ಬೆಳಗಾವಿ ಅಧಿವೇಶನದಲ್ಲಿ ಪ್ರತಿಧ್ವನಿಸಲಿವೆ ರಾಜ್ಯದ ಜ್ವಲಂತ ಸಮಸ್ಯೆಗಳು

Social Share

ಬೆಂಗಳೂರು, ಡಿ.18- ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಾಳೆಯಿಂದ ಅರಂಭವಾಗಲಿರುವ ರಾಜ್ಯ ವಿಧಾನ ಮಂಡಲದ ಉಭಯ ಸದನಗಳ ಚಳಿಗಾಲದ ಅಧಿವೇಶನದಲ್ಲಿ ಮೀಸಲಾತಿ ಹೆಚ್ಚಳದ ಬೇಡಿಕೆ, ಮಳೆ ಹಾನಿ, ಅತಿವೃಷ್ಟಿ ಪರಿಹಾರ ನೀಡಿಕೆ ವಿಳಂಬ, ಮಾನವ-ಕಾಡು ಪ್ರಾಣಿಗಳ ನಡುವಿನ ಸಂಘರ್ಷ, ರಸ್ತೆಗಳ ದುಸ್ಥಿತಿ, ಗಡಿ ವಿವಾದ ಮೊದಲಾದ ಜ್ವಲಂತ ಸಮಸ್ಯೆಗಳು ಪ್ರತಿಧ್ವನಿಸಲಿವೆ.

ಅಧಿವೇಶನದಲ್ಲಿ ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಜ್ಜಾಗಿವೆ. ಅದೇ ರೀತಿ ಆಡಳಿತ ಪಕ್ಷವು ಪ್ರತಿ ಪಕ್ಷಗಳ ಆಸಗಳಿಗೆ ಪ್ರತ್ಯಸ ಪ್ರಯೋಗಿಸಲು ತಯಾರಿ ಮಾಡಿಕೊಂಡಿದೆ. ಹತ್ತು ದಿನಗಳ ಕಾಲ ಅಧಿವೇಶನ ನಡೆಸಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ.

ನಾಳೆ ಅಧಿವೇಶನದಲ್ಲಿ ಇತ್ತೀಚೆಗೆ ಅಗಲಿದ ಗಣ್ಯರಿಗೆ ಸಂತಾಪ ಸಲ್ಲಿಸುವುದರಿಂದ ಗಂಭೀರ ವಿಚಾರಗಳು ಚರ್ಚೆಗೆ ಬರುವ ಸಾಧ್ಯತೆ ವಿರಳ. ಆದರೆ, ಮಂಗಳವಾರದಿಂದ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಕಾವೇರಿದ ಚರ್ಚೆ ನಡೆಯುವ ಸಾಧ್ಯತೆಗಳು ಹೆಚ್ಚಾಗಿವೆ.

ಚುನಾವಣಾ ವರ್ಷವಾಗಿರುವುದರಿಂದ ಅಭಿವೃದ್ಧಿಗೆ ಸಂಬಂಧಿಸಿದ ವಿಚಾರಗಳಿಗಿಂತ ಹೆಚ್ಚಾಗಿ ಸಂದರ್ಭಯೋಚಿತವಾಗಿ ರಾಜಕೀಯ ವಿಚಾರಗಳು ಪ್ರಸ್ತಾಪವಾಗುವ ಸಂಭವವೇ ಅಧಿಕ. ಈಗಾಗಲೇ ಚುನಾವಣಾ ತಯಾರಿ ಹಾಗೂ ಪ್ರಚಾರವನ್ನು ರಾಜಕೀಯ ಪಕ್ಷಗಳು ಆರಂಭಿಸಿವೆ. ಕೆಲವರಿಗಂತೂ ಸದನಕ್ಕಿಂತ ಕ್ಷೇತ್ರದಲ್ಲಿ ಕಾರ್ಯಕ್ರಮಗಳೇ ಮುಖ್ಯವಾಗಿವೆ.

