ಆ.15ರಿಂದ ಕಸ ವಿಲೇವಾರಿ ಮಾಡಲ್ಲ : ಪೌರಕಾರ್ಮಿಕರ ಎಚ್ಚರಿಕೆ

ಬೆಂಗಳೂರು, ಆ.12- ಖಾಯಂ ಉದ್ಯೋಗ ಸೇರಿ ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿರುವ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ “ಸ್ವಾತಂತ್ರ್ಯ ದಿನಾಚರಣೆ” ಬಹಿಷ್ಕರಿಸಿ ಸ್ವಚ್ಛತಾ ಕಾರ್ಯವನ್ನು ಸ್ಥಗಿತಗೊಳಿಸಲಾಗುವುದು ಎಂದು ಬಿಬಿಎಂಪಿಗೆ ಪೌರಕಾರ್ಮಿಕರು ಎಚ್ಚರಿಕೆ ನೀಡಿದ್ದಾರೆ.  ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾಸಂಘದ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಸಿದ ಬಿಬಿಎಂಪಿಯ ಪೌರಕಾರ್ಮಿಕರು, ಹಲವು ವರ್ಷಗಳಿಂದ ದುಡಿಯುತ್ತಿರುವ 18,600 ಮಂದಿ ಪೌರಕಾರ್ಮಿಕರನ್ನು ಖಾಯಂಗೊಳಿಸಬೇಕು ಇಲ್ಲದಿದ್ದರೆ, ಆ.15ರಿಂದ ಸ್ವಾತಂತ್ರ್ಯ ದಿನಾಚರಣೆ ಬಹಿಷ್ಕರಿಸಿ ಕಸ ವಿಲೇವಾರಿ ಕಾರ್ಯ ನಿಲ್ಲಿಸಲಾಗುವುದು ಎಂದು ಹೇಳಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಸಂಘದ ಬೆಂಗಳೂರು ನಗರ ಅಧ್ಯಕ್ಷ ಪಿ.ಎನ್.ಮುತ್ಯಾಲಪ್ಪ, ಪಾಲಿಕೆಯು ಈ ಹಿಂದೆ ಕೇವಲ 4 ಸಾವಿರ ಪೌರಕಾರ್ಮಿಕರನ್ನು ಖಾಯಂಗೊಳಿಸಲು ಅಧಿಸೂಚನೆ ಹೊರಡಿಸಿದೆ.ಅದೇ ರೀತಿ, 18,600 ಮಂದಿಯನ್ನು ಖಾಯಂಗೊಳಿಸಲು ಕ್ರಮ ಕೈಗೊಳ್ಳಬೇಕು.ಇದು ಆಗದಿದ್ದರೆ, ಸಮಾನ ಕೆಲಸಕ್ಕೆ ಸಮಾನ ವೇತನ ಆದರೂ ನೀಡಬೇಕು ಎಂದು ಒತ್ತಾಯ ಮಾಡಿದರು.

ಅದೇ ರೀತಿ, ನೇರ ವೇತನದಡಿಯಲ್ಲಿ ಮೇಸ್ತ್ರಿಗಳಿಗೆ 5 ಸಾವಿರ ರೂ.ಪ್ರೋತ್ಸಾಹ ಧನ ನೀಡುವುದಾಗಿ ಈ ಹಿಂದೆ ತಿಳಿಸಿದ್ದರು.ಆದರೆ, ಕೇಲವ 2 ಸಾವಿರ ರೂ. ಮಾತ್ರ ನೀಡಲಾಗುತ್ತಿದೆ.ಈ ಮೊತ್ತವನ್ನು ಹೆಚ್ಚಿಸಬೇಕು. ಇದರೊಂದಿಗೆ ಸ್ಯಾನಿಟರಿ ದಫೇದಾರ್ ಅವರಿಗೆ ಗುರುತಿನ ಚೀಟಿಯನ್ನು ನೀಡಬೇಕು ಎಂದು ಆಗ್ರಹಿಸಿದರು. ಸಂಘದ ನಗರ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ಕೋವಿಡ್ ಸಂಕಷ್ಟ ಸಮಯದಲ್ಲೂ ಪೌರಕಾರ್ಮಿಕರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ದುಡಿದಿದ್ದಾರೆ.ಆದರೆ, ಬಿಬಿಎಂಪಿ ನಮ್ಮ ಹಿತ ಕಾಪಡುವಲ್ಲಿ ಸೋತಿದೆ.ಇಲ್ಲಿಯವರೆಗೂ ಮೃತ ಪೌರಕಾರ್ಮಿಕರಿಗೆ ಕೋವಿಡ್ ಪರಿಹಾರವೂ ಕೈಸೇರಿಲ್ಲ

ಹೀಗೆ, ಹಲವು ವರ್ಷಗಳಿಂದ ಪೌರಕಾರ್ಮಿಕರ ಸಮಸ್ಯೆಗಳು ಬಗೆಹರಿದಿಲ್ಲ. ಈ ಸಂಬಂಧ ಆಯುಕ್ತರಿಗೆ ಮನವಿ ಮಾಡಿದರೂ, ಬಾಯಿ ಮಾತಿನ ಭರವಸೆಗಳು ಸಿಕ್ಕಿವೆ.ಹೀಗಾಗಿ, ಹೋರಾಟ ನಡೆಸಲು ನಾವು ಮುಂದಾಗಿದ್ದೇವೆ ಎಂದು ತಿಳಿಸಿದರು. ಪ್ರಧಾನ ಸಂಘಟನಾ ಕಾರ್ಯದರ್ಶಿ ಎಂ.ನರಸಿಂಹ ನಾಯ್ಡು ಮಾತನಾಡಿ, ಬಿಬಿಎಂಪಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಟೋ ಚಾಲಕರು, ಲೋಡರ್ಸ್, ಕ್ಲೀನರ‍್ಸ್ ಸಹಾಯಕರಿಗೆ ವಸತಿ ಸೌಲಭ್ಯ ಕಲ್ಪಿಸಬೇಕು.ಹಾಗೇ, ಕಾರ್ಮಿಕರಿಗೆ ಪೌಷ್ಠಿಕ ಆಹಾರ ಒದಗಿಸಬೇಕು ಎಂದು ಆಗ್ರಹಿಸಿದರು.

ಸಭೆಯಲ್ಲಿ ಸಂಘದ ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ, ಪ್ರಧಾನ ಸಂಘಟನಾ ಕಾರ್ಯದರ್ಶಿ ಎಂ.ನರಸಿಂಹ ನಾಯ್ದು, ಕೋರಮಂಗಲ ವೆಂಕಟಸ್ವಾಮಿ ಸೇರಿದಂತೆ ಪ್ರಮುಖರಿದ್ದರು.