ತಾಂತ್ರಿಕ ಸಲಹಾ ಸಮಿತಿ ಅನುಮತಿ ನೀಡಿದರೆ ಶಾಲೆಗಳ ಪುನರಾರಂಭ : ಸಚಿವ ಬಿ.ಸಿ.ನಾಗೇಶ್

Social Share

ಬೆಂಗಳೂರು, ಜ.20- ತಾಂತ್ರಿಕ ಸಲಹಾ ಸಮಿತಿ ಶಾಲೆಗಳನ್ನು ತೆರೆಯಲು ಅನುಮತಿ ನೀಡಿದರೆ ಮುಚ್ಚಿರುವ ಶಾಲೆಗಳನ್ನು ಪುನರಾರಂಭ ಮಾಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಆವರು, ತಾಂತ್ರಿಕ ಸಲಹಾ ಸಮಿತಿ ಸದಸ್ಯರ ಶಿಫಾರಸಿನಂತೆ ಕೆಲವು ನಗರಗಳಲ್ಲಿ ಶಾಲೆಗಳನ್ನು ಬಂದ್ ಮಾಡಲಾಗಿತ್ತು. ನಾಳೆ ನಡೆಯುವ ಸಭೆಯಲ್ಲಿ ಯಾವ ಸಲಹೆ ನೀಡುತ್ತಾರೋ ಅದರ ಮೇಲೆ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಳಿ ಪ್ರತಿಯೊಂದು ಮಾಹಿತಿ ಇದೆ. ಶಿಕ್ಷಣ ಇಲಾಖೆ ಅಕಾರಿಗಳು ಈಗಾಗಲೇ ಅವರಿಗೆ ಸ್ಥಿತಿಗತಿ ಕುರಿತಂತೆ ಮಾಹಿತಿ ನೀಡಿದ್ದಾರೆ. ಅಂತಿಮವಾಗಿ ನಿರ್ಧಾರವನ್ನು ಅವರೇ ತೆಗೆದುಕೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದರು.
ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಹೇಳುವುದಾದರೆ ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಶಾಲೆಗಳನ್ನು ನಡೆಸುವುದೇ ಸೂಕ್ತವಾದ ಅಭಿಪ್ರಾಯ. ಮನೆಯ ಪಾಠಕ್ಕಿಂತ ಶಾಲೆಯಲ್ಲಿ ಕಲಿತರೆ ಹೆಚ್ಚು ಪರಿಣಾಮಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಬೆಂಗಳೂರು ಸೇರಿದಂತೆ ಮೈಸೂರು, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ದಕ್ಷಿಣ ಕನ್ನಡ ಸೇರಿದಂತೆ ಪ್ರಮುಖ ನಗರಗಳಲ್ಲೂ ಶಾಲೆಗಳನ್ನು ತೆರೆಯಲು ಸರ್ಕಾರ ಸಿದ್ಧವಿದೆ. ಮಕ್ಕಳಿಗೆ ತೊಂದರೆ ಕೊಟ್ಟು ನಾವು ಶಾಲೆ ಪುನರಾರಂಭಿಸುವ ಗುರಿ ಹಾಕಿಕೊಂಡಿಲ್ಲ ಎಂದು ಪುನರುಚ್ಚರಿಸಿದರು.ಶಾಲಾ-ಕಾಲೇಜುಗಳನ್ನು ತೆರೆಯಲು ನಮಗೆ ಯಾರಿಂದಲೂ ಒತ್ತಡವಿಲ್ಲ.
ಮಕ್ಕಳ ಆರೋಗ್ಯ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ನಾವೇ ಬಂದ್ ಮಾಡಿದ್ದೆವು. ಇದರಲ್ಲಿ ಬಾಹ್ಯ ಒತ್ತಡ ಇಲ್ಲ ಎಂದು ಸ್ಪಷ್ಟಪಡಿಸಿದರು.ಶಾಲೆಗಳಲ್ಲಿ ಕೋವಿಡ್ ಸೋಂಕು ಕಂಡುಬಂದಿದ್ದರಿಂದ ಮುಚ್ಚಲಾಗಿತ್ತು. ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಶಾಲೆಗಳನ್ನು ತೆರೆಯಲು ಸೂಚಿಸಿದರೆ ನಮ್ಮ ಅಭ್ಯಂತರವಿಲ್ಲ. ಅಂತಿಮವಾಗಿ ಮುಖ್ಯಮಂತ್ರಿಗಳೇ ತೀರ್ಮಾನಿಸುತ್ತಾರೆ ಎಂದು ತಿಳಿಸಿದರು.
ಪ್ರಸ್ತುತ 1 ರಿಂದ 5 ವರ್ಷದೊಳಗಿನ 2250 ಮಕ್ಕಳು, ಅದೇ ರೀತಿ 5 ರಿಂದ 10ರೊಳಗಿನ 6762 ವಿದ್ಯಾರ್ಥಿಗಳು ಪದವಿ ಪೂರ್ವ ಹಂತದ 166 ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಸೋಂಕು ಕಾಣಿಸಿಕೊಂಡಿದೆ ಎಂದು ಮಾಹಿತಿ ನೀಡಿದರು.
ಫೆಬ್ರವರಿಗೆ ಮುಕ್ತಾಯ: ಪ್ರಸ್ತುತ ನಡೆಯುತ್ತಿರುವ ಶಿಕ್ಷಕರ ವರ್ಗಾವಣೆಯ ಕೌನ್ಸಿಲಿಂಗ್ ಪ್ರಕ್ರಿಯೆ ಯಶಸ್ವಿಯಾಗಿ ನಡೆದಿದೆ. ನನಗೆ ಅನೇಕ ಶಿಕ್ಷಕರೇ ದೂರವಾಣಿ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲ ದಿನಗಳ ಹಿಂದೆ ತಾಂತ್ರಿಕ ಕಾರಣಗಳಿಂದ ತುಸು ಮಟ್ಟಿಗೆ ಅಡಚಣೆಯಾಗಿತ್ತು. ಮೂರು ದಿನಗಳ ಹಿಂದೆ ಸರ್ವರ್ ತೊಂದರೆಯಿಂದ ಮುಂದೂಡಲಾಗಿತ್ತು. ಈಗ ಎಲ್ಲ ಪ್ರಕ್ರಿಯೆಗಳೂ ಸರಿದಾರಿಗೆ ಬಂದಿರುವುದರಿಂದ ಯಾವುದೇ ಸಮಸ್ಯೆ ಇಲ್ಲ. ಬಹುತೇಕ ಫೆಬ್ರವರಿ ತಿಂಗಳಿಗೆ ಕೌನ್ಸಿಲಿಂಗ್ ಪ್ರಕ್ರಿಯೆ ಮುಕ್ತಾಯವಾಗಲಿದೆ ಎಂದು ಹೇಳಿದರು.
ಹಿಂದೆಂದಿಗಿಂತಲೂ ಶಿಕ್ಷಕರು ಬಯಸಿದಂತೆ ಕೌನ್ಸಿಲಿಂಗ್ ಪ್ರಕ್ರಿಯೆ ನಡೆಸಲಾಗಿದೆ. ಸಣ್ಣಪುಟ್ಟ ಗೊಂದಲಗಳು ಇದ್ದೇ ಇರುತ್ತವೆ. ಅವೆಲ್ಲವನ್ನೂ ಮೆಟ್ಟಿಯೇ ನಾವು ಕೌನ್ಸಿಲಿಂಗ್ ಪ್ರಕ್ರಿಯೆ ನಡೆಸಿದ್ದೇವೆ ಎಂದು ಹೇಳಿದರು.

Articles You Might Like

Share This Article