ಅಕ್ರಮದ ಬಗ್ಗೆ ಎಸಿಬಿ ದೂರು ಕೊಟ್ಟಿದ್ದೇ ನಾನು : ವಿಶ್ವನಾಥ್

ಬೆಂಗಳೂರು, ನ.20- ನಾನು ಬಿಡಿಎ ಅಧ್ಯಕ್ಷನಾದ ಮೇಲೆ ಸಾಕಷ್ಟು ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕಿದ್ದು, ಅಕ್ರಮದ ಬಗ್ಗೆ ಈ ಹಿಂದೆ ನಾನೇ ಎಸಿಬಿಗೆ ದೂರು ಕೊಟ್ಟಿದ್ದೆ ಎಂದು ವಿಶ್ವನಾಥ್ ಪ್ರತಿಕ್ರಿಯಿಸಿದ್ದಾರೆ.

ಬಿಡಿಎ ಮೇಲೆ ಎಸಿಬಿ ದಾಳಿ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅವರು, ಇತ್ತೀಚಿನ ವರ್ಷಗಳಲ್ಲಿ ಬಿಡಿಎ ಮೇಲೆ ಸಾಕಷ್ಟು ಭ್ರಷ್ಟಾಚಾರ ಆರೋಪ ಕೇಳಿ ಬಂದಿದೆ. ಬಿಡಿಎ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡು ನ.26ಕ್ಕೆ ಒಂದು ವರ್ಷವಾಗಲಿದೆ. ಸ್ವಚ್ಛ ಬಿಡಿಎ ಮಾಡುತ್ತೇನೆ ಎಂದು ಪ್ರಾರಂಭದಲ್ಲಿ ನಾನು ಹೇಳಿದ್ದಾ. ಅದರಂತೆ ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕಿದ್ದೇನೆ ಎಂದರು.

ಬಿಡಿಎ ಅಕ್ರಮ ಸಂಬಂಧ ಈಗಾಗಲೇ ಸಾಕಷ್ಟು ಜನರು ಜೈಲಿಗೂ ಹೋಗಿ ಬಂದಿದ್ದಾರೆ. ಈ ಬಗ್ಗೆ ನಾನೇ ಎಸಿಬಿಗೆ ದೂರು ಕೊಟ್ಟಿದ್ದೇನೆ. ಸಾಕಷ್ಟು ಸಾರ್ವಜನಿಕರೂ ದೂರು ಕೊಟ್ಟಿದ್ದಾರೆ. ಕೆಳಮಟ್ಟದ ಅಕಾರಿಗಳು ಲಂಚ ಇಲ್ಲದೆ ಕೆಲಸ ಮಾಡಲ್ಲ ಎಂಬ ದೂರು ಕೇಳಿಬಂದಿದೆ. ರೈತರ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿ ಮಾಡುತ್ತಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ನಾವು ಪರಿಶೀಲನೆಗೆ ಹೋದಾಗ ಅಲಾರ್ಟ್‍ಮೆಂಟ್ ತೆಗೆದುಕೊಂಡ ಬರುತ್ತಾರೆ ಎಂದರು.

ಬಿಡಿಎ ಮೇಲೆ ಎಸಿಬಿ ದಾಳಿ ಮಾಡಿರುವುದನ್ನು ನಾನು ಸ್ವಾಗತಿಸುತ್ತೇನೆ. ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಯಲಿ. ಅದಕ್ಕೆ ಎಲ್ಲ ಸಹಕಾರ ನೀಡುತ್ತೇನೆ ಎಂದರು.

ನಿನ್ನೆಯ ದಾಳಿ ಸಂದರ್ಭದಲ್ಲಿ ನಗದು ಹಣ ಸಿಕ್ಕಿಲ್ಲ ಎಂಬ ಮಾಹಿತಿ ಇದೆ. ದಲ್ಲಾಳಿಗಳಿದ್ದಾಗ ಈ ದಾಳಿ ನಡೆಯಬೇಕಿತ್ತು. ನಾನೂ ಸಹ ಸಿಎಂಗೆ ಈ ಬಗ್ಗೆ ವಿವರಣೆ ನೀಡಿದ್ದೇನೆ ಎಂದರು.