ಬೆಂಗಳೂರು,ಜ.25-ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ನೂರಾರು ಕೋಟಿ ರೂ. ಮೌಲ್ಯದ ನಿವೇಶನಗಳನ್ನು ಕಬಳಿಸಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಬೃಹತ್ ಕರ್ಮಕಾಂಡವನ್ನು ಬಯಲಿಗೆ ಎಳೆದಿರುವ ವಿಶೇಷ ಕಾರ್ಯಪಡೆ, ಬಿಡಿಎ ಅಧಿಕಾರಿಗಳು ಸೇರಿದಂತೆ ಹತ್ತಾರು ಆರೋಪಿಗಳ ವಿರುದ್ಧ 18 ಪ್ರಕರಣಗಳನ್ನು ದಾಖಲಿಸಿದೆ.
ಕಳೆದ ಹತ್ತು ದಿನಗಳಿಂದ ನಿರಂತರವಾಗಿ ದಾಖಲಾತಿಯನ್ನು ಪರಿಶೀಲಿಸಿ ಕರ್ಮಕಾಂಡವನ್ನು ಪತ್ತೆಹಚ್ಚಲಾಗಿದ್ದು, ದಾಖಲಾತಿಗಳನ್ನು ಆಧರಿಸಿ ವಿಶೇಷ ಕಾರ್ಯಪಡೆ ಮತ್ತು ಜಾಗೃತ ದಳದ ಅಧಿಕಾರಿಗಳು ನಗರದ ಶೇಷಾದ್ರಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದರಲ್ಲಿ ಉಪಕಾರ್ಯದರ್ಶಿಗಳಾದ ಅನಿಲ್‍ಕುಮಾರ್, ಎಸ್.ಎ.ಮಂಗಳ ಅವರ ಹೆಸರುಗಳು ಕೇಳಿಬಂದಿವೆ. ಜೊತೆಗೆ ಬಿಡಿಎ ಕೇಸ್‍ವರ್ಕರ್‍ಗಳು, ಮಧ್ಯವರ್ತಿಗಳು ಮತ್ತು ನಿವೇಶನದ ಫಲಾನುಭವಿಗಳು ಆರೋಪಿಗಳಾಗಿದ್ದಾರೆ.
18 ಪ್ರತ್ಯೇಕ ಪ್ರಕರಣಗಳಲ್ಲಿ 11 ಎಚ್‍ಬಿಆರ್ ಲೇಔಟ್ ನಿವೇಶನಗಳಿಗೆ ಸಂಬಂಧಪಟ್ಟಿದ್ದರೆ, 7 ಪ್ರಕರಣಗಳು ವಿಶ್ವೇಶ್ವರಯ್ಯ ಲೇಔಟ್‍ಗೆ ಸಂಬಂಧಪಟ್ಟಿದೆ. ಪ್ರತಿ ಪ್ರಕರಣದಲ್ಲೂ ಐಪಿಸಿ ಸೆಕ್ಷನ್ 409, 420, 465, 471, 472, 468ರಡಿ ಆರೋಪಗಳನ್ನು ದಾಖಲಿಸಲಾಗಿದೆ. ಎಫ್‍ಐಆರ್ ದಾಖಲಾಗಿರುವುದರಿಂದ ಬಿಡಿಎ ಅಧಿಕಾರಿಗಳು ಬಂಧನದ ಭೀತಿ ಎದುರಿಸುತ್ತಿದ್ದಾರೆ.
