ಬೆಂಗಳೂರು,ಜು.18- ಎಲ್ಲ ಇಲಾಖೆಗಳ ಸಹಯೋಗದಿಂದ ತಾಯಿ-ಮಗುವಿನ ಭಿಕ್ಷಾಟನೆ ತಡೆಯಲು ಯೋಜನೆ ರೂಪಿಸಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು. ವಿಕಾಸಸೌಧದಲ್ಲಿ ನಡೆದ ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳು-ತಾಯಂದಿರನ್ನು ರಕ್ಷಿಸಲು ಮತ್ತು ಭಿಕ್ಷಾಟನೆ ನಿಯಂತ್ರಿಸುವ ಸಂಬಂಧ ನಡೆದ ಸಭೆಯ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಬೆಂಗಳೂರಿನಲ್ಲಿ 720 ಮಕ್ಕಳು ಭಿಕ್ಷಾಟನೆಯಲ್ಲಿ ತೊಡಗಿದ್ದಾರೆ ಎಂದು ಕಾನೂನು ಸೇವಾ ಪ್ರಾಧಿಕಾರ ಮಾಹಿತಿ ನೀಡಿದೆ. ಈ ಹಿನ್ನಲೆಯಲ್ಲಿ ಮಕ್ಕಳ-ತಾಯಿಂದಿರ ಭಿಕ್ಷಾಟನೆ ತಡೆಯಲು ಬೆಂಗಳೂರಿನಲ್ಲಿ ಯೋಜನೆ ರೂಪಿಸಲಾಗಿದೆ. ಬೆಂಗಳೂರಿನ 8 ವಿಭಾಗಗಳಲ್ಲಿ ಎಸಿಪಿ ನೇತೃತ್ವದ ತಂಡ ರಚಿಸಲಾಗಿದೆ. ಮಕ್ಕಳ ಭಿಕ್ಷಾಟನೆಯಲ್ಲಿರುವ ಮಕ್ಕಳನ್ನು ರಕ್ಷಣೆ ಮಾಡಿ ಶಿಶು ಕಲ್ಯಾಣ ಇಲಾಖೆಗೆ ಹಸ್ತಾಂತರಿಸಲಾಗುತ್ತದೆ ಎಂದರು.
ಭಿಕ್ಷಾಟನೆಗೆ ಮಕ್ಕಳನ್ನು ಬಿಟ್ಟ ಬಗ್ಗೆ ಕಾನೂನು ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ರಕ್ಷಣೆ ಮಾಡಲಾದ ಮಕ್ಕಳು ಮತ್ತು ತಾಯಂದಿರನ್ನು ಸಂರಕ್ಷಣೆ ಮಾಡುವುದರ ಜೊತೆಗೆ ಅವರ ಆರೋಗ್ಯ ಕಾಪಾಡಲು ಯೋಜನೆ ರೂಪಿಸಲಾಗಿದೆ.
ಸಮಾಜ ಕಲ್ಯಾಣ ಇಲಾಖೆಯ ನಿರಾಶ್ರಿತರ ಕಟ್ಟಡದಲ್ಲಿ ಅವರಿಗೆ ರಕ್ಷಣೆ ಒದಗಿಸಲಾಗುವುದು. ವಿವಿಧ ಕಾರಣಗಳಿಂದ ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳಿಗೆ ಶಿಕ್ಷಣ, ವಸತಿ ಹಾಗೂ ವೃತ್ತಿ ಕೌಶಲ್ಯ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ರಾಜ್ಯದಲ್ಲಿ ಮಕ್ಕಳ ರಕ್ಷಣಾ ಸಮಿತಿ ಅವಧಿ ಮುಗಿದಿದ್ದು, ಅವುಗಳನ್ನು ಪುನಾರಚನೆ ಮಾಡಿ ತರಬೇತಿ ನೀಡಲಾಗುವುದು. ಜಿಲ್ಲಾ ಮಟ್ಟದಲ್ಲೂ ಇಂತಹ ಸಮಿತಿಗಳು ಇರುತ್ತವೆ. 14 ಜಿಲ್ಲೆಗಳಲ್ಲಿ ನಿರಾಶ್ರಿತ ಕೇಂದ್ರಗಳಿದ್ದು, ಉಳಿದ ಜಿಲ್ಲೆಗಳಲ್ಲೂ ನಿರಾಶ್ರಿತ ಕೇಂದ್ರಗಳನ್ನು ಮಾಡಲಾಗುವುದು ಎಂದರು.