ಮುಂಗಾರು ಮಳೆಯಿಂದ ಉಂಟಾದ ಮನೆ, ಬೆಳೆ ಹಾನಿಗೆ ಇನ್ನೂ ಸಮರ್ಪಕ ಪರಿಹಾರ ನೀಡಿಲ್ಲ ಎಂಬ ವಿಚಾರ ಸದನದಲ್ಲಿ ಪ್ರತಿಧ್ವನಿಸಲಿದೆ. ಈ ಬಾರಿ ಬಹುತೇಕ ಬೆಳೆಗಳು ಮಳೆಯಿಂದ ಸಾಕಷ್ಟು ಹಾನಿಗೀಡಾಗಿದ್ದು, ಪರಿಹಾರಕ್ಕೆ ಪಕ್ಷ ಬೇಧ ಮರೆತು ಶಾಸಕರು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ.

ಆನೆ ಹಾಗೂ ಚಿರತೆ ಹಾವಳಿ ಬಹುತೇಕ ಕಡೆಗಳಲ್ಲಿ ಸಾಮಾನ್ಯವಾಗಿದ್ದು, ಈ ವಿಚಾರವು ಸದನದಲ್ಲಿ ಗಂಭೀರ ಸ್ವರೂಪ ಪಡೆಯಲಿದೆ. ಅರಣ್ಯದಂಚಿನ ಗ್ರಾಮಗಳಲ್ಲಿ ಆನೆ ಹಾವಳಿ ಹೆಚ್ಚಾಗಿದ್ದರೆ, ಬೆಂಗಳೂರು ಸೇರಿದಂತೆ ಹಲವು ನಗರ, ಪಟ್ಟಣಗಳಲ್ಲಿ ಚಿರತೆ ಹಾವಳಿ ಕಂಡುಬರುತ್ತಿದೆ. ಕಾಡುಪ್ರಾಣಿಗಳ ನಿಯಂತ್ರಣ ಹಾಗೂ ಪರಿಹಾರ ಹೆಚ್ಚಳಕ್ಕೆ ಶಾಸಕರು ಆಗ್ರಹಿಸುವ ಸಾಧ್ಯತೆಗಳಿವೆ.

ಭಾರೀ ಮಳೆಯಿಂದ ನಗರ ಪಟ್ಟಣ ಎಂಬ ವ್ಯತ್ಯಾಸವಿಲ್ಲದೆ ರಾಜ್ಯದ ಹಲವೆಡೆ ರಸ್ತೆಗಳು ಹಾಳಾಗಿವೆ. ಕೆಲವೆಡೆ ನದಿಗಳಿಗೆ ಅಡ್ಡಲಾಗಿ ನಿರ್ಮಿಸಿದ ಸೇತುವೆಗಳು ಕುಸಿದು ಬಿದ್ದಿವೆ. ಈ ವಿಚಾರವನ್ನು ಆದ್ಯತೆ ಮೇಲೆ ಸದನದಲ್ಲಿ ಪ್ರಸ್ತಾಪಿಸುವ ಸಾಧ್ಯೆತಗಳಿವೆ. ದುಸ್ಥಿತಿಯಲ್ಲಿರುವ ರಸ್ತೆಗಳಿಂದ ಉಂಟಾಗುತ್ತಿರುವ ಅಪಘಾತ, ಸಾರ್ವಜನಿಕರು ಎದುರಿಸುತ್ತಿರುವ ಸಂಕಷ್ಟಗಳು ಸದನದಲ್ಲಿ ಪ್ರತಿಧ್ವನಿಸಲಿವೆ.

ಶ್ರದ್ದಾ ಮಾದರಿಯಲ್ಲಿ ಮತ್ತೆರಡು ಹತ್ಯೆ, ಸಮಾಜವನ್ನು ಬೆಚ್ಚಿಬೀಳಿಸುತ್ತಿರುವ ವಿಕೃತ ಕೊಲೆಗಳು..!

