ಅರ್ಹತೆಯಿಲ್ಲದ ಸಂಸ್ಥೆಗೆ ಟೆಂಡರ್ ನೀಡಿದ ಬಿಬಿಎಂಪಿ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ರಮೇಶ್ ಆಗ್ರಹ

Social Share

ಬೆಂಗಳೂರು,ಆ.11- ಟೆಂಡರ್ ಪ್ರಕ್ರಿಯೆಗಳಲ್ಲಿ ಪಾಲ್ಗೊಳ್ಳಲು ಉದ್ದೇಶಪೂರ್ವಕವಾಗಿ ಇನ್ರಾಕಾನ್ ಸ್ಟ್ರಕ್ಚರ್ ಸಂಸ್ಥೆಗೆ ಸಹಕರಿಸುತ್ತಿರುವ ಕೆಲವು ಭ್ರಷ್ಟ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ಅವರು ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಹಾಗೂ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ದೂರು ನೀಡಿದ್ದಾರೆ.

ರಸ್ತೆ ಮೂಲಭೂತ ಸೌಕರ್ಯಗಳ ಇಲಾಖೆಯಲ್ಲಿ ಪ್ರಮುಖ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರ ಅಣತಿಯಂತೆ ಇಂತಹ ಅಕ್ರಮ ನಡೆಯುತ್ತಿದ್ದು, ಅಕ್ರಮದಲ್ಲಿ ಭಾಗಿಯಾಗಿರುವ ಶಿವಾಜಿನಗರ ವಿಭಾಗದ ಕಾರ್ಯಪಾಲಕ ಅಭಿಯಂತರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಸದರಿ ಸಂಸ್ಥೆಗೆ ನಕಲಿ ವರ್ಕ್‍ಡನ್ ಪತ್ರ ನೀಡಿರುವ ಪುಲಿಕೇಶಿನಗರ ವಿಭಾಗದ ಕಾರ್ಯಪಾಲಕ ಅಭಿಯಂತರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

ಬಿಬಿಎಂಪಿಯ ಕೆಲವು ಅಧಿಕಾರಿಗಳು ಇನ್ರಾ ಕಾನ್ ಸಂಸ್ಥೆಯ ಮಾಲೀಕ ಆನಂದ್ ಪ್ರಮೋದ್ ಅವರೊಂದಿಗೆ ಶಾಮಿಲ್ಲಾಗಿ ಇತರ ಗುತ್ತಿಗೆದಾರರ ದಾಖಲಾತಿಗಳು ಸರಿಯಿದ್ದರೂ ಅವುಗಳನ್ನು ತಿರಸ್ಕರಿಸಿ ಆನಂದ್ ಅವರಿಗೆ ಅನುಕೂಲ ಮಾಡಿಕೊಟ್ಟಿರುವುದರ ದಾಖಲೆಗಳನ್ನು ಆಡಳಿತಾಧಿಕಾರಿಗಳು ಹಾಗೂ ಆಯುಕ್ತರಿಗೆ ರಮೇಶ್ ನೀಡಿದ್ದಾರೆ.

ಇತ್ತಿಚೆಗೆ ಶಿವಾಜಿನಗರ ವಿಭಾಗದಲ್ಲಿ ತಲಾ 10 ಕೋಟಿ ರೂ.ಗಳ ಎರಡು ಪ್ಯಾಕೇಜ್‍ಗಳನ್ನು ಮತ್ತು ರಸ್ತೆ ಮೂಲಭೂತ ಸೌಕರ್ಯಗಳ ಇಲಾಖೆಯ ಪೂರ್ವ ವಿಭಾಗದಲ್ಲಿ ತಲಾ 10 ಕೋಟಿ ರೂ.ಗಳ ಮೂರು ಪ್ಯಾಕೇಜ್‍ಗಳಿಗೆ ಟೆಂಡರ್ ಕರೆಯಲಾಗಿತ್ತು.

ಈ ಟೆಂಡರ್ ಪ್ರಕ್ರಿಯೆಯಲ್ಲಿ ಮೂವರು ಗುತ್ತಿಗೆದಾರರು ಭಾಗವಹಿಸಿದ್ದರು. ಅದರಲ್ಲಿ ಇಬ್ಬರು ಆರ್ಹ ಗುತ್ತಿಗೆದಾರರನ್ನು ತಿರಸ್ಕರಿಸಿ ನಿಯಮಬಾಹಿರವಾಗಿ ಇನ್ರಾಕಾನ್‍ಗೆ ನೀಡಲಾಗಿದೆ.

ಟೆಂಡರ್ ಪಡೆಯಲು ಆರ್ಹರಲ್ಲದ ಆನಂದ್ ಅವರು ಕೆಲ ಭ್ರಷ್ಟ ಬಿಬಿಎಂಪಿ ಅಧಿಕಾರಿಗಳಿಂದ ನಕಲಿ ವರ್ಕ್‍ಡನ್ ಪತ್ರ ಲಗತ್ತಿಸಿರುವುದು ಸಾಬೀತಾಗಿರುವ ಹಿನ್ನಲೆಯಲ್ಲಿ ಇನ್ರಾಕಾನ್ ಸಂಸ್ಥೆಗೆ ನೀಡಿರುವ ಗುತ್ತಿಗೆ ರದ್ದುಪಡಿಸಬೇಕು ಹಾಗೂ ಈ ಅಕ್ರಮದಲ್ಲಿ ಭಾಗಿಯಾಗಿರುವ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Articles You Might Like

Share This Article