ಬೆಂಗಳೂರು,ಸೆ.27- ರಾಜಕಾಲುವೆ ಒತ್ತುವರಿ ಸರ್ವೇ ವರದಿ ನಮ್ಮ ಕೈ ಸೇರಿದರೆ ಪ್ರಭಾವಿಗಳ ಒತ್ತುವರಿ ತೆರವು ಮಾಡಲು ನಾವು ಸಿದ್ದ ಎಂದು ಬಿಬಿಎಂಪಿ ಘೋಷಣೆ ಮಾಡಿದೆ. ಸಣ್ಣಪುಟ್ಟವರ ಒತ್ತುವರಿ ತೆರವು ಮಾಡಿ ಪ್ರಬಲರ ಒತ್ತುವರಿಯಿಂದ ಹಿಂದೆ ಸರಿಯಲಾಗುತ್ತಿದೆ ಎಂಬ ಆರೋಪ ಕುರಿತಂತೆ ಪ್ರತಿಕ್ರಿಯಿಸಿರುವ ಬಿಬಿಎಂಪಿ ವಿಶೇಷ ಆಯುಕ್ತ ರಾಮ್ ಪ್ರಸಾತ್ ಮನೋಹರ್ ಅವರು ಸರ್ವೆ ವರದಿ ನಮ್ಮ ಕೈ ಸೇರಿದರೆ ನಾವು ಎಷ್ಟೆ ಪ್ರಭಾವಿ ವ್ಯಕ್ತಿಗಳು ಮಾಡಿಕೊಂಡಿರುವ ಒತ್ತುವರಿ ತೆರವು ಮಾಡಲು ಸಿದ್ದ ಎಂದು ಘೋಷಣೆ ಮಾಡಿದ್ದಾರೆ.
ಅವರ ಈ ಹೇಳಿಕೆ ಗಮನಿಸಿದರೆ, 2019ರಲ್ಲಿ ತೆರವು ಕಾರ್ಯಚರಣೆಯಿಂದ ಬಚಾವಾಗಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಒಡೆತನದ ಎಸ್.ಎಸ್.ಆಸ್ಪತ್ರೆಗಳ ಕಟ್ಟಡ ಒತ್ತುವರಿ ತೆರವು ಕಾರ್ಯಚರಣೆ 2022ರಲ್ಲಿ ಆರಂಭವಾಗುವ ಸಾಧ್ಯತೆಗಳಿವೆ.
2019ರಲ್ಲಿ ದರ್ಶನ್ ಹಾಗೂ ಶಿವಶಂಕರಪ್ಪ ಒಡೆತನದ ಕಟ್ಟಡಗಳ ತೆರವಿಗೆ ತಡೆಯಾಜ್ಞೆ ನೀಡಿದ್ದ ನ್ಯಾಯಾಲಯ 2021ರ ಸರ್ವೆ ವರದಿ ಆಧರಿಸಿ ತೆರವು ಕಾರ್ಯಚರಣೆ ಆರಂಭಿಸಿ ಎಂದು ಸೂಚನೆ ನೀಡಿತ್ತು. ನ್ಯಾಯಾಲಯದ ಆದೇಶದಂತೆ ಕಂದಾಯ ಇಲಾಖೆ ಸರ್ವೆ ನಡೆಸಿದೆ ಆದರೆ, ಸರ್ವೆ ವರದಿ ಮಾತ್ರ ಇನ್ನೂ ಬಿಬಿಎಂಪಿ ಕೈ ಸೇರಿಲ್ಲ.
ವರದಿ ನೀಡಲು ಕೆಲವು ಕಾಣದ ಕೈಗಳು ತಡೆಯೊಡ್ಡುತ್ತಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಒಂದು ವೇಳೆ ವರದಿ ಕೈ ಸೇರಿದರೆ ಬಿಬಿಎಂಪಿ ದೊಡ್ಡವರ ಬುಡಕ್ಕೂ ಕೈ ಹಾಕುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ. ಕೈ ಕಟ್ಟಿ ಹಾಕಲಾಗಿದೆ: ಕಂದಾಯ ಇಲಾಖೆಯ ಅೀನದಲ್ಲಿರುವ ಸರ್ವೆ ಇಲಾಖೆ ತಹಶೀಲ್ದಾರ್ ನೇತೃತ್ವದಲ್ಲಿ ಈಗಾಗಲೇ ಸರ್ವೆ ಕಾರ್ಯ ಮುಗಿಸಿದೆ.
ಹೀಗಾಗಿ ಸರ್ವೆ ವರದಿ ನೀಡಿದರೆ ನಾವು ಡೆಮಾಲಿಷನ್ ಮಾಡಲು ಸಿದ್ದರಿದ್ದೇವೆ ಎಂದು ಬಿಬಿಎಂಪಿ ಮಾಡಿಕೊಂಡಿರುವ ಮನವಿಗೆ ಕಂದಾಯ ಇಲಾಖೆ ಕ್ಯಾರೆ ಎನ್ನುತ್ತಿಲ್ಲ. ತಹಸಿಲ್ದಾರ್ ಅವರು ಸರ್ವೆ ಮುಗಿಸಿ ವರದಿ ನೀಡದೆ ಕಾಲಹರಣ ಮಾಡುತ್ತಿರುವುದಕ್ಕೆ ಅವರ ಕೈ ಕಟ್ಟಿ ಹಾಕಲಾಗಿದೆ ಎಂದು ಆರೋಪಗಳು ಕೇಳಿ ಬರುತ್ತಿದೆ.
ತೆಪ್ಪಗಾದ ಬಿಬಿಎಂಪಿ: ಇತ್ತಿಚೆಗೆ ಬಿದ್ದ ರಣ ಮಳೆಯಿಂದ ನಗರದಲ್ಲಿ ಉಂಟಾದ ಭಾರಿ ಅನಾಹುತಗಳ ನಂತರ ನಿದ್ದೆಯಿಂದ ಮೈ ಕೊಡವಿ ಎದ್ದು ಕುಳಿತಿದ್ದ ಬಿಬಿಎಂಪಿ ಸಿಬ್ಬಂದಿಗಳು ನಾಲ್ಕೈದು ದಿನಗಳ ಕಾಲ ರಾಜಕಾಲುವೆ ಒತ್ತುವರಿ ಮಾಡುವ ಸದ್ದು ಮಾಡಿ ಈಗ ತಣ್ಣಗಾಗಿರುವುದು ಮತ್ತಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.