ಬೆಂಗಳೂರು,ಆ.25- ಕಳೆದ 2 ವರ್ಷಗಳಿಂದ ನಡೆಯದ ಬಿಬಿಎಂಪಿ ಚುನಾವಣೆ ಭವಿಷ್ಯವನ್ನು ಸುಪ್ರೀಂ ಕೋರ್ಟ್ ನಾಳೆ ನಿರ್ಧರಿಸಲಿರುವ ಬೆನ್ನಲ್ಲೇ ಚುನಾವಣಾ ಆಯೋಗ ಇಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಿದೆ.
198 ವಾರ್ಡ್‍ಗಳಾಗಿದ್ದ ಬಿಬಿಎಂಪಿಯನ್ನು 243 ವಾರ್ಡ್‍ಗಳನ್ನಾಗಿ ಮರು ವಿಂಗಡಣೆ ಮಾಡಲಾಗಿದ್ದು, ಮತದಾರರ ಪಟ್ಟಿ ಸಿದ್ದತೆಯಲ್ಲಿ ತೊಡಗಿಸಿಕೊಂಡಿರುವ ಆಯೋಗ ಇಂದು ಮಧ್ಯಾಹ್ನ ಮತದಾರರ ಕರಡು ಪ್ರತಿ ಪ್ರಕಟಿಸಲಿದೆ. ಒಂದು ಅಂದಾಜಿನ ಪ್ರಕಾರ 90 ಲಕ್ಷಕ್ಕೂ ಹೆಚ್ಚು ಮತದಾರರ ಕರಡು ಪಟ್ಟಿಯನ್ನು ಇಂದು ಆಯೋಗ ಪ್ರಕಟಿಸುವ ಸಾಧ್ಯತೆಗಳಿವೆ.
ಇಂದು ಪ್ರಕಟಗೊಳ್ಳುವ ಮತದಾರರ ಕರಡು ಪ್ರತಿಯನ್ನು ನಾಳೆ ಸುಪ್ರೀಂ ಕೋರ್ಟ್‍ಗೆ ಆಯೋಗ ಸಲ್ಲಿಸುವ ಸಾಧ್ಯತೆಗಳಿವೆ.
ಕರಡು ಮತದಾರರ ಪಟ್ಟಿ ಪ್ರಕಟ ಹಾಗೂ ಬಿಬಿಎಂಪಿ ಚುನಾವಣೆ ಕುರಿತಂತೆ ನ್ಯಾಯಾಲಯ ನೀಡುವ ತೀರ್ಪಿನ ಆಧಾರದ ಮೇಲೆ ಬಿಬಿಎಂಪಿ ಎಲೆಕ್ಷನ್ ಭವಿಷ್ಯ ನಿರ್ಧಾರವಾಗಲಿದೆ.
ಇಂದು ಕರಡು ಮತದಾರರ ಪಟ್ಟಿ ಪ್ರಕಟ ಮಾಡುವುದರ ಜೊತೆಗೆ ಹೊಸ ಮತದಾರರ ಸೇರ್ಪಡೆ ಹಾಗೂ ಗುರುತಿನ ಚೀಟಿ ಬದಲಾವಣೆ ಕಾರ್ಯವನ್ನು ಆಯೋಗ ಮುಂದುವರೆಸಿ ಬರುವ ಸೆ.22 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದು ಆಯೋಗ ಈಗಾಗಲೇ ಸಿದ್ದಪಡಿಸಿದೆ.
ಚುನಾವಣಾ ಆಯೋಗದ ತೀರ್ಮಾನದಂತೆ ಸೆ.22 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಗೊಂಡರೆ ಬರುವ ಆಕ್ಟೋಬರ್‍ಗೆ ಬಿಬಿಎಂಪಿಗೆ ಚುನಾವಣೆ ನಡೆಯುವ ಸಾಧ್ಯತೆಗಳಿವೆ. ಒಂದು ವೇಳೆ ನಾಳೆ ನಡೆಯಲಿರುವ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ವಾರ್ಡ್ ಮರುವಿಂಗಡಣೆ ಹಾಗೂ ಮೀಸಲಾತಿ ಲೋಪ ದೋಷಗಳನ್ನು ಸರಿಪಡಿಸಲು ಸರ್ಕಾರಕ್ಕೆ ಕಾಲವಕಾಶ ನೀಡಿದರೆ ಬಿಬಿಎಂಪಿ ಚುನಾವಣೆ ಮತ್ತೆ ಮುಂದೂಡಿಕೆಯಾಗಲಿದೆ.
ಒಂದು ವೇಳೆ ಕೆಲವೇ ದಿನಗಳಲ್ಲಿ ಲೋಪ ದೋಷ ಸರಿಪಡಿಸಿ ಆಯೋಗದ ಸೂಚನೆಯಂತೆ ಚುನಾವಣೆ ನಡೆಸುವಂತೆ ನ್ಯಾಯಾಲಯ ಸೂಚಿಸಿದರೆ ಆಕ್ಟೋಬರ್ ವೇಳೆಗೆ ಚುನಾವಣೆ ನಡೆಯಲಿದೆ.
ಇಂದು ಮತದಾರರ ಕರಡು ಪ್ರತಿ ಪ್ರಕಟವಾಗುತ್ತಿದ್ದು, ನಾಳೆಯೇ ಬಿಬಿಎಂಪಿ ಚುನಾವಣೆ ವಿಚಾರ ಸುಪ್ರೀಂ ಕೋರ್ಟ್‍ನಲ್ಲಿ ಬರುವುದರಿಂದ 243 ವಾರ್ಡ್‍ಗಳಲ್ಲಿರುವ ಅಭ್ಯರ್ಥಿ ಆಕಾಂಕ್ಷಿಗಳ ಎದೆಬಡಿತ ಜೋರಾಗಲಿದೆ.