ಬೆಂಗಳೂರು,ಫೆ.5- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎರಡು ಬಾರಿ ಬೆಂಗಳೂರು ಪ್ರದಕ್ಷಿಣೆ ಹಾಕಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆರೋಪಿಸಿದರು. ಬಿಬಿಎಂಪಿ ವಾರ್ಡ್‍ಗಳ ಮರುವಿಂಗಡಣೆಯಲ್ಲಿ ಆಡಳಿತಾರೂಢ ಬಿಜೆಪಿಯ ಹಸ್ತಕ್ಷೇಪ ಮತ್ತು ಅಕಾರ ದುರುಪಯೋಗ ವಿರೋಧಿಸಿ ಬೆಂಗಳೂರು ದಕ್ಷಿಣ ಮತ್ತು ಉತ್ತರ ಜಿಲ್ಲಾ ಕಾಂಗ್ರೆಸ್ ವತಿಯಿಂದ ಬಿಬಿಎಂಪಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೆಂಗಳೂರಿನಲ್ಲಿ ಎಂಟು ಜನ ಸಚಿವರಿದ್ದಾರೆ.
ಮುಖ್ಯಮಂತ್ರಿ ಬೊಮ್ಮಾಯಿ ಅವರು ಉಸ್ತುವಾರಿಯಾಗಿದ್ದಾರೆ. ಆದರೆ ಬೆಂಗಳೂರು ಅಭಿವೃದ್ಧಿಯ ಯಾವುದೇ ಕೆಲಸಗಳಾಗಿಲ್ಲ. ಈವರೆಗೆ ರಸ್ತೆಗುಂಡಿಗಳನ್ನು ಮುಚ್ಚಲು ಸಾಧ್ಯವಾಗಿಲ್ಲ. ರಸ್ತೆಗುಂಡಿಗಳಿಂದ ಹಲವು ಅಪಘಾತಗಳು ಸಂಭವಿಸಿ ಸಾವುನೋವುಗಳನ್ನು ಅನುಭವಿಸ ಬೇಕಾಯಿತು. ಮುಖ್ಯಮಂತ್ರಿಗಳ ಕಾಟಾಚಾರದ ನಗರ ಪರಿಶೀಲನೆಯಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದರು.
ಕೋವಿಡ್ ಕಾರಣದಿಂದ ಕಾರ್ಯಕರ್ತರನ್ನು ಬರಬೇಡಿ ಎಂದು ಹೇಳಿದೆವು. ಸುದ್ದಿಗೋಷ್ಠಿ ನಡೆಸಿ ಸರ್ಕಾರದ ಗಮನಸೆಳೆಯುವ ಪ್ರಯತ್ನ ಮಾಡಿದೆವು. ಜಿಡ್ಡುಗಟ್ಟಿದ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ನಾವು ಅನಿವಾರ್ಯವಾಗಿ ಪ್ರತಿಭಟನೆ ನಡೆಸಬೇಕಾಯಿತು ಎಂದು ಹೇಳಿದರು.
ಒಂದೂವರೆ ವರ್ಷವಾದರೂ ಬಿಬಿಎಂಪಿಗೆ ಚುನಾವಣೆ ನಡೆಸಲು ಸಾಧ್ಯವಾಗಿಲ್ಲ. ಮೊದಲು ಹೊಸ ಪ್ರದೇಶಗಳನ್ನು ಸೇರಿಸಿ 243 ವಾರ್ಡ್ ಗಳನ್ನು ಮಾಡುವುದಾಗಿ ಹೇಳಿದ್ದ ಸರ್ಕಾರ ಈಗ ಅದನ್ನು ಕೈಬಿಟ್ಟು 198 ವಾರ್ಡ್‍ಗಳಲ್ಲಿ ಮರು ವಿಂಗಡಣೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಈ ರೀತಿ ಮಾಡುವಾಗ 28 ವಿಧಾನಸಭಾ ಕ್ಷೇತ್ರದ ಅಕಾರಿಗಳನ್ನು ಕರೆದು ಮಾತನಾಡ ಬೇಕಿತ್ತು. ಆದರೆ ಬಿಜೆಪಿ ಶಾಸಕರು ಹಾಗೂ ಸಂಸದರ ಕಚೇರಿಯಲ್ಲಿ ಮರುವಿಂಗಡಣೆ ಕೆಲಸ ನಡೆಯುತ್ತಿದೆ. ಮರು ವಿಂಗಡಣೆ ಸಮಿತಿಯ ಕೆಲಸ ಏನು ಮುಖ್ಯ ಆಯುಕ್ತರಾದ ಗೌರವ ಗುಪ್ತ ಅವರು ಒತ್ತಡಕ್ಕೆ ಸಿಲುಕಿ ತಮ್ಮ ಅಧಿಕಾರವನ್ನು ಚಲಾಯಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದಾರೆ ಎಂದು ಹೇಳಿದರು.
ಇನ್ನೊಂದುವರೆ ವರ್ಷದಲ್ಲಿ ನಮ್ಮ ಸರ್ಕಾರ ಬರಲಿದೆ. ಹಾಗಾಗಿ ನಿಮ್ಮ ಕರ್ತವ್ಯವನ್ನು ನೀವು ನಿರ್ಭೀತಿಯಿಂದ ಮಾಡಿ ಎಂದು ಹೇಳಿದರು. ಪರಿಷತ್‍ನ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಬಿಬಿಎಂಪಿ ವಾರ್ಡ್ ವಿಂಗಡಣೆ ಆಯೋಗ ಸಂಪೂರ್ಣ ನಿಷ್ಕ್ರಿಯವಾಗಿದೆ. ಆರ್‍ಎಸ್‍ಎಸ್ ಕಚೇರಿಯಲ್ಲಿ ಕೂತು ವಾರ್ಡ್ ವಿಂಗಡಣೆ ಮಾಡಲಾಗುತ್ತಿದೆ. ಅವರ ಮಾತು ಕೇಳಿಕೊಂಡು ಕಾಂಗ್ರೆಸ್ ಪ್ರಾಬಲ್ಯವಿರುವ ವಾರ್ಡ್‍ಗಳನ್ನು ವಿಭಜಿಸಿದ್ದಾರೆ. ಈ ಬಗ್ಗೆ ಮರುಪರಿಶೀಲನೆ ಮಾಡಬೇಕೆಂದು ಆಗ್ರಹಿಸಿದರು.
