ಬಿಡಿಎ ನಿವೇಶನಗಳ ನಕಲಿ ದಾಖಲೆ ಸೃಷ್ಟಿಸಿ ವಂಚಿಸಿದ ಪ್ರಕರಣ ಕುರಿತು ಎಸ್‍ಐಟಿ ತನಿಖೆ..?

ಬೆಂಗಳೂರು,ಡಿ.15- ಖಾಸಗಿ ವ್ಯಕ್ತಿಗಳೊಂದಿಗೆ ಶಾಮೀಲಾಗಿ ನಿವೇಶನಗಳ ದಾಖಲೆ ಸೃಷ್ಟಿಸಿ ನೂರಾರು ಕೋಟಿ ವಂಚನೆ ಮಾಡಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದ ಪ್ರಕರಣವನ್ನು ರಾಜ್ಯ ಸರ್ಕಾರ ವಿಶೇಷ ತನಿಖಾ ದಳ(ಎಸ್‍ಐಟಿ)ಕ್ಕೆ ವಹಿಸಲು ಮುಂದಾಗಿದೆ. ಹಿರಿಯ ಐಪಿಎಸ್ ಅಧಿಕಾರಿಯನ್ನು ತನಿಖಾ ತಂಡದ ಮುಖ್ಯಸ್ಥರನ್ನಾಗಿ ನೇಮಿಸಲಿದ್ದು, ಸದ್ಯದಲ್ಲೇ ಸರ್ಕಾರದಿಂದ ಅಧಿಕೃತ ಆದೇಶ ಹೊರಬೀಳಲಿದೆ.

ಈ ಪ್ರಕರಣದಲ್ಲಿ ಸರ್ಕಾರಿ ಅಧಿಕಾರಿಗಳ ಜೊತೆ ಕೆಲವು ಪ್ರಭಾವಿ ರಿಯಲ್ ಎಸ್ಟೇಟ್ ದಂಧೆ ನಡೆಸುವವರು ಕೂಡ ಶಾಮೀಲಾಗಿದ್ದು, ಎಸ್‍ಐಟಿ ಮೂಲಕವೇ ತನಿಖೆ ನಡೆಸಿ ಪ್ರಭಾವಿಗಳನ್ನು ಮಟ್ಟ ಹಾಕಬೇಕೆಂಬ ತೀರ್ಮಾನಕ್ಕೆ ಸರ್ಕಾರ ಬಂದಿದೆ.  ಇದರಲ್ಲಿ ದೊಡ್ಡ ದೊಡ್ಡ ಕುಳಗಳೇ ಶಾಮೀಲಾಗಿರುವುದರಿಂದ ಎಸ್‍ಐಟಿ ಮೂಲಕ ತನಿಖೆ ನಡೆಸಲು ಬಿಡಿಎ ಅಧ್ಯಕ್ಷರಾದ ಎಸ್.ಆರ್.ವಿಶ್ವನಾಥ್ ಅವರು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನವಿ ಮಾಡಿದ್ದರು.

ಇದನ್ನು ಪರಿಗಣಿಸಿರುವ ಸಿಎಂ ಬಿಎಸ್‍ವೈ ಅವರು ಬಿಡಿಎ ಪ್ರಕರಣವನ್ನು ಎಸ್‍ಐಟಿ ಮೂಲಕವೇ ತನಿಖೆ ನಡೆಸಲು ತೀರ್ಮಾನಿಸಿದ್ದಾರೆ. ದಕ್ಷ ಹಾಗೂ ಪ್ರಾಮಾಣಿಕ ಹಿರಿಯ ಐಪಿಎಸ್ ಅಧಿಕಾರಿ ತನಿಖಾ ತಂಡದ ಮುಖ್ಯಸ್ಥರಾಗಲಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.  ಕಳೆದ ಡಿಸೆಂಬರ್ 5ರಂದು ಜಾಗೃತ ದಳದ ಅಧಿಕಾರಿಗಳು ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿತ್ತು.

