ಬೆಂಗಳೂರು, ಫೆ.19- ತುಮಕೂರು ರಸ್ತೆ ಫ್ಲೈ ಓವರ್ ಕಳಪೆ ಕಾಮಗಾರಿಯಿಂದ ಶಿಥಿಲಗೊಂಡು ದುರಸ್ತಿಯಾಗುತ್ತಿರುವ ಬೆನ್ನಲ್ಲೇ ಗೊರಗುಂಟೆಪಾಳ್ಯ ಬಳಿಯ ಎಂಇಎಸ್ ಫ್ಲೈ ಓವರ್‍ನಲ್ಲಿ ಬೇರಿಂಗ್ ಬಿರುಕು ಕಾಣಿಸಿಕೊಂಡಿದೆ. ಕಳೆದ ಐದು ವರ್ಷಗಳ ಹಿಂದಷ್ಟೇ ನಿರ್ಮಿಸಿರುವ ಈ ಮೇಲ್ಸೇತುವೆ ಬೇರಿಂಗ್‍ನಲ್ಲಿ ಬಿರುಕು ಕಾಣಿಸಿಕೊಂಡಿದ್ದು, ವಾಹನ ಸವಾರರಲ್ಲಿ ಆತಂಕ ಎದುರಾಗಿದೆ.
2017ರಲ್ಲಿ ರೈಲ್ವೆ ಇಲಾಖೆಯಿಂದ ಎಂಇಎಸ್ ಫ್ಲೈ ಓವರ್ ನಿರ್ಮಿಸಲಾಗಿತ್ತು. 2020ರಲ್ಲಿ ನಿರ್ವಹಣೆಗೆಂದು ಸೇತುವೆಯನ್ನು ಬಿಬಿಎಂಪಿಗೆ ರೈಲ್ವೆ ಇಲಾಖೆ ಹಸ್ತಾಂತರಿಸಿತ್ತು. 2021ರಲ್ಲಿ ಬೇರಿಂಗ್‍ನಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲಾಗಿತ್ತು. ಬೇರಿಂಗ್ ಸವೆದಿರುವುದು ಮತ್ತು ಕಾಂಕ್ರಿಟ್ ಎಕ್ಸ್‍ಪೆನ್ಷನ್ ಜೋಡಣೆಯಲ್ಲಿ ಬಿರುಕು ಉಂಟಾಗಿರುವುದು ಕಂಡುಬಂದಿದೆ. ಕೂಡಲೇ ಈ ಎರಡೂ ದೋಷಗಳನ್ನು ಸರಿಪಡಿಸದಿದ್ದರೆ ಅಪಾರ ಪ್ರಮಾಣದ ಹಾನಿ ಎದುರಿಸಬೇಕಾಗುತ್ತದೆ ಎಂದು ವರದಿ ನೀಡಲಾಗಿದೆ.
ಬಿಬಿಎಂಪಿ ನಡೆಸಿದ ಗುಣಮಟ್ಟದ ಮೌಲ್ಯಮಾಪನದಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. ಗುಣಮಟ್ಟ ಮೌಲ್ಯಮಾಪನದಲ್ಲಿ ವಾಹನಗಳ ಓಡಾಟಕ್ಕೆ ಈ ಫ್ಲೈ ಓವರ್ ಯೋಗ್ಯವಿಲ್ಲ ಎಂದು ತಿಳಿದುಬಂದಿದೆ. ತಕ್ಷಣವೇ ವರದಿ ತಯಾರಿಸಿ ದುರಸ್ತಿ ನಡೆಸುವಂತೆ ರೈಲ್ವೆ ಇಲಾಖೆಗೆ ಬಿಬಿಎಂಪಿ ಪತ್ರ ಬರೆದಿದೆ. ಬಳ್ಳಾರಿ ರಸ್ತೆಯಿಂದ ಬಂದು ತುಮಕೂರು ರಸ್ತೆಗೆ ಕನೆಕ್ಟ್ ಆಗುವ ರಿಂಗ್‍ರಸ್ತೆ ಪ್ರಮುಖ ಮೇಲ್ಸೇತುವೆ ಇದಾಗಿದ್ದು, ಈ ಫ್ಲೈ ಓವರ್ ಇಲ್ಲದಿದ್ದರೆ ಬಳಸಿಕೊಂಡು ತುಮಕೂರು ರಸ್ತೆ ಅಥವಾ ಬಳ್ಳಾರಿ ರಸ್ತೆಗೆ ಬರಬೇಕಾದ ಅನಿವಾರ್ಯತೆ ಎದುರಾಗಿದೆ.
ತುಮಕೂರು ರಸ್ತೆ ಪೀಣ್ಯ ಬಳಿಯ ಫ್ಲೈ ಓವರ್‍ನಲ್ಲೂ ಇದೇ ರೀತಿ ಸಮಸ್ಯೆಯಾಗಿ ಕಳೆದ ಒಂದು ತಿಂಗಳಿನಿಂದ ಸಾರ್ವಜನಿಕರ ಪ್ರಯಾಣಕ್ಕೆ ತೀವ್ರ ಅಡಚಣೆಯಾಗಿದೆ. ಮೇಲ್ಸೇತುವೆ ಭಾರೀ ವಾಹನಗಳ ಓಡಾಟಕ್ಕೆ ಯೋಗ್ಯವಲ್ಲ ಎಂದು ತಜ್ಞರು ವರದಿ ನೀಡಿದ್ದ ಹಿನ್ನೆಲೆಯಲ್ಲಿ ಲಘು ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.
ಈ ಮೇಲ್ಸೇತುವೆ ಕಳಪೆ ಕಾಮಗಾರಿಯಿಂದ ಉಂಟಾದ ತೊಂದರೆ ಹಿನ್ನೆಲೆಯಲ್ಲಿ ಪ್ರತಿದಿನ ಲಕ್ಷಾಂತರ ಪ್ರಯಾಣಿಕರಿಗೆ ಸುಗಮ ಸಂಚಾರಕ್ಕೆ ಅಡಚಣೆಯಾಗಿದೆ. ಇದನ್ನು ಸಂಪೂರ್ಣ ನೆಲಸಮಗೊಳಿಸಿ ಹೊಸ ಮೇಲ್ಸೇತುವೆ ನಿರ್ಮಿಸಬೇಕಾಗುತ್ತದೆ ಎಂದು ಹೇಳಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಕುರಿತು ಕೇಂದ್ರ ಸರ್ಕಾರಕ್ಕೆ ಪತ್ರವನ್ನು ಕೂಡ ಬರೆದಿದ್ದಾರೆ.
ತಾತ್ಕಾಲಿಕವಾಗಿ ಲಘು ವಾಹನಗಳ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಈ ಬೆನ್ನಲ್ಲೇ ಗೊರಗುಂಟೆಪಾಳ್ಯದ ಬಳಿಯ ಎಂಇಎಸ್ ಫ್ಲೈ ಓವರ್‍ನ ಬೇರಿಂಗ್‍ನಲ್ಲಿ ಬಿರುಕು ಕಾಣಿಸಿಕೊಂಡಿರುವುದು ವಾಹನಗಳ ಓಡಾಟಕ್ಕೆ ಮತ್ತೆ ತೀವ್ರ ತೊಂದರೆಯಾಗುವ ಸಾಧ್ಯತೆ ಇದೆ.