ಇದೊಂದು ಬೃಹತ್ ಪ್ರಮಾಣದ ಭ್ರಷ್ಟಾಚಾರ ಹಾಗೂ ವಂಚನೆ ಹಗರಣವಾಗಿದ್ದು, ಬಿಡಿಎನ ಕಪ್ಪು ಇತಿಹಾಸಕ್ಕೆ ಹೊಸ ಸೇರ್ಪಡೆಯಾಗಿದೆ. ನಿವೇಶನಕ್ಕೆ ಸಂಬಂಧಪಟ್ಟಂತೆ ಗುತ್ತಿಗೆ ಹಾಗೂ ಮಾರಾಟ ಒಪ್ಪಂದ ನೋಂದವಣಿಯಾಗದೆ ಇದ್ದರೂ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಬಿಡಿಎನಿಂದ ಶುದ್ದ ಕ್ರಯಪತ್ರ ಮಾಡಿಸಿಕೊಂಡು ಕೋಟ್ಯಂತರ ರೂ. ಮೌಲ್ಯದ ನಿವೇಶನಗಳನ್ನು ಆರೋಪಿಗಳು ಕಬಳಿಸಿದ್ದಾರೆ.
ಇದಕ್ಕೆ ಬಿಡಿಎ ಅಧಿಕಾರಿಗಳು ಮತ್ತು ಮಧ್ಯವರ್ತಿಗಳು ಸಹಕರಿಸಿರುವ ಆರೋಪ ಎಫ್‍ಐಆರ್‍ನಲ್ಲಿ ದಾಖಲಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟವಾಗಿದೆ. ಪ್ರತಿ ಪ್ರಕರಣದಲ್ಲೂ ನಾಲ್ಕರಿಂದ ಐದು ಮಂದಿ ಆರೋಪಿಗಳನ್ನು ಗುರುತಿಸಲಾಗಿದೆ. ಸಂಬಂಧಪಟ್ಟ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಎಫ್‍ಐಆರ್‍ನಲ್ಲಿ ಉಲ್ಲೇಖಿಸಿರುವುದು ಗಮನಸೆಳೆದಿದೆ.
# ಪ್ರಕರಣದ ವಿವರ:
ಎಚ್‍ಬಿಆರ್ ಲೇಔಟ್‍ನ 1ನೇ ಹಂತ, 5ನೇ ಬ್ಲಾಕ್‍ನಲ್ಲಿ 30*40 ಅಡಿ ವಿಸ್ತೀರ್ಣದ ನಿವೇಶನ ಸಂಖ್ಯೆ 1008ನ್ನು ಶ್ರೀನಿವಾಸ ರೆಡ್ಡಿ ಎಂಬುವರ ಹೆಸರಿಗೆ ಶುದ್ದ ಕ್ರಯಪತ್ರ ಮಾಡಿಕೊಡಲಾಗಿದೆ. ಈ ಪ್ರಕರಣದಲ್ಲಿ ಶ್ರೀನಿವಾಸ ರೆಡ್ಡಿ ಮೊದಲ ಆರೋಪಿಯಾಗಿದ್ದರೆ, ಬಿಡಿಎ ಉಪಕಾರ್ಯದರ್ಶಿ-4 ಮಂಗಳ.ಎಸ್.ಎಂ, ಕೇಸ್ ವರ್ಕರ್ ಕಮಲಮ್ಮ .ಎಚ್.ಬಿ, ಸೂಪರ್‍ವೈಸರ್ ಕಮಲಮ್ಮ, ಬಿಡಿಎ ಆರ್ಥಿಕ ವಿಭಾಗದ ಸಿಬ್ಬಂದಿಗಳು, ಮಧ್ಯವರ್ತಿಗಳು ಕ್ರಮವಾಗಿ ಆರೋಪಿಗಳ ಸ್ಥಾನದಲ್ಲಿದ್ದಾರೆ. ಕಾರ್ಯಪಡೆಯ ಇನ್‍ಸ್ಪೆಕ್ಟರ್ ಎಚ್.ಇಂದ್ರಾಣಿ ಅವರು ದೂರು ನೀಡಿದ್ದಾರೆ.
