ಬೆಂಗಳೂರು, ಮಾ. 15- ಮುಕ್ತ ವಾತಾವರಣದಲ್ಲಿ ನಗರದಲ್ಲಿ ಚುನಾವಣೆ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಪ್ರತಾಪ್ ರೆಡ್ಡಿ ಇಂದಿಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡು ತ್ತಿದ್ದ ಅವರು, ಈಗಾಗಲೇ ಭಾರತ ಚುನಾವಣಾ ಆಯೋಗದ ಮುಖ್ಯ ಆಯುಕ್ತರು ಹಾಗೂ ಕರ್ನಾಟಕ ಚುನಾವಣಾ ಆಯೋಗದ ಮುಖ್ಯಸ್ಥರು ಸಭೆ ನಡೆಸಿ ಕೆಲವು ಸಲಹೆ, ಸೂಚನೆಗಳನ್ನು ನೀಡಿದ್ದಾರೆ. ನಾವು ಸಭೆ ನಡೆಸಿ ಅವರು ನೀಡಿರುವ ಸಲಹೆ, ಸೂಚನೆಗಳನ್ನು ನಮ್ಮ ಠಾಣಾ ಇನ್ಸ್‍ಪೆಕ್ಟರ್‍ಗಳು ಸೇರಿದಂತೆ ಎಲ್ಲಾ ಅಧಿಕಾರಿಗಳಿಗೂ ಈಗಾಗಲೇ ತಿಳಿಸಿದ್ದೇವೆ ಎಂದರು.
ಚುನಾವಣಾ ಸಂದರ್ಭದಲ್ಲಿ ಯಾವ ಯಾವ ರೀತಿಯ ಕ್ರಮಗಳನ್ನು ಜರುಗಿಸಬೇಕು ಎಂಬುದನ್ನು ಹೇಳಿದ್ದೇವೆ. ಚುನಾವಣೆಗೆ ಬೇಕಾದ ಬಂದೋಬಸ್ತ್‍ಗೆ ಯಾವ ರೀತಿ ತಯಾರಿ ಮಾಡಿಕೊಳ್ಳಬೇಕು ಎಂಬುದನ್ನು ಸಹ ತಿಳಿಸಲಾಗಿದೆ ಎಂದು ಹೇಳಿದರು.
ಒಟ್ಟಾರೆ ಚುನಾವಣೆಗೆ ಮುಕ್ತ ವಾತಾವರಣ ಕಲ್ಪಿಸಲು ಎಲ್ಲಾ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಚೆಕ್‍ಪೋಸ್ಟ್‍ಗಳನ್ನು ತೆರೆಯುತ್ತೇವೆ. ರೌಡಿಗಳ ಮೇಲೆ ನಿಗಾ ಇಡಲಾಗುತ್ತದೆ.
ಅಲ್ಲದೆ, ಆರೋಪಿಗಳ ಮೇಲೆ ವಾರೆಂಟ್ ಜಾರಿ ಮಾಡುತ್ತೇವೆ ಎಂದು ಅವರು ತಿಳಿಸಿದರು.ಆರೋಪಿಗಳ ವಿರುದ್ಧ ವಾರೆಂಟ್ ಜಾರಿಯಾಗಿದ್ದರೆ ನಾವು ವಾರೆಂಟ್ ಜಾರಿ ಮಾಡಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುತ್ತೇವೆ.
ಕೆಲವು ಆರೋಪಿಗಳು ಜೈಲಿನಿಂದ ಹೊರ ಬಂದ ನಂತರವೂ ತಮ್ಮ ಹಳೇ ಚಾಳಿ ಮುಂದುವರೆಸಿ ಅಪರಾಧಗಳಲ್ಲಿ ಭಾಗಿಯಾದರೆ ಅವರನ್ನು ಬಂಧಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಪ್ರತಾಪ್ ರೆಡ್ಡಿ ಹೇಳಿದರು.
Bengaluru, City, Police Commissioner, Pratap Reddy, elections, preparations,