BIG NEWS : ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ಅರೆಸ್ಟ್

Social Share

ಕೋಲ್ಕತ್ತಾ,ಜು.23-ಸರ್ಕಾರಿ ಶಾಲೆಗಳ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಪಟ್ಟಂತೆ 20 ಕೋಟಿ ರೂ. ನಗದು ಪತ್ತೆಯಾದ ದಿನದ ಒಳಗಾಗಿ ಜಾರಿ ನಿರ್ದೇಶನಾಲಯ ಪಶ್ಚಿಮ ಬಂಗಾಳದ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಾರ್ಥ ಚಟರ್ಜಿ ಹಾಗೂ ಅವರ ಆಪ್ತೆ ಅರ್ಪಿತ ಮುಖರ್ಜಿ ಅವರನ್ನು ಬಂಧಿಸಿದೆ.

ಶನಿವಾರ ಬೆಳಗ್ಗೆ ಜಾರಿನಿರ್ದೇಶನಾಲಯದ 8ಕ್ಕೂ ಹೆಚ್ಚು ಅಧಿಕಾರಿಗಳು ಸಚಿವ ಪಾರ್ಥ ಅವರನ್ನು ವಿಚಾರಣೆಗೊಳಪಡಿಸಿದರು. ಸತತ ವಿಚಾರಣೆ ಬಳಿಕ ತೃಪ್ತಿದಾಯಕ ಉತ್ತರಗಳು ದೊರೆಯದ ಕಾರಣ ಸಚಿವರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ನಿನ್ನೆ ಜಾರಿನಿರ್ದೇಶನಾಲಯ ಅರ್ಪಿತ ಚಟರ್ಜಿ ಹಾಗೂ ಶಿಕ್ಷಣ ಇಲಾಖೆಯ ರಾಜ್ಯ ಸಚಿವರೊಬ್ಬರು ಹಾಗೂ ಶಾಸಕರ ಮನೆ ಮೇಲೂ ದಾಳಿ ನಡೆಸಲಾಗಿತ್ತು. ಅರ್ಪಿತ ಚಟರ್ಜಿ ಅವರ ಮನೆಯಲ್ಲಿ 2 ಸಾವಿರ ಹಾಗೂ 500 ರೂ. ಮುಖಬೆಲೆಯ ನಗದಿನ ರಾಶಿಯೇ ಪತ್ತೆಯಾಗಿತ್ತು.

ತೃಣಮೂಲ ಕಾಂಗ್ರೆಸ್‍ನಿಂದ ಬೆಹಾಲ್‍ಪಶ್ಚಿಮ್ ಕ್ಷೇತ್ರದಿಂದ ಶಾಸಕರಾಗಿರುವ ಪಾರ್ಥ ಈ ಮೊದಲು ಮಮತಾ ಬ್ಯಾನರ್ಜಿ ಅವರ ಸಂಪುಟದಲ್ಲಿ ಸಂಸದೀಯ ವ್ಯವಹಾರಗಳ ಸಚಿವರಾಗಿದ್ದರು. 2014ರಿಂದ 2021ರವರೆಗೂ ಶಿಕ್ಷಣ ಸಚಿವರಾಗಿ ಕೆಲಸ ಮಾಡಿದ್ದರು.

ದಕ್ಷಿಣ ಕೋಲ್ಕತ್ತಾದ ಪ್ರಭಾವಿ ನಾಯಕರಾಗಿದ್ದ ಪಾರ್ಥ 2006ರಿಂದ 11ರ ನಡುವೆ ಪಶ್ಚಿಮ ಬಂಗಾಳದ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿದ್ದರು. 2016ರಲ್ಲಿ ಮಮತಾ ಬ್ಯಾನರ್ಜಿ ಅವರ ಸರ್ಕಾರದಲ್ಲಿ ಉನ್ನತ ಶಿಕ್ಷಣ ಮತ್ತು ಶಾಲಾ ಶಿಕ್ಷಣ, ಸಾರ್ವಜನಿಕ ಉದ್ದಿಮೆ, ಐಟಿಬಿಟಿ ಸೇರಿದಂತೆ ಹಲವು ಖಾತೆಗಳನ್ನು ನಿಭಾಯಿಸಿದ್ದಾರೆ.

ಕೋಲ್ಕತ್ತಾ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿಧರರಾದ ಪಾರ್ಥದುರ್ಗ ಪೂಜಾ ಸಮಿತಿಯ ಅಧ್ಯಕ್ಷರೂ ಕೂಡ ಆಗಿದ್ದಾರೆ. ಕೋಲ್ಕತ್ತಾದಲ್ಲಿ ಸಾವಿರಾರು ದುರ್ಗಪೂಜಾ ಸಮಿತಿಗಳು ಸಕ್ರಿಯವಾಗಿವೆ. ಸರ್ಕಾರಿ ಶಾಲೆಗಳ ಶಿಕ್ಷಕರ ನೇಮಕಾತಿಗಾಗಿ ಶಾಲಾ ಸೇವಾ ಆಯೋಗ ನಡೆಸಿದ ಪರೀಕ್ಷೆಯಲ್ಲಿ ಭಾರೀ ಅವ್ಯವಹಾರ ನಡೆಸಲಾಗಿದೆ ಎಂದು ಆರೋಪಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ನಿನ್ನೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದಾಗ ಸಚಿವರ ಆಪ್ತೆಯ ಮನೆಯಲ್ಲಿ 20 ಕೋಟಿ ರೂ. ಪತ್ತೆಯಾಗಿದೆ. ಸಚಿವರ ಬಂಧನದ ಬಳಿಕ ಇಬ್ಬರು ವೈದ್ಯರು ಕೋಲ್ಕತ್ತಾದ ನಾಟ್ಕಾಲದಲ್ಲಿರುವ ಸಚಿವರ ಮನೆಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸಿದರು. ಈ ವೇಳೆ ಅವರ ಆರೋಗ್ಯ ಸರಿ ಇರಲಿಲ್ಲ ಎಂದು ಹೇಳಲಾಗಿದೆ.

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿ, ಶಿಕ್ಷಕರ ನೇಮಕಾತಿ ಹಗರಣ ಕೇವಲ ಸಚಿವ ಪಾರ್ಥ ಅವರಿಗಷ್ಟೇ ಸೀಮಿತವಾಗಿಲ್ಲ. ಸರ್ಕಾರದ ಸಹಭಾಗಿತ್ವವಿದೆ. ಇದರ ಬಗ್ಗೆ ಇನ್ನಷ್ಟು ತೀವ್ರ ತನಿಖೆ ಅಗತ್ಯವಿದೆ ಎಂದು ಹೇಳಿದೆ.
ಹಗರಣದ ಕುರಿತು ಸಿಬಿಐ ಕೂಡ ತನಿಖೆ ಆರಂಭಿಸಿದೆ.

Articles You Might Like

Share This Article