ಮಹಾರಾಷ್ಟ್ರ ಮತ್ತೆ ಗಡಿ ವಿವಾದವನ್ನು ಮುನ್ನೆಲೆಗೆ ತಂದಿರುವ ವಿಚಾರ ಉಭಯ ಸದನಗಳಲ್ಲಿ ಗಂಭೀರ ಚರ್ಚೆಗೆ ಅವಕಾಶ ಮಾಡಿಕೊಡಲಿದೆ. ಕಳೆದ ಬಾರಿಯೂ ಈ ವಿಚಾರ ಪ್ರಸ್ತಾಪವಾಗಿ ನಿರ್ಣಯಗಳನ್ನು ಕೈಗೊಳ್ಳಲಾಗಿತ್ತು. ಪದೇ ಪದೇ ಗಡಿ ಭಾಗದಲ್ಲಿ ಕನ್ನಡಿಗರ ಸಹನೆ ಕೆಣಕುತ್ತಿರುವ ವಿಚಾರಕ್ಕೆ ಅಂತ್ಯವಾಡಲು ಸರ್ಕಾರವನ್ನು ಆಗ್ರಹಿಸುವ ಸಾಧ್ಯತೆಗಳು ಹೆಚ್ಚಾಗಿವೆ.

ಮತದಾರರ ಪಟ್ಟಿಯಲ್ಲಿ ಹಲವರ ಹೆಸರು ಕೈಬಿಟ್ಟಿರುವ ವಿಚಾರವೂ ಸದನಲ್ಲಿ ಪ್ರಸ್ತಾಪವಾಗಿ ಆಡಳಿತ ಮತ್ತು ಪ್ರತಿ ಪಕ್ಷಗಳ ನಡುವೆ ವಾಕ್‍ಸಮರಕ್ಕೆ ವೇದಿಕೆಯಾಗವ ಸಂಭವವಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೀಸಲಾತಿ ಹೆಚ್ಚಳ ನಂತರ ಒಕ್ಕಲಿಗ ಹಾಗೂ ಪಂಚಮಸಾಲಿ ಸಮುದಾಯಗಳು ಮೀಸಲಾತಿ ಹೆಚ್ಚಳದ ವಿಚಾರದಲ್ಲಿ ಸರ್ಕಾರದ ಮೇಲೆ ಒತ್ತಡ ತರುತ್ತಿವೆ. ಜತೆಗೆ ಒಳ ಮೀಸಲಾತಿ ವಿಚಾರವೂ ಪ್ರಸ್ತಾಪವಾಗುತ್ತಿದೆ.

ಅ„ವೇಶನದಲ್ಲಿ ಮೀಸಲಾತಿ ವಿಚಾರವು ಗಂಭೀರ ಚರ್ಚೆಗೆ ಎಡೆಮಾಡಿಕೊಡಲಿದೆ. ಹೀಗೆ ಹಲವು ವಿಚಾರಗಳಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಗ್ವಾದಗಳು ನಡೆಯುವ ಸಂಭವವೇ ಹೆಚ್ಚಾಗಿದೆ.
ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳು, ಉತ್ತರ ಕರ್ನಾಟಕ ಭಾಗದ ಮುಳಗಡೆ ಪ್ರದೇಶಗಳ ಪುನರ್ ವಸತಿ, ಮೂಲಸೌಕರ್ಯಗಳ ಅಭಿವೃದ್ಧಿ ವಿಚಾರಗಳು ಹೆಚ್ಚು ಚರ್ಚೆಗೆ ಬರಲಿವೆ. ಮಂಗಳೂರು ಸ್ಪೋಟ ಪ್ರಕರಣ ಸೇರಿದಂತೆ ರಾಜ್ಯದಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ವಿಚಾರವೂ ಚರ್ಚೆಗೆ ಎಡೆಮಾಡಿಕೊಡುವ ಸಾಧ್ಯತೆಗಳಿವೆ.

ಒಟ್ಟಾರೆ ಬೆಳಗಾವಿಯ ಚಳಿಗಾಲದ ಅಧಿವೇಶನವು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪಗಳು ಕೇಳಿ ಬರಲಿದ್ದು, ಸದನದಲ್ಲಿ ಕಾವೇರಿದ ವಾತಾವರಣ ನಿರ್ಮಾಣಕ್ಕೆ ಅವಕಾಶ ಕಲ್ಪಿಸುವ ಸಂಭವವಿದೆ.

#WinterSession, #SuvarnaSoudha, #KarnatakaAssemblySession, #ಅಧಿವೇಶನ, #BelagaviSession, #ಸುವರ್ಣಸೌಧ, #ಚಳಿಗಾಲದಅಧಿವೇಶನ,

Articles You Might Like

Share This Article