದೆ. ಇಷ್ಟು ಹಣ ನೀಡಿದರೂ ಮಳೆ ಸಂದರ್ಭದಲ್ಲಿ ಅನಾಹುತ ಸಂಭವಿಸುವುದಿಲ್ಲ ಎನ್ನುವುದಕ್ಕೆ ಯಾವುದೇ ಗ್ಯಾರಂಟಿಯಿಲ್ಲ.

ಏಕೆಂದರೆ, ಈ ಹಿಂದೆ 2004-05ರ ಸಂದರ್ಭದಲ್ಲಿ ಕೆ. ಜೈರಾಜ್ ಅವರು ಬಿಎಂಪಿ ಆಯುಕ್ತರಾಗಿದ್ದ ಸಂದರ್ಭದಲ್ಲಿ ನಗರದ ರಾಜಕಾಲುವೆಗಳಲ್ಲಿ ಸಾವಿರಾರು ಕ್ಯೂಬಿಕ್ ಮೀಟರ್ ಹೂಳು ತೆಗೆಯಲಾಗಿದೆ ಎಂದು ಸಾವಿರಾರು ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿತ್ತು.

ಆದರೆ, ತೆಗೆದ ಹೂಳನ್ನು ಎಲ್ಲಿ ಹಾಕಲಾಗಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಒಂದು ವೇಳೆ ಅಧಿಕಾರಿಗಳು ನೀಡಿದ ಮಾಹಿತಿಯಂತೆ ರಾಜಕಾಲುವೆಳಲ್ಲಿ ತೆಗೆದಿದ್ದ ಹೂಳನ್ನು ಒಂದು ಕಡೆ ಹಾಕಿದರೆ ಅದು ಮೂರು ನಂದಿಬೆಟ್ಟದಷ್ಟು ಎತ್ತರವಿರಬೇಕಿತ್ತು.

ಆದರೆ, ಅಧಿಕಾರಿಗಳು ಹೂಳು ಸುರಿದಿರುವ ಬಗ್ಗೆ ಯಾವುದೇ ಮಾಹಿತಿ ನೀಡಲಿಲ್ಲ. ಹೀಗಾಗಿ ಹೂಳು ಎತ್ತುವ ಕಾಮಗಾರಿಯಲ್ಲಿ ಕೋಟ್ಯಂತರ ರೂ.ಗಳ ಗುಳುಂ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಕೆಲವರು ಹೂಳು ಸುರಿದಿರುವ ಜಾಗದ ಬಗ್ಗೆ ಮಾಹಿತಿ ನೀಡುವಂತೆ ಮಾಡಿಕೊಂಡ ಮನವಿಗೆ ಯಾವುದೇ ಬೆಲೆ ಸಿಗಲಿಲ್ಲ. ಅಂತೀಮವಾಗಿ ರಾಜಕಾಲುವೆಗಳಿಂದ ತೆಗೆದ ಹೂಳು ಮಳೆ-ಗಾಳಿಯಿಂದ ಕೊಚ್ಚಿಕೊಂಡು ಹೋಗಿದೆ ಎಂದು ತಿಪ್ಪೆ ಸಾರಿಸುವ ಮೂಲಕ ಹಗರಣವನ್ನು ಮುಚ್ಚಿ ಹಾಕಲಾಗಿತ್ತು.

ಸುಮಾರು 15 ವರ್ಷಗಳ ಹಿಂದೆ ನಡೆದಿತ್ತು ಎನ್ನಲಾದ ಹೂಳಿನ ಗೋಳಿನ ಕಥೆ ಮತ್ತೆ ನಗರದಲ್ಲಿ ಮರುಕಳಿಸುವ ಸಾಧ್ಯತೆ ಇದೆ. ಹೈದ್ರಾಬಾದ್ ಮೂಲದ ಸಂಸ್ಥೆಯವರು ರೊಬೋಟಿಕ್ ತಂತ್ರಜ್ಞಾನದಿಂದ ಸಾವಿರಾರು ಕ್ಯೂಬಿಕ್ ಮೀಟರ್‍ನಷ್ಟು ಹೂಳು ತೆಗೆದಿದ್ದೇವೆ ಎಂದು ಕೋಟಿ ಕೋಟಿ ಹಣ ಪಡೆದಿದ್ದಾರೆ, ಇದೀಗ ಮತ್ತೆ ಹೂಳೆತ್ತುವ ಕಾಮಗಾರಿ ನಡೆಸಲು ಸಿದ್ಧತೆ ನಡೆಸಿದ್ದಾರೆ. ಇಂತಹ ಸಂದರ್ಭದಲ್ಲಾದರೂ ರಾಜಕಾಲುವೆಗಳಲ್ಲಿ ಹೂಳೆತ್ತುವ ಕಾಮಗಾರಿಯಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳುವ ಅವಶ್ಯಕತೆ ಇದೆ.

ಒಂದು ವೇಳೆ ಹೂಳೆತ್ತುವ ನಾಟಕವಾಡಿ ಮಳೆಗಾಲದಲ್ಲಿ ಮತ್ತೆ ಅನಾಹುತ ಸಂಭವಿಸಿದರೆ ಈಗಾಗಲೇ ಮಳೆ ಅನಾಹುತಗಳಿಂದ ರೋಸಿ ಹೋಗಿರುವ ಜನ ಬಿಬಿಎಂಪಿ ಅಧಿಕಾರಿಗಳನ್ನು ಕಂಡ ಕಂಡಲ್ಲಿ ಬಡಿಯಲಿದ್ದಾರೆ ಎನ್ನುವುದನ್ನು ಯಾರೂ ಮರೆಯಬಾರದು.

Facebook Comments