ಬೆಳಗಾವಿ, ಡಿ.26- ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದ್ದ ಶಾಲಾ ಮೈದಾನಕ್ಕೆ ವಾಹನವೊಂದು ನುಗ್ಗಿದ್ದನ್ನು ಪ್ರಶ್ನಿಸಿದ್ದಕ್ಕೆ ಚಾಲಕ ಏಕಾಏಕಿ ಇಬ್ಬರು ಯುವಕರಿಗೆ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಇಂದು ಮುಂಜಾನೆ ನಡೆದಿದೆ.
ಶಿಂದೊಳ್ಳಿ ಗ್ರಾಮದ ಬಸವರಾಜ್ ಬೆಳಗಾಂವ್ಕರ್(22) ಮತ್ತು ಗಿರೀಶ್ ಗಣ್ಣವರ (22) ಕೊಲೆಯಾದ ದುರ್ದೈವಿಗಳು.
ಇಲ್ಲಿನ ಹೊರವಲಯದ ಶಿಂದೊಳ್ಳಿ ಗ್ರಾಮದ ಸರ್ಕಾರಿ ಶಾಲೆ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ ರಾತ್ರಿ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಮೈದಾನಕ್ಕೆ ಏಕಾಏಕಿ ವಾಹನವೊಂದು ನುಗ್ಗಿದೆ.
ಮೈದಾನದಲ್ಲಿ ವಾಹನ ನುಗ್ಗಿಸಿದ್ದನ್ನು ಗಮನಿಸಿದ ಯುವಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅದರಿಂದ ಸಿಟ್ಟಾದ ಚಾಲಕ ವಾಹನದಿಂದ ಕೆಳಗಿಳಿದು ಯುವಕರೊಂದಿಗೆ ಜಗಳವಾಡಿ ಸ್ಥಳದಿಂದ ತೆರಳಿದ್ದಾನೆ.
ಸುವರ್ಣ ವಿಧಾನಸೌಧದಲ್ಲಿ ಕೋವಿಡ್ ಲಸಿಕಾ ಕೇಂದ್ರ ಆರಂಭ
ಅಷ್ಟಕ್ಕೆ ಸುಮ್ಮನಾಗದ ವಾಹನದ ಚಾಲಕ ಮುಂಜಾನೆ ಮತ್ತೆ ಶಾಲಾ ಮೈದಾನದ ಬಳಿ ಬಂದಿದ್ದಾನೆ. ಯುವಕರ ಗುಂಪು ಇರುವುದನ್ನು ಗಮನಿಸಿ ಸಮೀಪ ಹೋಗಿ ಮತ್ತೆ ಅವರೊಂದಿಗೆ ಗಲಾಟೆ ಮಾಡಿದ್ದಾನೆ. ಒಂದು ಹಂತದಲ್ಲಿ ಜಗಳ ವಿಕೋಪಕ್ಕೆ ಹೋದಾಗ ಆ ವ್ಯಕ್ತಿ ಏಕಾಏಕಿ ಇಬ್ಬರು ಯುವಕರಿಗೆ ಚಾಕುವಿನಿಂದ ಮನಬಂದಂತೆ ಇರಿದಿದ್ದಾನೆ.
ಇರಿತದಿಂದ ಗಂಭೀರ ಗಾಯಗೊಂಡ ಇಬ್ಬರು ಯುವಕರನ್ನು ಬಿಮ್ಸ್ ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ. ಸುದ್ದಿ ತಿಳಿದು ಡಿಸಿಪಿ ರವೀಂದ್ರ ಗಡಾಡಿ, ಎಸಿಪಿ ನಾರಾಯಣ ಬರಮನಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚೀನಾದಿಂದ ಬಂದ ಆಗ್ರಾ ಮೂಲದ ವ್ಯಕ್ತಿಯಲ್ಲಿ ಬಿಎಫ್.7 ವೈರಸ್ ಲಕ್ಷಣ ಪತ್ತೆ
ಕೆಎಸ್ಆರ್ಪಿ ನಿಯೋಜನೆ:
ಇಬ್ಬರ ಮೃತದೇಹಗಳನ್ನು ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದ್ದು, ಆಸ್ಪತ್ರೆ ಆವರಣದಲ್ಲಿ ಕೊಲೆಯಾದ ಯುವಕರ ಸಂಬಂಕರು, ಕುಟುಂಬಸ್ಥರು, ಸ್ನೇಹಿತರು ನೆರದಿದ್ದು, ಮುಂಜಾಗ್ರತಾ ಕ್ರಮವಾಗಿ ಕೆಎಸ್ಆರ್ಪಿ ತುಕಡಿಯನ್ನು ನಿಯೋಜಿಸಲಾಗಿದೆ. ಜಿಲ್ಲಾಸ್ಪತ್ರೆ ತುರ್ತು ಘಟಕದ ಎದುರು ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಮಾಳಮಾರುತಿ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
Belgaum, two youths, murder,