ಬೆಂಗಳೂರು,ಅ.3- ಬೀದಿನಾಯಿಗಳು ನಗರದಲ್ಲಿ ಮತ್ತೆ ವಿದ್ಯಾರ್ಥಿಯ ಮೇಲೆ ಎರಗಿದ್ದು, ಬಾಲಕನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ವರದಿಯಾಗಿದೆ. ಹೊರಮಾವಿನ ರಾಜಣ್ಣ ಲೇಔಟ್‍ನಲ್ಲಿ ಕೊಪ್ಪಳ ಮೂಲದ ಕೂಲಿ ಕಾರ್ಮಿಕ ಈರಣ್ಣ ಎಂಬುವರ ಪುತ್ರ ಯಶವಂತ (8) ಎಂಬಾತನ ಮೇಲೆ ಐದು ಬೀದಿನಾಯಿಗಳು ದಾಳಿ ನಡೆಸಿವೆ.
ಬಾಲಕನ ಕುತ್ತಿಗೆ ಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಗಾಯ ಸೇರಿ ಒಟ್ಟು ದೇಹದ 10 ಭಾಗಗಳಲ್ಲಿ ನಾಯಿಗಳು ಕಚ್ಚಿವೆ. ಭಾನುವಾರ ಶಾಲೆಯಲ್ಲಿ ಗಾಂಧಿ ಜಯಂತಿ ಕಾರ್ಯಕ್ರಮ ಮುಗಿಸಿ 11.30ರ ಸುಮಾರಿಗೆ ಮನೆಗೆ ವಾಪಸಾಗುವಾಗ ಬೀದಿನಾಯಿಗಳು ದಾಳಿ ಮಾಡಿವೆ.
ಚೀರಾಟ ಕೇಳಿದ ಸ್ಥಳೀಯರು ತಕ್ಷಣ ಧಾವಿಸಿ ನಾಯಿಗಳಿಂದ ಬಾಲಕನನ್ನು ರಕ್ಷಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕ ಆರೋಗ್ಯ ಚೇತರಿಕೆ ಕಂಡಿದೆ. ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಬಾಲಕನನ್ನು ದಾಖಲಿಸಲಾಗಿದೆ.
ಬಾಲಕನ ಎಡ ಕಿವಿಯ ಕೆಳಗಡೆ ಕುತ್ತಿಗೆ ಭಾಗದಲ್ಲಿ ಆಳವಾದ ಗಾಯವಾಗಿದ್ದು, ನಾಲ್ಕಕ್ಕೂ ಹೆಚ್ಚಿನ ಹೊಲಿಗೆ ಹಾಕಲಾಗಿದೆ.
ನಾಯಿ ಕಡಿತದಿಂದ ನರಗಳು ಹಾಗೂ ತಲೆಯೊಳಗೆ ಗಾಯವಾಗಿರುವ ಬಗ್ಗೆ ತಿಳಿಯಲು ಸ್ಕ್ಯಾನಿಂಗ್ ಮಾಡಿಸುವಂತೆ ವೈದ್ಯರು
ಸೂಚಿಸಿದ್ದಾರೆ. ಉಳಿದಂತೆ ತಲೆ, ಹೊಟ್ಟೆ, ತೊಡೆ, ಕಾಲು ಸೇರಿ ವಿವಿಧೆಡೆ ನಾಯಿ ಕಚ್ಚಿದ ಹಲ್ಲಿನ ಗುರುತುಗಳು ಆಳವಾಗಿ ಮೂಡಿವೆ.