ಬೆಂಗಳೂರು,ಮಾ.19- ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ನಾಳೆ ನಗರದಲ್ಲಿ ಆಟೋ ಚಾಲಕರು ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಲು ಮುಂದಾಗಿರುವುದರಿಂದ ಆಟೋ ಸೇವೆ ವ್ಯತ್ಯಯವಾಗಲಿದೆ.
ಅಂದಾಜು 2 ಲಕ್ಷಕ್ಕೂ ಹೆಚ್ಚು ಆಟೋ ಚಾಲಕರು ನಾಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ತೀರ್ಮಾನಿಸಿರುವುದರಿಂದ ಪ್ರಯಾಣಿಕರಿಗೆ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಪ್ರತಿಭಟನೆಯನ್ನು ಕೈಬಿಡ ಬೇಕೆಂದು ಸರ್ಕಾರ ಮಾಡಿಕೊಂಡ ಮನವಿಯನ್ನು ಒಪ್ಪದ ವಿವಿಧ ಆಟೋ ಸಂಘಟನೆಗಳು ಬೇಡಿಕೆ ಈಡೇರಿಸಲೇಬೇಕೆಂದು ಪಟ್ಟು ಹಿಡಿದಿದ್ದಾರೆ.
ಆಟೋ ಚಾಲಕರಿಗೆ ನ್ಯಾಯ ಒದಗಿಸಬೇಕು, ಕಾನೂನು ಬಾಹಿರವಾಗಿ ಬೈಕ್ ಟ್ಯಾಕಿ, ಸಂಚಾರ ಲ್ಯಾಪಿಡೋ ಬೈಕ್ ಟ್ಯಾಕ್ಸಿಯಿಂದ ಆಟೋ ಚಾಲಕ ರಿಗೆ ಬಾಡಿಗೆ ಸರಿಯಾಗಿ ಸಿಗುತ್ತಿಲ್ಲ, ನ್ಯಾಯಬದ್ಧ ವಾಗಿ ಸರ್ಕಾರಕ್ಕೆ ಕಳೆದ 60 ವರ್ಷಗಳಿಂದ ತೆರಿಗೆ ಕಟ್ಟುತ್ತಿದ್ದೇವೆ.
20 ವರ್ಷದಿಂದ ಮನೆಯಲ್ಲೇ ಬಂಧಿಯಾಗಿದ್ದ ಅಣ್ಣ-ತಂಗಿಯ ರಕ್ಷಣೆ
ಆದರೆ ಕಾನೂನುಬಾಹಿರವಾಗಿ ಬೈಕ್, ಟ್ಯಾಕ್ಸಿಗಳು ಸೇವೆ ನೀಡುತ್ತಿದ್ದರೂ ರಾಜ್ಯ ಸರ್ಕಾರ ಕ್ರಮಕೈಗೊಳ್ಳದೆ ಕಾಪೆರ್ರೇಟ್ ಕಂಪನಿಗಳ ಪರವಾಗಿ ನಿಂತಿದೆ. ಇದರಿಂದ ಆಟೋ ಚಾಲಕರ ಜೀವನ ದುಸ್ತರವಾಗಿದೆ. ಕೂಡಲೇ ಬೈಕ್ ಸೇವೆ ನೀಡುತ್ತಿರುವ ಕಂಪನಿಗಳ ವಿರುದ್ಧ ಸರ್ಕಾರ ಕ್ರಮಕೈಗೊಂಡು ಆಟೋ ಚಾಲಕರಿಗೆ ನ್ಯಾಯ ಒದಗಿಸಬೇಕು ಎಂದು ಆಟೋ ಸಂಘಟನೆಗಳು ಆಗ್ರಹಿಸಿವೆ.
