ಬಿಡಿಎ ನಿರ್ಮಿಸಿದ ಪ್ಲಾಟ್‍ಗಳನ್ನು ಕೇಳೋರೆ ಇಲ್ಲ..!

Social Share

ಬೆಂಗಳೂರು,ಫೆ.2-ಸಿಲಿಕಾನ್ ಸಿಟಿ ಅಪಾರ್ಟ್‍ಮೆಂಟ್ ನಗರಿಯಾಗಿ ಪರಿವರ್ತನೆಗೊಂಡಿದೆ. ಖಾಸಗಿಯವರು ನಿರ್ಮಿಸುವ ಪ್ಲಾಟ್‍ಗಳು ಕೋಟಿ ಕೋಟಿಗೆ ಬಿಕರಿಯಾಗುತ್ತಿವೆ. ಆದರೆ, ಬಿಡಿಎ ನಿರ್ಮಿಸಿರುವ ಪ್ಲಾಟ್‍ಗಳನ್ನು ಖರೀದಿಸಲು ಮಾತ್ರ ಜನ ಮುಂದೆ ಬರುತ್ತಿಲ್ಲ.
ನಗರದಲ್ಲಿ ಪ್ಲಾಟ್‍ಗಳಿಗೆ ಇರುವ ಬೇಡಿಕೆ ಆಧಾರದ ಮೇಲೆ ಹಾಗೂ ಭವಿಷ್ಯದಲ್ಲಿ ನಿವೇಶನ ಹಂಚಿಕೆ ಮಾಡಲು ಸಾಧ್ಯವಿಲ್ಲ ಎಂಬ ಲೆಕ್ಕಚಾರದ ಮೇಲೆ ಬಿಡಿಎ ಸಾವಿರಾರು ಅಪಾರ್ಟ್‍ಮೆಂಟ್‍ಗಳನ್ನು ನಿರ್ಮಿಸಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಮಿಸಿರುವ ಪ್ಲಾಟ್‍ಗಳು ಖಾಲಿ ಹೊಡೆಯುತ್ತಿದ್ದು, ಜನ ಬಿಡಿಎ ಪ್ಲಾಟ್‍ಗಳನ್ನು ಖರೀದಿಸಲು ಮಾತ್ರ ಮನಸ್ಸು ಮಾಡುತ್ತಿಲ್ಲ.
ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಬಿಡಿಎ ಅಧಿಕಾರಿಗಳು ಖಾಸಗೀ ಏಜನ್ಸಿಗಳ ಮೂಲಕ ಪ್ಲಾಟ್ ಮಾರಾಟಕ್ಕೆ ಮಾಡಿದ ಪ್ಲಾನ್ ಕೂಡ ಪ್ಲಾಪ್ ಆಗಿದೆ.ನಗರದ ಹೊರ ವಲಯಗಳಾದ ಕೊಮ್ಮಘಟ್ಟ, ಆಲೂರು, ಹಲಗೆವಡೆರಹಳ್ಳಿ, ಕಣ್ಮಿಣಿಕೆ, ಗುಂಜೂರು ಮತ್ತಿತರ ಪ್ರದೇಶಗಳಲ್ಲಿ ಬಿಡಿಎ ಅಪಾರ್ಟ್‍ಮೆಂಟ್‍ಗಳನ್ನು ನಿರ್ಮಿಸಿದೆ.
ಆದರೆ, ಬಿಡಿಎ ನಿರ್ಮಿಸಿರುವ 1600 ಅಪಾರ್ಟ್‍ಮೆಂಟ್‍ಗಳಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ವಾಸ ಮಾಡುತ್ತಿದ್ದು, ಬಹುತೇಕ ಪ್ಲಾಟ್‍ಗಳು ಖಾಲಿ ಉಳಿದಿವೆ.ಬಿಡಿಎ ಅಪಾರ್ಟ್‍ಮೆಂಟ್‍ಗಳು ಜನರನ್ನು ಸೆಳೆಯಲು ವಿಫಲವಾಗಿವೆ ಎಂಬ ಅರಿವಿದ್ದರೂ ಬಿಡಿಎ ಅಧಿಕಾರಿಗಳು ಗುತ್ತಿಗೆದಾರರು ನೀಡುವ ಕಮಿಷನ್‍ಗೆ ಆಸೆ ಬಿದ್ದು ನೂರಾರು ಅಪಾರ್ಟ್‍ಮೆಂಟ್‍ಗಳನ್ನು ನಿರ್ಮಿಸಲು ಅನುಮತಿ ನೀಡಿರುವುದರಿಂದ ಸಮೃದ್ದಿಭರಿತವಾಗಿದ್ದ ಬಿಡಿಎ ಖಜಾನೆ ಖಾಲಿಯಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ಪ್ಲಾಟ್ ಮಾರಾಟವಾಗದಿರಲೂ ಕಾರಣವೇನು?: ಬಿಡಿಎ ನಿರ್ಮಿಸಿರುವ ಪ್ಲಾಟ್‍ಗಳಲ್ಲಿ ಮೂಲಭೂತ ಸೌಕರ್ಯ ಕೊರತೆ ಪ್ರಮುಖ ಕಾರಣ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.ಲಕ್ಷ ಲಕ್ಷ ಹಣ ಕೊಟ್ಟು ಪ್ಲಾಟ್ ಖರೀದಿಸಿದರೂ ವಾಟರ್ ಮತ್ತು ವಿದ್ಯುತ್ ಸೌಲಭ್ಯ ಸಿಗುತ್ತಿಲ್ಲ. ಮಳೆ ಬಂದರೆ ಪ್ಲಾಟ್‍ಗಳಲ್ಲಿ ನೀರು ಸೋರಿಕೆಯಾಗುತ್ತದೆ. ಹಾಗೂ ಕಟ್ಟಡವನ್ನು ಕಳಪೆ ಗುಣಮಟ್ಟದಿಂದ ನಿರ್ಮಿಸಲಾಗಿದೆ ಎಂಬ ಆರೋಪವೂ ಇದೆ.
ಅದರಲ್ಲೂ ಪ್ರಮುಖವಾಗಿ ನಗರದಿಂದ ಸಾಕಷ್ಟು ದೂರದಲ್ಲಿ ಪ್ಲಾಟ್‍ಗಳ ನಿರ್ಮಾಣ ಮಾಡಿರುವುದರಿಂದ ಜನ ಪ್ಲಾಟ್ ಖರೀದಿ ಮಾಡುತ್ತಿಲ್ಲ.  ಇತ್ತಿಚೆಗೆ ಪ್ಲಾಟ್ ಖರೀದಿಸುವವರು ವಾಸ್ತು ಶಾಸ್ತ್ರಕ್ಕೆ ಮೊರೆ ಹೋಗುವುದು ಮಾಮೂಲಾಗಿದೆ. ಆದರೆ, ಬಿಡಿಎ ಪ್ಲಾಟ್‍ಗಳನ್ನು ವಾಸ್ತುಶಾಸ್ತ್ರದ ಆಧಾರದ ಮೇಲೆ ನಿರ್ಮಿಸಿಲ್ಲ ಎಂಬ ಮಾತು ಸರ್ವೇ ಸಾಮಾನ್ಯವಾಗಿದೆ.

Articles You Might Like

Share This Article