ಬೆಂಗಳೂರು, ಜ.27- ನಕಲಿ ದಾಖಲೆ ಸೃಷ್ಟಿಸಿ ನಿವೇಶನಗಳನ್ನು ಕಬಳಿಸಿ ಬಿಡಿಎ ಭ್ರಹ್ಮಾಂಡ ಭ್ರಷ್ಟಾಚಾರ ಹಗರಣಕ್ಕೆ ಸಂಬಂಧ ಪಟ್ಟಂತೆ ಭೇಟೆ ಆರಂಭಿಸಿರುವ ಶೇಷಾದ್ರಿಪುರಂ ಠಾಣೆ ಪೊಲೀಸರು, ಮೊದಲ ಹಂತದಲ್ಲಿ ಆರು ಮಂದಿಯನ್ನು ಬಂಧಿಸಿದ್ದು, ಹಿರಿಯ ಅಧಿಕಾರಿಗಳಿಗಾಗಿ ಬಲೆ ಬೀಸಿದೆ.
ಬಿಡಿಎ ಕೇಸ್ ವರ್ಕರ್ ಲೋಕೇಶ್ ಗೌಡ, ಡಾಟಾ ಎಂಟ್ರಿ ಆಪರೆಟರ್ ಸುನೀಲ್, ಮಧ್ಯವರ್ತಿಗಳು ಮತ್ತು ನಕಲಿ ದಾಖಲೆಗಳ ಮೂಲಕ ನಿವೇಶನ ಕಬಳಿಸಿರುವ ಆರೋಪಕ್ಕಾಗಿ ಪವನ್, ವಿಕ್ರಂ ಜೈನ್, ಮಂಜುನಾಯಕ್, ರಾಮ ಚಂದ್ರ ಅವರನ್ನು ಬಂಧಿಸಲಾಗಿದೆ.
ಬೆಂಗಳೂರಿನ ಎಚ್.ಬಿ.ಆರ್. ಲೇಔಟ್ ಮತ್ತು ವಿಶ್ವೇಶ್ವರಯ್ಯ ಲೇಔಟ್‍ಗೆ ಸಂಬಂಧಿಸಿದಂತೆ ಹಲವಾರು ನಿವೇಶನಗಳಲ್ಲಿ ಅಕ್ರಮ ನಡೆದಿತ್ತು. ನಿವೇಶನ ಮುಂಜೂರಾಗದೆ ಇದ್ದರೂ ಭೋಗ್ಯ ಮತ್ತು ಖರೀದಿ ಕರಾರು ಪತ್ರವನ್ನು ನಕಲಿಯಾಗಿ ತಯಾರಿಸಿ, 10 ವರ್ಷಗಳ ಬಳಿಕ ನಕಲಿ ಶುದ್ಧ ಕ್ರಯ ಪತ್ರದ ಮೂಲಕ ನಿವೇಶನವನ್ನು ಕಬಳಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು.
ಬಿಡಿಎನ ವಿಶೇಷ ಕಾರ್ಯಪಡೆ ಮತ್ತು ವಿಚಕ್ಷಣಾ ದಳ ದಾಖಲಾತಿಗಳನ್ನು ಪರಿಶೀಲನೆ ನಡೆಸಿ ಅಕ್ರಮ ಪತ್ತೆ ಹಚ್ಚಿದ್ದಲ್ಲದೆ ಉಪ ಕಾರ್ಯದರ್ಶಿ ಹಾಗೂ ಅವರಿಗಿಂತ ಕೆಳ ಹಂತದ ಅಕಾರಿಗಳು, ಮಧ್ಯವರ್ತಿಗಳು, ನಿವೇಶನ ಫಲಾನುಭವಿಗಳನ್ನು ಅರೋಪಿಗಳೆಂದು ಗುರುತಿಸಿ ಶೇಷಾದ್ರಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರು ಆಧರಿಸಿ 18 ಪ್ರಕರಣಗಳು ದಾಖಲಾಗಿವೆ. ಪ್ರತಿಯೊಂದು ಪ್ರಕರಣದಲ್ಲೂ ನಾಲ್ಕೈದು ಮಂದಿ ಅಧಿಕಾರಿಗಳಿದ್ದರೆ, ಹೆಚ್ಚಿನ ಸಂಖ್ಯೆಯ ಮಧ್ಯವರ್ತಿಗಳಿದ್ದಾರೆ. ಬಹುಕೋಟಿ ರೂಪಾಯಿಗಳ ಈ ಹಗರಣದ ತನಿಖೆ ಆರಂಭಿಸಿರುವ ಶೇಷಾದ್ರಿ ಪುರಂ ಪೊಲೀಸರು ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ಆರಂಭಿಸಿದ್ದಾರೆ.
ಇತ್ತಿಚೆಗೆ ನಡೆದ ಕಾರ್ಯಾಚರಣೆಯಲ್ಲಿ ಬಿಡಿಎ ನೌಕರ ಲೋಕೇಶ್ ಗೌಡ ಸೇರಿದಂತೆ ಆರು ಮಂದಿಯನ್ನು ಬಂಧಿಸಿದ್ದಾರೆ. ಇವರಷ್ಟೆ ಅಲ್ಲದೆ ಹಲವಾರು ಮಂದಿ ಕೇಸ್ ವರ್ಕರ್‍ಗಳು, ಸೂಪರಿಂಟೆಂಡೆಂಟ್ ಅಕಾರಿಗಳು, ಉಪಕಾರ್ಯದರ್ಶಿಗಳು ಆರೋಪಿಗಳ ಪಟ್ಟಿಯಲ್ಲಿದ್ದಾರೆ. ನಿವೇಶನ ಪಡೆದವರಲ್ಲಿ ಬಹಳಷ್ಟು ಮಂದಿ ಶ್ರೀಮಂತರು, ಪ್ರಭಾವಿಗಳಿದ್ದು, ಅವರುಗಳ ಬಂಧನಕ್ಕೂ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.
ಇತ್ತೀಚೆಗೆ ಎಸಿಬಿ ಬಿಡಿಎ ಮೇಲೆ ದಾಳಿ ನಡೆಸಿ ಹಲವು ಅಕ್ರಮಗಳನ್ನು ಬಯಲಿಗೆ ಎಳೆದಿತ್ತು. ಈಗ ಬಿಡಿಎ ಕಾರ್ಯಪಡೆಯಿಂದ ಮತ್ತಷ್ಟು ಅಕ್ರಮಗಳು ಬಯಲಾಗುತ್ತಿವೆ. ಹಲವು ವರ್ಷಗಳಿಂದ ಸಾರ್ವಜನಿಕ ಸ್ವತ್ತನ್ನು ನುಂಗಿ ನೀರು ಕುಡಿದವರು ಈಗ ಉಸಿರುಕಟ್ಟಿದಂತೆ ಒದ್ದಾಡಲಾ ರಂಭಿಸಿದ್ದಾರೆ.