ಕಾನೂನು ಬಾಹಿರ ವೈಟ್‍ಬೋರ್ಡ್ ಟ್ಯಾಕ್ಸಿ ರದ್ದು ಮಾಡಬೇಕು, ರಾಪಿಡೋ ಸೇರಿದಂತೆ ವಿವಿಧ ಬೈಕ್ ಟ್ಯಾಕ್ಸಿ ಸೇವೆಯನ್ನು ನಿಷೇಧಿಸುವಂತೆ ಆಗ್ರಹಿಸಿ ಇಂದಿನಿಂದ ಮೂರು ದಿನಗಳ ಗಡುವು ನೀಡಿರುವ ಅವರು, ತಮ್ಮ ವಾಹನಗಳಿಗೆ ಕಪ್ಪುಬಾವುಟ ಕಟ್ಟಿ ಪ್ರತಿಭಟನೆ ನಡೆಸಿದ್ದು ತಮ್ಮ ಬೇಡಿಕೆ ಈಡೇರದಿದ್ದರೆ ನಾಳೆ ಆಟೋ ಸೇವೆ ಬಂದ್ ಮಾಡುವುದಾಗಿ ಎಚ್ಚರಿಸಿದ್ದಾರೆ.
ಪಂಜಾಬ್‍ನಲ್ಲಿ ಇಂಟರ್ನೆಟ್ ಸ್ಥಗಿತ : ಅಮೃತಪಾಲ್ ಬಂಧನಕ್ಕೆ ಶೋಧ
ಸರ್ಕಾರ ಬೈಕ್, ಟ್ಯಾಕ್ಸಿಗಳನ್ನು ನಿಷೇಧಿಸದಿದ್ದರೆ ನಾಳೆ 24 ಗಂಟೆಗಳ ಕಾಲ ಆಟೋ ಸೇವೆ ಬಂದ್ ಮಾಡಿ ಮುಖ್ಯಮಂತ್ರಿಗಳ ಮನೆ ಮುತ್ತಿಗೆ ಹಾಕಲಾಗುವುದು ಎಂದು ಸಿಐಟಿಯು ಆಟೋ ರಿಕ್ಷಾ ಡ್ರೈವರ್ಸ್ ಯುನಿಯನ್ ಅಧ್ಯಕ್ಷ ಸಿ.ಎನ್ ಶ್ರೀನಿವಾಸ್ ಎಚ್ಚರಿಕೆ ನೀಡಿದ್ದಾರೆ.
ಆಟೋ ಚಾಲಕರಿಗೆ ಬೈಕ್ ಟ್ಯಾಕ್ಸಿಗಳಿಂದ ಸಾಕಷ್ಟು ಅನ್ಯಾಯವಾಗುತ್ತಿದೆ. ಈ ಕುರಿತು ಸರ್ಕಾರದ ಗಮನ ಸೆಳೆಯಲು ಇಂದು ರಾತ್ರಿ 12 ಗಂಟೆಯಿಂದ ಸೋಮವಾರ ರಾತ್ರಿ 12ರವರೆಗೆ ಆಟೋ ಸೇವೆ ಬಂದ್ ಮಾಡಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.
ಒಂದು ವೇಳೆ ರಾಜ್ಯ ಸರ್ಕಾರ ಯಾವುದೇ ನಿರ್ಧಾರವನ್ನು ಕೈಗೊಳ್ಳದಿದ್ದರೆ ಈ ಮುಷ್ಕರವನ್ನು ಅನಿರ್ದಿಷ್ಟಾವಧಿಗೆ ವಿಸ್ತರಿಸುತ್ತೇವೆ. ಮುಂದೆ ಆಗುವ ಅನಾಹುತಗಳಿಗೆ ರಾಜ್ಯ ಸರ್ಕಾರವೇ ನೇರ ಹೊಣೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ 21 ಆಟೋ ಚಾಲಕರ ಸಂಘಟನೆಗಳಿದ್ದು, ಎಲ್ಲ ಸಂಘಟನೆಗಳು ಈ ಬಂದ್‍ನಲ್ಲಿ ಪಾಲ್ಗೊಳ್ಳಲಿವೆ. ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸೇರಿ ವಿವಿಧ ಕನ್ನಡಪರ ಸಂಘಟನೆಗಳು ಬೆಂಬಲ ನೀಡಿವೆ ಎಂದು ತಿಳಿಸಿದ್ದಾರೆ.
Bengaluru, autorickshaw, drivers, strike, Monday, protest, against, bike, taxis,