ಬೆಂಗಳೂರು : ದುಬೈನಿಂದ ಆಗಮಿಸಿದ ವಿಮಾನದಲ್ಲಿ ಕಳ್ಳಸಾಗಾಣಿಕೆ ಮಾಡುತ್ತಿದ್ದ ಸುಮಾರು 1.37 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಬಿಸ್ಕತ್‍ಗಳನ್ನು ಕೇಂದ್ರ ಅಬಕಾರಿ ತೆರಿಗೆ ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದುಬೈನಿಂದ ಮಂಗಳವಾರ ಬೆಳಗ್ಗೆ 10.30ಕ್ಕೆ ಆಗಮಿಸಿದ ಇಂಡಿಗೋ 6ಇ096 ವಿಮಾನವನ್ನು ತಪಾಸಣೆಗೊಳಪಡಿಸಿದಾಗ ಅದರಲ್ಲಿ ಚಿನ್ನ ತುಂಬಿದ ಬ್ಯಾಗ್ ಪತ್ತೆಯಾಗಿದೆ.
24 ಚಿನ್ನದ ಸ್ವರೂಪದಲ್ಲಿ 2.8 ಕೆಜಿಯಷ್ಟು ತೂಕದ ಚಿನ್ನವನ್ನು ದುಬೈನಿಂದ ಕಳ್ಳಸಾಗಾಣಿಕೆ ಮೂಲಕ ತರಲಾಗಿದೆ. ವಿಮಾನ ನಿಲ್ದಾಣದಲ್ಲಿ ಬಿಗಿ ತಪಾಸಣೆ ಇದ್ದರಿಂದ ಬ್ಯಾಗ್ ಅನ್ನು ತೆಗೆದುಕೊಂಡು ಹೋಗಲಾರದೆ ಸೀಟಿನ ಕೆಳಗೆ ಅಡಗಿಸಿಟ್ಟಿರಬಹುದು ಎಂದು ಹೇಳಲಾಗಿದೆ ಆಥವಾ ಇನ್ನೊಂದು ಗುಂಪು ಆ ಬ್ಯಾಗ್ ಅನ್ನು ತೆಗೆದುಕೊಂಡು ಹೋಗಲು ಅನುಕೂಲವಾಗುವಂತೆ ಬ್ಯಾಗ್ ಅಡಗಿಸಿಟ್ಟಿರುವ ಸಾಧ್ಯತೆಗಳ ಬಗ್ಗೆಯೂ ಅನುಮಾನಗಳು ವ್ಯಕ್ತವಾಗಿವೆ.
ಪ್ರಯಾಣಿಕರ ಸೀಟಿನ ಕೆಳಗೆ ಎರಡು ಕಂಬಿಗಳನ್ನು ಹೊಂದಾಣಿಕೆ ಮಾಡಿ ಬ್ಯಾಗ್ ಅನ್ನು ವ್ಯವಸ್ಥಿತವಾಗಿ ಮುಚ್ಚಿಡಲಾಗಿತ್ತು. ಅಧಿಕಾರಿಗಳು ಆ ಕಂಬಿಗಳನ್ನು ಕತ್ತರಿಸಿ ಬೂದು ಬಣ್ಣದ ಬ್ಯಾಗ್‍ನಲ್ಲಿ ಅಡಗಿಸಿಟ್ಟಿದ್ದ ಬ್ಯಾಗ್ ಅನ್ನು ಹೊರ ತೆಗೆದು ಚಿನ್ನವನ್ನು ವಶ ಪಡಿಸಿಕೊಂಡಿದ್ದಾರೆ.
ಅಂತರಾಷ್ಟ್ರೀಯ ಮಟ್ಟದ ಕಳ್ಳಸಾಗಾಣಿಕೆದಾರರ ಗುಂಪು ವಿದೇಶಿ ವಿಮಾನಗಳಲ್ಲಿ ವ್ಯವಸ್ಥಿತವಾಗಿ ಚಿನ್ನ ಕಳ್ಳ ಸಾಗಾಣಿಕೆ ಮಾಡುತ್ತಿರುವ ಅನುಮಾನಗಳು ಈ ಪ್ರಕರಣದಿಂದ ಸ್ಪಷ್ಟವಾಗುತ್ತಿದೆ. ಅಬಕಾರಿ ಅಕಾರಿಗಳು ವಿಮಾನದಲ್ಲಿ ಪ್ರಯಾಣಿಸಿದ ಎಲ್ಲ ಪ್ರಯಾಣಿಕರ ಪಟ್ಟಿ ಪಡೆದು ಪರಿಶೀಲನೆ ಆರಂಭಿಸಿದ್ದಾರೆ. ಜೊತೆಗೆ ವಿಮಾನ ನಿಲ್ಲಿಸಿದ ವೇಳೆ ಯಾರೆಲ್ಲಾ ಒಳಗೆ ಬಂದು ಹೋಗಿದ್ದಾರೆ ಎಂಬ ಪರಿಶೀಲನೆ ಕೂಡ ನಡೆಸುತ್ತಿದ್ದಾರೆ.