ಇದೇ ಅಧಿಕಾರಿಗಳ ತಂಡ ಎಚ್.ಬಿ.ಆರ್.ಲೇಔಟ್‍ನ 40*60 ಅಡಿಯ ನಿವೇಶನ ಸಂಖ್ಯೆ 1102ನ್ನು ರಾಜೇಂದ್ರಕುಮಾರ್ ಎಂಬುವರಿಗೆ ನಕಲಿ ದಾಖಲಾತಿಗಳನ್ನು ಆಧರಿಸಿ ಅಕ್ರಮವಾಗಿ ಶುದ್ದ ಕ್ರಯ ಪತ್ರ ಮಾಡಿಕೊಟ್ಟಿದ್ದಾರೆ. ಇದರಿಂದ ಪ್ರಾಧಿಕಾರಕ್ಕೆ 1.47 ಕೋಟಿ ನಷ್ಟವಾಗಿದೆ ಎಂದು ಕಾರ್ಯಪಡೆ ಹೆಡ್‍ಕಾನ್‍ಸ್ಟೆಬಲ್ ರಾಮಚಂದ್ರಪ್ಪ ದೂರು ನೀಡಿದ್ದಾರೆ.
ಎಚ್‍ಬಿಆರ್‍ಲೇಔಟ್‍ನ ನಿವೇಶನ ಸಂಖ್ಯೆ 1262ರಲ್ಲಿ 30* 40 ಅಡಿ ಅಳತೆಯ ನಿವೇಶನವನ್ನು ಕಮರ್ ಉನ್ನೀಸ ಎಂಬುವರಿಗೆ ಬಿಡಿಎ ಉಪಕಾರ್ಯದರ್ಶಿ ಎಸ್.ಎಂ.ಮಂಗಳ, ಕೇಸ್ ವರ್ಕರ್ ವೆಂಕಟರಮಣಪ್ಪ, ಸೂಪರ್‍ವೈಸರ್ ಮರಿಯಪ್ಪ ಮತ್ತು ಮಧ್ಯವರ್ತಿಗಳು ಅಕ್ರಮವಾಗಿ ಶುದ್ದ ಕ್ರಯ ಪತ್ರ ಮಾಡಿಕೊಟ್ಟಿದ್ದಾರೆ ಎಂದು ಇನ್‍ಸ್ಪೆಕ್ಟರ್ ಇಂದ್ರಾಣಿ ದೂರು ನೀಡಿದ್ದು, ಇದರಿಂದ ಬಿಡಿಎಗೆ 73.86 ಲಕ್ಷ ರೂ. ಆರ್ಥಿಕ ನಷ್ಟ ಉಂಟಾಗಿದೆ ಎಂದು ತಿಳಿಸಿದ್ದಾರೆ.
ಕೆಂಗೇರಿ ಉಪನಗರ ಬಡಾವಣೆಯಲ್ಲಿ 50*30 ಅಡಿ ಅಳತೆಯ ನಿವೇಶನ ಸಂಖ್ಯೆ 1989ನ್ನು ಬಿಡಿಎ ಅಧಿಕಾರಿಗಳು ಅಪ್ಪಯ್ಯಣ್ಣ ಎಂಬುವರಿಗೆ ಅಕ್ರಮವಾಗಿ ಶುದ್ದ ಕ್ರಯ ಪತ್ರ ಮಾಡಿಕೊಟ್ಟಿದ್ದಾರೆ. ಪ್ರಕರಣದಲ್ಲಿ ಬಿಡಿಎ ಉಪಕಾರ್ಯದರ್ಶಿ-3 ಅನಿಲ್‍ಕುಮಾರ್, ಕೇಸ್‍ವರ್ಕರ್ ಎಂ.ಕೆ.ಸಂಜಯ್‍ಕುಮಾರ್, ಸೂಪರ್‍ವೈಸರ್ ಮಹದೇವಮ್ಮ, ಮಧ್ಯವರ್ತಿಗಳು ಹಾಗೂ ಇತರರು ಆರೋಪಿಗಳಾಗಿದ್ದಾರೆ ಎಂದು ಇನ್‍ಸ್ಪೆಕ್ಟರ್ ವಿ.ಟಿ.ಶ್ರೀನಿವಾಸ್ ದೂರು ನೀಡಿದ್ದಾರೆ.