ಬಿಡಿಎ ಉಪಕಾರ್ಯದರ್ಶಿ-3(ಡಿಎಸ್-3) ಶಿವೇಗೌಡ, ಅಧೀಕ್ಷಕಿ ಕಮಲಮ್ಮ, ಕೇಸ್ ವರ್ಕರ್ ಸಂಪತ್‍ಕುಮಾರ್, ಪ್ರಥಮದರ್ಜೆ ಸಹಾಯಕಿ ಪವಿತ್ರ ಹಾಗೂ ದಳ್ಳಾಳಿ ಇಂದ್ರಕುಮಾರ್ ಅವರುಗಳನ್ನು ಜಾಗೃತದಳದ ಪೊಲೀಸರು ಬಂಧಿಸಿದ್ದರು.  ಬಿಡಿಎ ಗಮನಕ್ಕೆ ತಾರದೆ ಪ್ರಾಧಿಕಾರದ ಕೆಲವು ಅಧಿಕಾರಿಗಳು ಹಾಗೂ ಸಿಬ್ಬಂದಿ ಖಾಸಗಿ ವ್ಯಕ್ತಿಗಳೊಂದಿಗೆ ಶಾಮೀಲಾಗಿ ನಿವೇಶನದ ದಾಖಲೆಗಳನ್ನು ಸೃಷ್ಟಿಸಿ ನೂರಾರು ಕೋಟಿ ವಂಚಿಸಿದ ಪ್ರಕರಣ ಇದಾಗಿತ್ತು.

ನಗರದ ಕನಿಂಗ್‍ಹ್ಯಾಮ್ ರಸ್ತೆ ಪ್ರೆಸ್ಟೀಜ್ ಸೆಂಟರ್ ಪಾಯಿಂಟ್‍ನಲ್ಲಿ ಇರುವ ರೇಗನ್ ದಿ ಸಿನಿಮಾ ಪೀಪಲ್ ಎಂಬ ಕಚೇರಿಯಲ್ಲಿ ದಾಖಲೆಗಳನ್ನು ಸೃಷ್ಟಿಸುತ್ತಿದದ್ದು ಬೆಳಕಿಗೆ ಬಂದಿತ್ತು.ಜಾಗೃತ ದಳದ ಪೊಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ ಪ್ರಾಧಿಕಾರದ ಸ್ವತ್ತುಗಳು, ನಿವೇಶನ ಹಂಚಿಕೆ ಪತ್ರ, ಸ್ವಾಧೀನ ಪತ್ರ, ಖಚಿತ ಅಳತೆ ವರದಿ, ಲೆಟರ್ ಹೆಡ್‍ಗಳು, ಮೊಹರುಗಳು ಸೇರಿದಂತೆ ವಿವಿಧ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಸಾರ್ವಜನಿಕರು ದೂರು ನೀಡಿದ ಹಿನ್ನೆಲೆಯಲ್ಲಿ ಜಾಗೃತ ದಳದ ಪೊಲೀಸರು ಮಿಂಚಿನ ದಾಳಿ ನಡೆಸಿ ಈ ಎಲ್ಲರನ್ನು ಬಂಧಿಸಿದ್ದಾರೆ. ಇದು ಬಿಡಿಎನಲ್ಲಿ ಭಾರೀ ಸಂಚಲನವನ್ನೇ ಸೃಷ್ಟಿಸಿತ್ತು. ಪ್ರಕರಣವನ್ನು ತನಿಖೆಗೆ ವಹಿಸಬೇಕೆಂದು ಸಾರ್ವಜನಿಕರು ಬಿಡಿಎ ಅಧ್ಯಕ್ಷ ವಿಶ್ವನಾಥ್‍ಗೆ ಲಿಖಿತ ದೂರು ಸಲ್ಲಿಸಿದರು.