ಬೆಂಗಳೂರು, ಆ.12- ಮೂವತ್ತು ವರ್ಷಗಳ ಹಿಂದೆ ಕನಸಿನ ರಾಣಿ ಮಾಲಾಶ್ರೀ ಹಾಗೂ ಸುನೀಲ್ ನಟಿಸಿದ್ದ ಸೂಪರ್ ಡೂಪರ್ ಹಿಟ್ ಚಿತ್ರವಾದ ಬೆಳ್ಳಿ ಕಾಲುಂಗರ ಚಿತ್ರದ ಶೀರ್ಷಿಕೆಯಡಿ ನಿರ್ಮಾಪಕ ಸಾ.ರಾ.ಗೋವಿಂದು ಅವರು ಮತ್ತೊಮ್ಮೆ ಬೆಳ್ಳಿಕಾಲುಂಗರ ಚಿತ್ರವನ್ನು ನಿರ್ಮಿಸುತ್ತಿದ್ದು, ಇಂದು ನಡೆದ ಮುಹೂರ್ತ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದರು.
1992ರಲ್ಲಿ ಬಿಡುಗಡೆಯಾಗಿದ್ದ ಬೆಳ್ಳಿ ಕಾಲುಂಗರ ಚಿತ್ರವನ್ನು ಕೆ.ವಿ.ರಾಜು ಕಥೆ ಬರೆದು ನಿರ್ದೇಶಿಸಿದ್ದು ಚಿತ್ರ ಯಶಸ್ವಿಯಾಗಿತ್ತು. ಈಗ ಅದೇ ಹೆಸರಿನಲ್ಲಿ 30 ವರ್ಷಗಳ ಮತ್ತೊಂದು ಸಿನಿಮಾ ಸೆಟ್ಟೇರಿದೆ. ಈ ಚಿತ್ರದಲ್ಲಿ ಕರ್ನಾಟಕ ರತ್ನ ಡಾ.ರಾಜ್‍ಕುಮಾರ್ ಅವರ ಮೊಮ್ಮಗಳು ಧನ್ಯ ರಾಮ್ ನಾಯಕಿಯಾಗಿ ಅಭಿನಯಿಸುತ್ತಿದ್ದು, ಎಚ್. ವಾಸು ನಿರ್ದೇಶಿಸುತ್ತಿದ್ದಾರೆ. ಸಾ.ರಾ.ಗೋವಿಂದು ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಕಂಠೀರವ ಸ್ಟುಡಿಯೋದಲ್ಲಿ ಇಂದು ನಡೆದ ಮುಹೂರ್ತದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳ್ಳಿಕಾಲುಂಗರ ಚಿತ್ರಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದರು. ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದರು. ರಾಘವೇಂದ್ರ ರಾಜ್‍ಕುಮಾರ್ ಕ್ಯಾಮರಾಗೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಬೆಳ್ಳಿ ಕಾಲುಂಗುರ ಮುಹೂರ್ತಕ್ಕೆ ಬರಬೇಕೆಂದು ಸಾ.ರಾ.ಗೋವಿಂದು ಒತ್ತಾಯ ಮಾಡಿದ್ದರು. ಅವರು ನಮ್ಮ ಜಿಲ್ಲೆಯವರು ಅವರ ಮೇಲಿನ ಪ್ರೀತಿಗಾಗಿ ಬಂದಿದ್ದೇನೆ ಎಂದರು.
10.30ರ ನಂತರ ರಾಹುಕಾಲ ಇದೆ, ಅದಷ್ಟು ಬೇಗ ಬನ್ನಿ ಅಂತ ನನಗೆ ಹೇಳಿದ್ದರು.
ಈ ಸಿನಿಮಾ 30 ವರ್ಷಗಳ ಹಿಂದೆ ತೆರೆಕಂಡು ಯಶಸ್ವಿಯಾಗಿದೆ. ಈಗ ಮತ್ತೆ ಈ ಸಿನಿಮಾ ಬರುತ್ತಿದೆ. ಚಿತ್ರದಲ್ಲಿ ಸಮರ್ಥ್ ಹಾಗೂ ಧನ್ಯಾ ನಾಯಕ-ನಾಯಕಿಯಾಗಿ ಅಭಿನಯಿಸಿದ್ದಾರೆ. ಧನ್ಯಾ ಅವರು ರಾಜ್‍ಕುಮಾರ್ ಮನೆತನದ ಕುಡಿ. ರಾಜ್‍ಕುಮಾರ್ ಅತ್ಯುತ್ತಮ ಕಲಾವಿದರು, ಅವರ ರಕ್ತದಲ್ಲೇ ಕಲೆ ಎಂಬುದು ಇತ್ತು. ಈ ದೇಶ ಕಂಡ ಅಪ್ರತಿಮ
ನಟರ ಮೊಮ್ಮಗಳು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಹಾಜರಿದ್ದ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಕುರಿತು ಮಾತನಾಡಿದ ಸಿದ್ದರಾಮಯ್ಯ ಅವರು, ವಾಟಾಳ್ ನಾಗರಾಜ್ ನನಗಿಂತ ದೊಡ್ಡವರು.ಆದರೆ, ಅವರು ವಯಸ್ಸನ್ನು ಯಾರಿಗೂ ಹೇಳುವುದಿಲ್ಲ. ನಾನು ವಾಟಾಳ್ ಅವರ ಭಾಷಣ ಕೇಳಲು ಟೌನ್‍ಹಾಲ್‍ಗೆ ಹೋಗುತ್ತಿದ್ದೆ ಎಂದರು.
ಪುನೀತ್ ರಾಜ್ ಕುಮಾರ್ ಅಪಾರ ಜನಪ್ರಿಯತೆ ಕಂಡಿದ್ದ ನಟ ಎಂದ ಸಿದ್ದರಾಮಯ್ಯ, ಸಾ.ರಾ. ಗೋವಿಂದು ನಾನು, ವಾಟಾಳ್ ನಾಗರಾಜ್, ಎಲ್ಲಾ ಒಂದೇ ಜಿಲ್ಲಾಯವರು. ಡಾ. ರಾಜ್‍ಕುಮಾರ್ ಕೂಡ ನಮ್ಮ ಜಿಲ್ಲೆಯವರೇ ಆಗಿದ್ದರು ಎಂದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕ್ಲಾಪ್ ಮಾಡಿದ ಎಲ್ಲಾ ಚಿತ್ರಗಳು ಯಶಸ್ವಿಯಾಗುತ್ತಿರುವುದು ಕಾಕತಾಳಿಯವಷ್ಟೆ ಎಂದರು.