ಬಾಲ ಸ್ವರಾಜ್ ಎಂಬ ಆ್ಯಪ್ ಕೂಡ ಅಭಿವೃದ್ಧಿಪಡಿಸಲಾಗಿದ್ದು, ಭಿಕ್ಷಾಟನೆ ನಿಯಂತ್ರಿಸಲು ಸರ್ಕಾರ ಸಜ್ಜಾಗಿದೆ. ಬುಡಸಮೇತ ನಿರ್ಮೂಲನೆ ಮಾಡುವ ಉದ್ದೇಶ ಹೊಂದಿದೆ. ಈಗಾಗಲೇ 101 ಭಿಕ್ಷಾಟನೆಯಲ್ಲಿ ತೊಡಗಿದ್ದ ಮಕ್ಕಳನ್ನು ಸ್ವಾೀಧಿನಪಡಿಸಿಕೊಂಡು 80 ಮಂದಿಯನ್ನು ಸಿಡಬ್ಲ್ಯುಸಿ ಗೆ ಹಸ್ತಾಂತರಿಸಲಾಗಿದೆ. ಉಳಿದ 21 ಮಂದಿಯನ್ನು ನಿರ್ಭಯದಂತಹ ಸಂಸ್ಥೆಗಳಲ್ಲಿ ಬಿಡಲಾಗಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆ ಜೊತೆಗೆ ಮಹಿಳಾ ಮತ್ತುಮಕ್ಕಳ ಕಲ್ಯಾಣ, ಗೃಹ ಇಲಾಖೆ, ಬಿಬಿಎಂಪಿ ಸೇರಿದಂತೆ ವಿವಿಧ ಇಲಾಖೆ ಹಾಗೂ ಸಂಸ್ಥೆಗಳ ಜೊತೆ ಭಿಕ್ಷಾಟನೆ ನಿರ್ಮೂಲನೆ ಬಗ್ಗೆ ಕ್ರಮ ಕೈಗೊಳ್ಳುವ ಸಂಬಂಧ ಚರ್ಚಿಸಲಾಯಿತು.
ಭಿಕ್ಷಾಟನೆಯಲ್ಲಿ ವಯೋವೃದ್ಧರು, ಮಾನಸಿಕ ಅಸ್ವಸ್ಥರು, ತೃತೀಯ ಲಿಂಗಿಗಳು, ಮಕ್ಕಳು, ತಾಯಂದಿರು ತೊಡಗಿದ್ದಾರೆ. ಬೆಂಗಳೂರಿನಲ್ಲಿ 50ರಿಂದ 70 ಪ್ರದೇಶಗಳಲ್ಲಿ ಮಕ್ಕಳನ್ನು ಹೆಗಲ ಮೇಲೆ ಹಾಕಿಕೊಂಡು ಭಿಕ್ಷಾಟನೆ ಮಾಡುತ್ತಿರುವ ಮಾಹಿತಿ ಇದೆ.
ಭಿಕ್ಷಾಟನೆಯಲ್ಲಿ ತೊಡಗುವ ಮಕ್ಕಳನ್ನು ಬಾಡಿಗೆಗೆ ಪಡೆಯುವ, ಮಕ್ಕಳಿಗೆ ಮತ್ತುಬರುವ ಔಷಧಿ ನೀಡುವ, ಅಂಗವಿಕಲರನ್ನಾಗಿ ಮಾಡುವ ಮಾಫಿಯಾ ಇದೆ ಎಂಬ ಮಾಹಿತಿ ಇದೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಎಂದರು. ಸಭೆಯಲ್ಲಿ ಸಚಿವ ಅರಗ ಜ್ಞಾನೇಂದ್ರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್, ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹಾಗೂ ಹಿರಿಯ ಅಕಾರಿಗಳು ಸಭೆಯಲ್ಲಿ ಇದ್ದರು.